ಕೊಪ್ಪಳ: ಕೊರೊನಾ ಸೋಂಕಿನ 2ನೇ ಅಲೆ ಮಧ್ಯೆಯೂ ಯುಗಾದಿ ಸಂಭ್ರಮ ಕಂಡುಬಂತು. ಮಾರುತೇಶ್ವರರ ಮೂರ್ತಿ ಮೆರವಣಿಗೆ, ಲಘು ರಥೋತ್ಸವ, ದೀರ್ಘದಂಡ ನಮಸ್ಕಾರ ಸೇರಿದಂತೆ ಪೂರ್ವಜರ ಸಂಪ್ರದಾಯದಂತೆ ಮುಳ್ಳಿನ ಹರಕೆಯ ಮೆರವಣಿಗೆಯೂ ಸಂಭ್ರಮ, ಸಡಗರದಿಂದ ಜರುಗಿತು.
ತಾಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ಯುಗಾದಿ ಪ್ರಯುಕ್ತ ಮಾರುತೇಶ್ವರ ದೇವಸ್ಥಾನದಲ್ಲಿ 3 ದಿನದ ಸಂಭ್ರಮದ ಕಾರ್ಯಕ್ರಮಗಳು ನಡೆದವು. ಅಮವಾಸ್ಯೆಯ ದಿನದಂದು ವಿಶೇಷ ಪೂಜಾ ಕಾರ್ಯಕ್ರಮ ಜರುಗಿದರೆ, ಪಾಡ್ಯದ ದಿನದಂದು ಗ್ರಾಮದ ಹಲವು ಭಕ್ತರು ದೀರ್ಘದಂಡ ನಮಸ್ಕಾರ ಹಾಕಿದರು.
ಮಂಗಳವಾರ ಸಂಜೆ ಲಘು ರಥೋತ್ಸವ ಜರುಗಿದರೆ, ಬುಧವಾರ ಬೆಳಗ್ಗೆಯಿಂದ ಮಾರುತೇಶ್ವರ ದೇವಸ್ಥಾನದಲ್ಲಿ ಡೊಳ್ಳಿನ ಮಜಲು, ಮಧ್ಯಾಹ್ನದ ವೇಳೆಗೆ ಕಾರಿ ಮುಳ್ಳು ತರಲು ಊರಿನ ಸೀಮೆಗೆ ತೆರಳುವುದು, ಮಧ್ಯಾಹ್ನದ ವೇಳೆಗೆ ಗ್ರಾಮದ ರಾಜ ಬೀದಿಯುದ್ದಕ್ಕೂ ಮುಳ್ಳಿನ ಹರಕೆಯ ಮೆರವಣಿಗೆ ಸಂಭ್ರಮದಿಂದ ಜರುಗಿತು.
ಹಲವು ಭಕ್ತರು ಮನೆಯ ಮಾಳಿಗೆ ಮೇಲಿನಿಂದ ಮುಳ್ಳಿನ ಕೊಂಪೆಯಲ್ಲಿ ಜಿಗಿಯುವ ಮೂಲಕ ಭಕ್ತಿಯ ಪರಾಕಾಷ್ಠೆ ತೋರಿದರು. ಸಂಜೆ ಹೊಂಡ ಹಾರುವ ಕಾರ್ಯಕ್ರಮ ಜರುಗಿತು. ಇದಲ್ಲದೇ ತಾಲೂಕಿನ ಭಾಗ್ಯನಗರ, ಬಿಕನಹಳ್ಳಿ ಸೇರಿದಂತೆ ಇತರೆ ಗ್ರಾಮಗಳಲ್ಲಿಯೂ ಯುಗಾದಿ ಹಬ್ಬದ ಸಂದರ್ಭದಲ್ಲಿ ಬ್ಯಾಟಿ ಗಿಡ, ಮುಳ್ಳಿನ ಹರಕೆಯಲ್ಲಿ ಮಕ್ಕಳು ಹಾರುವ ಮೂಲಕ ಭಕ್ತಿ ತೋರಿದರು. ನಿಯಮ ಉಲ್ಲಂಘಿಸಿ ಕೋವಿಡ್ ಸೋಂಕನ್ನೂ ಮರೆತು ಜನರು ಹಬ್ಬದಲ್ಲಿ ತೊಡಗಿದರು.
ಹಲಗೇರಿಯಲ್ಲಿ ಲಘು ರಥೋತ್ಸವ: ಹಲಗೇರಿ ಗ್ರಾಮದಲ್ಲಿ ಬುಧವಾರ ಸಂಜೆ ಉಚ್ಛಾಯಿ (ಲಘು ರಥೋತ್ಸವ) ಜರುಗಿತು. ಲಘು ರಥೋತ್ಸವದ ಮುನ್ನ ದೇವಿಗೆ ಉಡಿ ತುಂಬಿ ಗ್ರಾಮಕ್ಕೆ ಮಳೆ ಬೆಳೆ ಕರುಣಿಸು ಎಂದು ಪ್ರಾರ್ಥಿಸಿದರು. ಉಡಿ ತುಂಬವ ಕಾರ್ಯಕ್ರಮದಲ್ಲಿ ನಾರಿಯರು ಪಾಲ್ಗೊಂಡಿದ್ದರು.