ಹಾವೇರಿ: ಕೋವಿಡ್ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಜಿಮ್ ಬಂದ್ ಮಾಡಲಾಗಿತ್ತು. ಸರ್ಕಾರ ಆ.5 ರಿಂದ ಜಿಮ್‌ಗಳನ್ನು ತೆರೆಯಲು ಅನುಮತಿ ನೀಡಿದ್ದರಿಂದ ಮತ್ತೆ ಯುವಕರು ಜಿಮ್ ಗಳ ಮೊರೆ ಹೋಗುತ್ತಿದ್ದು, ಜಿಮ್‌ಗಳಲ್ಲಿ ದೈಹಿಕ ಕಸರತ್ತು ನಡೆಸುವ ಯುವಕರ ಸಂಖ್ಯೆ ಹೆಚ್ಚುತ್ತಿದೆ.
ಕೋವಿಡ್ ಆತಂಕದಿಂದ ಲಾಕ್‌ಡೌನ್ ಘೋಷಿಸಿದ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿನ ಮಲ್ಟಿ ಜಿಮ್‌ಗಳನ್ನು ಬಂದ್ ಮಾಡಲಾಗಿತ್ತು. ಲಾಕ್‌ಡೌನ್ ಸಡಿಲಗೊಳಿಸಿದ ನಂತರವೂ ಜಿಮ್ ತೆರೆಯಲು ಸರ್ಕಾರ ಅನುಮತಿ ನೀಡಿರಲಿಲ್ಲ. ಆದರೆ ಆ.5 ರಿಂದ ಜಿಮ್ ತೆರೆಯಲು ಅನುಮತಿ ದೊರಕಿದ್ದರಿಂದ ಜಿಲ್ಲೆಯಲ್ಲಿನ ಜಿಮ್ ಗಳನ್ನು ತೆರೆಯಲಾಗಿದೆ. ಆದರೆ ಕೊರೊನಾ ಆತಂಕದ ಮಧ್ಯೆಯೂ ಜಿಮ್ ತೆರೆದಿದ್ದರಿಂದ ಆರಂಭದ ದಿನಗಳಲ್ಲಿ ಯುವಕರು ಅಷ್ಟಾಗಿ ಆಸಕ್ತಿ ತೋರಿರಲಿಲ್ಲ. ಆದರೆ, ದಿನಕಳೆದಂತೆ ಜಿಮ್‌ಗೆ ಆಗಮಿಸುವವರ ಸಂಖ್ಯೆ ಕ್ರಮೇಣವಾಗಿ ಹೆಚ್ಚುತ್ತಿರುವುದು ಕಂಡು ಬರುತ್ತಿದೆ.
ಜಿಲ್ಲೆಯಲ್ಲಿ ಸುಮಾರು 70ಕ್ಕೂ ಹೆಚ್ಚು ಜಿಮ್ ಗಳಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಸುರಕ್ಷತಾ ಕ್ರಮ ಕೈಗೊಂಡು ಜಿಮ್‌ಗಳನ್ನು ತೆರೆಯಲಾಗಿದೆ. ಕಡ್ಡಾಯವಾಗಿ ನಿತ್ಯ ಸ್ಯಾನಿಟೈಸ್ ಮಾಡುವುದು, ಜಿಮ್‌ಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಬಹುತೇಕ ಜಿಮ್‌ಗಳಲ್ಲಿ ಅನುಸರಿಸಲಾಗುತ್ತಿದೆ. ಹೀಗಾಗಿ, ಯುವಕರಲ್ಲಿ ಆರೋಗ್ಯ ಸುರಕ್ಷತೆ ಬಗ್ಗೆ ವಿಶ್ವಾಸ ಮೂಡಿದ್ದು, ಜಿಮ್ ಗೆ ತೆರಳುವ ಯುವಕರ ಸಂಖ್ಯೆ ಮೊದಲಿನಂತೆ ಕಂಡು ಬರುತ್ತಿದೆ. ಕೆಲವು ತಿಂಗಳಿನಿಂದ ಜಿಮ್ ಮುಚ್ಚಿದ್ದರಿಂದ ದೈಹಿಕ ಕಸರತ್ತು ನಡೆಸಲು ಯುವಕರು ತೀವ್ರ ಸಮಸ್ಯೆ ಎದುರಿಸುವಂತಾಗಿತ್ತು. ಹೀಗಾಗಿ, ಅನೇಕ ಯುವಕರು ತಮ್ಮ ಮನೆಗಳಲ್ಲಿಯೇ ತಕ್ಕಮಟ್ಟಿಗೆ ದೈಹಿಕ ಕಸರತ್ತು ನಡೆಸಿ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು. ಆದರೆ ಜಿಮ್‌ಗಳಲ್ಲಿ ಸಿಗುತ್ತಿದ್ದ ದೈಹಿಕ ವ್ಯಾಯಾಮ ಮನೆಗಳಲ್ಲಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಹೆಚ್ಚಾಗಿ ಯುವಕರು ಮತ್ತೆ ಜಿಮ್ ಗಳತ್ತ ಮುಖ ಮಾಡುತ್ತಿದ್ದು, ನಿತ್ಯ ವಿವಿಧ ರೀತಿಯ ದೈಹಿಕ ಕಸರತ್ತು ನಡೆಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗುತ್ತಿದ್ದಾರೆ.
ನಗರದಲ್ಲಿರುವ ಜಿಮ್‌ಗಳಲ್ಲಿ ನಿತ್ಯ ನೂರಾರು ಯುವಕರು ದೈಹಿಕ ಕಸರತ್ತು ಆರಂಭಿಸಿದ್ದು, ದಿನದಿಂದ ದಿನಕ್ಕೆ ಜಿಮ್‌ಗಳಿಗೆ ಬರುವವರ ಸಂಖ್ಯೆ ಕ್ರಮೇಣವಾಗಿ ಹೆಚ್ಚುತ್ತಿದೆ. ಕೆಲವು ಜಿಮ್‌ಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆ 8-10 ಜನರ ಬ್ಯಾಚ್ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಂಡು ತರಬೇತಿ ನೀಡಲಾಗುತ್ತಿದೆ. ಜಿಮ್‌ಗೆ ಬರುವವರ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಜಿಮ್ ಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಿದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡು ಯುವಕರಿಗೆ ದೈಹಿಕ ಕಸರತ್ತು ನಡೆಸಲು ಅವಕಾಶ ಮಾಡಿಕೊಡಲಾಗಿದೆ.
ಅಲ್ಲದೇ, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ. ಬೆಳಗ್ಗೆ ಹಾಗೂ ಸಂಜೆ ವೇಳೆ 8-10 ಯುವಕರ ಬ್ಯಾಚ್ ಮಾಡಿ ತರಬೇತಿ ನೀಡಲಾಗುತ್ತಿದೆ. ಜಿಮ್ ತೆರೆದ ಆರಂಭದ ದಿನಗಳಲ್ಲಿ ಯುವಕರು ಅಷ್ಟಾಗಿ ಆಸಕ್ತಿ ತೋರಿರಲಿಲ್ಲ. ಆದರೆ ದಿನಗಳೆದಂತೆ ಜಿಮ್‌ಗೆ ಬರುವವರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ ಎಂದು ನಗರದ ರಾಕ್ ಮಲ್ಟಿಜಿಮ್ ಮಾಲೀಕ ರಾಕೇಶ ಎಸ್. ಹೇಳುತ್ತಾರೆ.
ಹಾವೇರಿ ನಗರದಲ್ಲಿ ಸುಮಾರು 6 ಜಿಮ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ ಸುಮಾರು 70ಕ್ಕೂ ಹೆಚ್ಚು ಜಿಮ್‌ಗಳಿವೆ. ಕೋವಿಡ್ ಆತಂಕದ ಧ್ಯೆಯೂ ಮನೆಯಲ್ಲಿಯೇ ಯೋಗ, ದೈಹಿಕ ಕಸರತ್ತು ನಡೆಸುತ್ತಿದ್ದ ಯುವಕರು ಮತ್ತೆ ಜಿಮ್‌ಗಳತ್ತ ಮುಖ ಮಾಡುತ್ತಿದ್ದಾರೆ.
ಸರ್ಕಾರದ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಿ ಜಿಮ್ ತೆರೆಯಲಾಗಿದೆ. ಯುವಕರ ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಜಿಮ್ ತೆರದ ಆರಂಭದಲ್ಲಿ ಯುವಕರ ಸಂಖ್ಯೆ ಕಡಿಮೆ ಇತ್ತು. ಆದರೆ ಈಗ ಯುವಕರ ಸಂಖ್ಯೆ ಹೆಚ್ಚುತ್ತಿದೆ.
– ರಾಕೇಶ ಎಸ್., ರಾಕ್ ಜಿಮ್ ತರಬೇತುದಾರ
ಕೋವಿಡ್ ಲಾಕ್‌ಡೌನ್ ದಿನಗಳಲ್ಲಿ ಜಿಮ್ ಬಂದ್ ಮಾಡಿದ್ದರಿಂದ ತೊಂದರೆಯಾಗಿತ್ತು. ಆದರೆ, ಸದ್ಯ ಜಿಮ್ ತೆರೆಯಲು ಸರ್ಕಾರ ಅನುಮತಿ ನೀಡಿದ್ದರಿಂದ ಸುರಕ್ಷತಾ ಕ್ರಮ ಅನುಸರಿಸುವ ಮೂಲಕ ಜಿಮ್‌ಗಳಲ್ಲಿ ವರ್ಕ್‌ಔಟ್ ಮಾಡಲಾಗುತ್ತಿದೆ.
-ವಿನಯ ಪಾಟೀಲ, ಹಾವೇರಿ
-ವೀರೇಶ ಮಡ್ಲೂರ