ಮುಂಬಯಿ: ಪಾಡ್ ಕಾಸ್ಟ್ ಮೂಲಕ ಅಪಾರ ಜನಪ್ರಿಯತೆಯನ್ನು ಪಡೆದಿರುವ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ (Ranveer Allahbadia) ಅವರ ಯೂಟ್ಯೂಬ್ ಖಾತೆಗೆ ಹ್ಯಾಕರ್ಸ್‌ಗಳು ಲಗ್ಗೆ ಇಟ್ಟಿದ್ದಾರೆ ಎಂದು ವರದಿಯಾಗಿದೆ.
ಬೀರ್‌ಬೈಸೆಪ್ಸ್ (Beer Biceps) ಎನ್ನುವ ಯೂಟ್ಯೂಬ್ ಚಾನೆಲ್ ನಿಂದಲೇ ಹೆಚ್ಚು ಪರಿಚಿತರಾಗಿರುವ ರಣವೀರ್ ಅಲ್ಲಾಬಾಡಿಯಾ ಅವರ ವಿಡಿಯೋಗಳಿಗೆ ಲಕ್ಷಾಂತರ ವೀಕ್ಷಕರಿದ್ದಾರೆ.
ನಾನಾ ಕ್ಷೇತ್ರದ ಖ್ಯಾತ ಸೆಲೆಬ್ರಿಟಿಗಳು ಹಾಗೂ ಸಾಧಕರ ಜತೆ ಪಾಡ್ ಕಾಸ್ಟ್ ವಿಡಿಯೋಗಳನ್ನು ಮಾಡುವ ರಣವೀರ್ ಅಲ್ಲಾಬಾಡಿಯಾ ಭಾರತದ ಜನಪ್ರಿಯ ಯೂಟ್ಯೂಬರ್ ಗಳಲ್ಲಿ ಒಬ್ಬರು.
ಬುಧವಾರ ರಾತ್ರಿ 11:30ರ ಹೊತ್ತಿಗೆ ರಣವೀರ್ ಅಲ್ಲಾಬಾಡಿಯಾ ಅವರ ʼಬೀರ್‌ಬೈಸೆಪ್ಸ್ʼ ಹಾಗೂ ಮತ್ತೊಂದು ಚಾನೆಲ್ ಹ್ಯಾಕ್ ಆಗಿದೆ. ಅವರ ಖಾತೆಯ ಮೇಲೆ ಹ್ಯಾಕರ್ಸ್ ಕಣ್ಣಿಟ್ಟಿದ್ದು ಅವರ ಪಾಡ್ ಕಾಸ್ಟ್ ವಿಡಿಯೋಸ್ ಎಲ್ಲವನ್ನೂ ಡಿಲೀಟ್ ಮಾಡಿ ಎಲೋನ್ ಮಸ್ಕ್ ಮತ್ತು ಡೊನಾಲ್ಡ್ ಟ್ರಂಪ್ ಅವರ ಹಳೆಯ ವಿಡಿಯೋಗಳನ್ನು ಹಾಕಲಾಗಿದೆ. ರಣವೀರ್ ಚಾನೆಲ್ ಹೆಸರನ್ನು “@Tesla.event.trump_2024” ಎಂದು ಬದಲಿಸಲಾಗಿದೆ.
ಸದ್ಯ ಯೂಟ್ಯೂಬ್‌ನಲ್ಲಿ ಅವರ ಚಾನೆಲ್ ಹೆಸರು ಹಾಕಿ ಸರ್ಚ್ ಮಾಡಿದರೆ ಯಾವ ಮಾಹಿತಿಯೂ ಲಭ್ಯವಾಗುವುದಿಲ್ಲ.
ಈ ಬಗ್ಗೆ ರಣವೀರ್ ಅವರು ಪ್ರತಿಕ್ರಿಯೆ ನೀಡಿದ್ದು, ಕಣ್ಣಿಗೆ ಮಸ್ಕ್ ವೊಂದನ್ನು ಹಾಕಿಕೊಂಡು, “ಇದು ನನ್ನ ಯೂಟ್ಯೂಬ್ ವೃತ್ತಿಜೀವನದ ಅಂತ್ಯವೇ?” ಎಂದು ಪ್ರಶ್ನೆ ಹಾಕಿರುವ ಫೋಟೋವೊಂದನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
“ನನ್ನ ಮೆಚ್ಚಿನ ಆಹಾರದೊಂದಿಗೆ ನನ್ನ ಎರಡು ಮುಖ್ಯ ಚಾನಲ್‌ಗಳು ಹ್ಯಾಕ್ ಆಗಿರುವುದನ್ನು ಸಂಭ್ರಮಿಸುತ್ತಿದ್ದೇನೆ. ವೆಗಾನ್ ಬರ್ಗರ್ಸ್,” ಎಂದು ಸಿಂಗಾಪುರದಿಂದ ಮುಂಬೈಗೆ ಹಿಂದಿರುಗಿದ ಬಳಿಕ ಅವರು ಸ್ಟೋರಿ ಹಂಚಿಕೊಂಡಿದ್ದಾರೆ.
22ರ ವಯಸ್ಸಿನಲ್ಲಿ ʼಬೀರ್‌ಬೈಸೆಪ್ಸ್ʼ ಚಾನೆಲ್ ಶುರು ಮಾಡಿದ ರಣವೀರ್ ಒಟ್ಟು 7 ಯೂಟ್ಯೂಬ್ ಚಾನೆಲ್ ಗಳನ್ನು ಹೊಂದಿದ್ದು ಒಟ್ಟು 12 ಮಿಲಿಯನ್ ಸಬ್ ಸ್ಕೈಬರ್ಸ್ ರನ್ನು ಹೊಂದಿದ್ದಾರೆ.
ಸದ್ಯ ರಣವೀರ್ ತಮ್ಮ ಚಾನಲ್‌ಗಳನ್ನು ಮರುಪಡೆಯಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಇದೊಂದು ಪಬ್ಲಿಕ್ ಸ್ಟಂಟ್ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಇದು ಯಾವುದೇ ಗಿಮಿಕ್ ಅಲ್ಲ ಚಾನೆಲ್ ಹ್ಯಾಕ್ ಆಗಿರುವುದು ನಿಜವೆಂದು ರಣವೀರ್ ಹೇಳಿದ್ದಾರೆ.