Advertisement

ಗದಗ ಜಿಲ್ಲಾದ್ಯಂತ ಸಂಭ್ರಮದ ಯುಗಾದಿ

07:48 PM Apr 15, 2021 | Team Udayavani |

ಲಕ್ಷ್ಮೇಶ್ವರ: ಕೋವಿಡ್ ಭೀತಿಯ ನಡುವೆಯೂ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಾರಿಗೆ ಮುಷ್ಕರದ ನಡುವೆಯೂ ಯುಗಾದಿ ಹಬ್ಬದ ಆಚರಣೆಗಾಗಿ ಗ್ರಾಮೀಣ ಪ್ರದೇಶಗಳ ಜನರು ಖಾಸಗಿ ವಾಹನಗಳಲ್ಲಿ ಆಗಮಿಸಿ ಹಬ್ಬಕ್ಕೆ ಬೇಕಾದ ಎಲ್ಲ ವಸ್ತುಗಳನ್ನು ಖರೀದಿಸಿದರು.

Advertisement

ಮಂಗಳವಾರ ಯುಗಾದಿ ಪಾಡ್ಯದಂದು ಬೆಳಿಗ್ಗೆ ಎಲ್ಲರೂ ಹೊಸ ಉಡುಗೆ ತೊಟ್ಟು ಶ್ರದ್ಧಾಭಕ್ತಿಯಿಂದ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಹಿರಿಯರಿಗೆ ನಮಸ್ಕರಿಸಿ, ಬೇವು-ಬೆಲ್ಲ ಹಂಚಿ ಸವಿದರು. ವಿಶೇಷವಾಗಿ ರೈತರು ನಸುಕಿನಲ್ಲಿಯೇ ತಮ್ಮ ಜೀವನಾಡಿ ಎತ್ತುಗಳ ಮೈತೊಳೆದು, ಶೃಂಗರಿಸಿ, ಹೊಲಕ್ಕೆ ತೆರಳಿ ಭೂಮಿತಾಯಿ, ಕೃಷಿ ಪರಿಕರಗಳಿಗೆ ಪೂಜೆ ಸಲ್ಲಿಸಿ ಕೃಷಿ ಚಟುವಟಿಕೆಗಳಿಗೆ ಸಾಂಕೇತಿಕ ಚಾಲನೆ ನೀಡಿದರು. ವ್ಯಾಪಾರಸ್ಥರು ಅಂಗಡಿ-ಮುಂಗಟ್ಟುಗಳಿಗೆ ಪೂಜೆ ಸಲ್ಲಿಸಿದರು. ಕೆಲವರು ಹೊಸ ವ್ಯವಹಾರ ಪ್ರಾರಂಭಿಸಿದರೆ, ಅನೇಕರು ಹೊಸ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.

ಹೊಸ ವರ್ಷದ ದಿನ ಆಭರಣ, ಬಟ್ಟೆ, ಇಲೆಕ್ಟ್ರಾನಿಕ್‌, ಹೊಸ ವಾಹನ ಖರೀದಿ, ಭೂಮಿ ಪೂಜೆ ಇತರೆಲ್ಲ ಶುಭ ಕಾರ್ಯಗಳನ್ನು ಕೈಗೊಂಡರು. ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಜಾತ್ರೆ, ಉತ್ಸವ, ಪೂಜೆಗಳು ನಿರ್ವಿಘ್ನವಾಗಿ ನೆರವೇರಿದವು. ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಶ್ರೀಮಠದ ಜಮೀನಿನಲ್ಲಿ ಪೂಜಾ ಕಾರ್ಯ ನೆರವೇರಿಸಿ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಿದರು.

ಈ ವೇಳೆ ಶುಭಾಶೀರ್ವಾದ ಸಂದೇಶ ನೀಡಿದ ಅವರು, ಈ ವರ್ಷ ಉತ್ತಮ ಮಳೆ, ಬೆಳೆಯಾಗಿ ಜಗತ್ತಿನ ಸಕಲ ಜೀವರಾಶಿಗಳಿಗೆ ಅನ್ನ ನೀಡುವ ಅನ್ನದಾತನ ಬದುಕು ಹಸನಾಗಲಿ. ಕೃಷಿ ನಮ್ಮ ಸಂಸ್ಕೃತಿ. ಈ ಬಗ್ಗೆ ಯಾರಲ್ಲೂ ಕೀಳರಿಮೆ ಬೇಡ. ಕೃಷಿಯಲ್ಲಿ ಹೆಮ್ಮೆಯಿಂದ ತೊಡಗಿಸಿಕೊಳ್ಳಬೇಕು. ಭೂಮಿತಾಯಿ ನಂಬಿ ಬದುಕಿದವರಿಗೆ ಎಂದೂ ಕೇಡಾಗಲ್ಲ. ರೈತರು ಸಾವಯವ ಕೃಷಿಯತ್ತ ಚಿತ್ತ ಹರಿಸಬೇಕು. ಪ್ಲವ ನಾಮ ನವ ಸಂವತ್ಸರ ಎಲ್ಲರ ಬಾಳಲ್ಲಿ ಸಂಭ್ರಮ ತರಲಿ ಎಂದು ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next