Advertisement

ಯುವಕರು ಆರ್ಥಿಕತೆ, ಅಭಿವೃದ್ಧಿಯ ಚಾಲಕರು: ರಾಜ್ಯಪಾಲ ಗೆಹ್ಲೋಟ್

04:32 PM Apr 28, 2022 | Team Udayavani |

ಬೀದರ್: ಯುವಕರು ಈ ದೇಶದ ಆರ್ಥಿಕತೆ ಮತ್ತು ಅಭಿವೃದ್ಧಿಯ ಚಾಲಕರು. ದೇಶದ ಯಶಸ್ಸು, ನಾವು ನಮ್ಮ ಯುವಕರನ್ನು ಶಿಕ್ಷಣ, ಕೌಶಲ್ಯ ಮತ್ತು ಮೌಲ್ಯಗಳ ಮೂಲಕ ಉತ್ಪಾದಕ ಮಾನವ ಸಂಪನ್ಮೂಲಗಳಾಗಿ ಹೇಗೆ ಪರಿವರ್ತಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ಪಶು ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.

Advertisement

ಇಲ್ಲಿನ ನಂದಿ ನಗರದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ವಿವಿ 12ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಮತ್ತು ಪದಕ ವಿತರಿಸಿ ಮಾತನಾಡಿದ ಅವರು, ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ನಾವು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದು. ಬಡತನ, ನಿರುದ್ಯೋಗ ಮತ್ತು ಹಸಿವು ಅಂಥ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು. ಪಶು ವಿವಿಯ ಪದವೀಧರರು ವಿಜ್ಞಾನದ ಜ್ಞಾನವನ್ನು ಬಳಸಿಕೊಂಡು ಸಮಾಜದಲ್ಲಿ ಪರಿವರ್ತನೆಯನ್ನು ತರುವ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದರು.

ಭಾರತದ ಆರ್ಥಿಕತೆಯಲ್ಲಿ ಜಾನುವಾರುಗಳು ಪ್ರಮುಖ ಪಾತ್ರ ವಹಿಸುತ್ತವೆ. ತಮ್ಮ ಮುಖ್ಯ, ಪೂರಕ ಆದಾಯಕ್ಕಾಗಿ ಮತ್ತು ಸುಸ್ಥಿರ ಜೀವನೋಪಾಯಕ್ಕಾಗಿ ಜಾನುವಾರು ಸಾಕಾಣಿಕೆ ಕೈಗೊಳ್ಳುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ಪಶುವೈದ್ಯರ ಪಾತ್ರ ಪ್ರಮುಖ ಎಂದು ಒತ್ತಿ ಹೇಳಿದ ರಾಜ್ಯಪಾಲರು, ಪದವೀಧರ ವಿದ್ಯಾರ್ಥಿಗಳು ತಮ್ಮ ಸೇವೆಯನ್ನು ಮುಂದಿನ ದಿನಗಳಲ್ಲಿ ಸಂಶೋಧನೆ ಹಾಗೂ ರೈತಾಪಿ ವರ್ಗದವರ ಕಲ್ಯಾಣಕ್ಕಾಗಿ ಶ್ರಮಿಸಲು ಕರೆ ನೀಡಿದರು.

ಇದನ್ನೂ ಓದಿ:“ಈ ದೇಶದಲ್ಲಿ” ಕೇವಲ ಮುಸ್ಲಿಮರನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ: ಒಮರ್ ಅಬ್ದುಲ್ಲಾ

ಭಾರತ ಸರ್ಕಾರವು ನೂತನ ಕಂಪನಿಗಳನ್ನು ಉತ್ತೇಜಿಸಲು, ಉದ್ಯಮಶೀಲತೆ ಮತ್ತು ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ ನೀಡಲು ‘ಸ್ಟಾರ್ಟ್-ಅಪ್ ಇಂಡಿಯಾ’ ಅಭಿಯಾನವನ್ನು ಪ್ರಾರಂಭಿಸಿದೆ. ಪದವೀಧರ ವಿದ್ಯಾರ್ಥಿಗಳು ಅವಕಾಶಗಳನ್ನು ಅನ್ವೇಷಿಸಲು, ಉದ್ಯಮಿಗಳಾಗಲು ಮತ್ತು ಉದ್ಯೋಗಗಳನ್ನು ಸೃಷ್ಟಿಸಲು ಮುಂದಾಗಬೇಕು ಎಂದು ಕಿವಿ ಮಾತು ಹೇಳಿದರು.

Advertisement

ನವ ದೆಹಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಉಪ ಮಹಾ ನಿರ್ದೇಶಕ ಡಾ. ಬಿ.ಎನ್ ತ್ರಿಪಾಠಿ ಅವರು ಘಟಿಕೋತ್ಸವ ಭಾಷಣ ಮಾಡಿದರು. ವಿವಿ ಸಹ ಕುಲಾಧಿಪತಿಗಳು ಆದ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕುಲಪತಿ ಪ್ರೊ. ಕೆ.ಸಿ ವಿರಣ್ಣ, ರಜಿಸ್ಟ್ರಾರ್ ಬಿ.ವಿ ಶಿವಪ್ರಕಾಶ ವೇದಿಕೆಯಲ್ಲಿದ್ದರು. ಶಾಸಕರಾದ ರಹೀಮ್ ಖಾನ್, ಬಂಡೆಪ್ಪ ಕಾಶೆಂಪುರ್, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಪಂ ಸಿಇಒ ಜಹೀರಾ ನಸೀಮ್, ಎಸ್‌ಪಿ ಕಿಶೋರ ಬಾಬು ಸೇರಿದಂತೆ ವಿವಿ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next