ಉಳ್ಳಾಲ: ಅವಿಭಜಿತ ದ.ಕ. ಜಿಲ್ಲೆಯಿಂದ ದೇಶದ ಗಡಿ ಕಾಯುವ ಸೈನಿಕರನ್ನಾಗಿಸಲು ಕರಾವಳಿ ಕಲ್ಯಾಣ ಪರಿಷತ್‌ನ ಕೌಶಲ ಸಂಸ್ಥೆಯ ಈ ಕಾರ್ಯ ರಾಜ್ಯದಲ್ಲಿಯೇ ಮಾದರಿಯಾಗಿದೆ. ಸೈನ್ಯಕ್ಕೆ ಸೇರುವ ಯುವಕರಿಗೆ ಆಯ್ಕೆಗೆ ಬೇಕಾಗುವ ಕೌಶಲ ಹೆಚ್ಚಿಸುವ ಈ ಕಾರ್ಯಕ್ರಮ ಪ್ರತಿ ಜಿಲ್ಲೆಗಳಲ್ಲಿ ನಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.
ಕರಾವಳಿ ಕಲ್ಯಾಣ ಪರಿಷತ್ ಇದರ ಸಹ ಸಂಸ್ಥೆ ಕೌಶಲ ಇದರ ವತಿಯಿಂದ ಸಂಚಾಲನ ಸಮಿತಿ ಸಹಯೋಗದೊಂದಿಗೆ ಅನುದಾನಿತ ಸೋಮೇಶ್ವರ ಉಚ್ಚಿಲ ಬೋವಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 22 ದಿನಗಳ ಕಾಲ ನಡೆಯುತ್ತಿರುವ ಅರ್ಹ ಅಭ್ಯರ್ಥಿಗಳ ಉಚಿತ ಸೇನಾ ನೇಮಕಾತಿ ಪೂರ್ವಭಾವಿ ತರಬೇತಿ ಶಿಬಿರಕ್ಕೆ ಭೇಟಿ ಶಿಬಿರಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು.
ಸಚಿವರೊಂದಿಗೆ ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷರಾದ ಚಂದ್ರಹಾಸ್ ಪಂಡಿತ್ ಹೌಸ್, ಹಿರಿಯ ಮುಖಂಡ ಚಂದ್ರಶೇಖರ ಉಚ್ಚಿಲ್, ಬಿಜೆಪಿ ದ.ಕ. ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ಬಿಜೆಪಿ ಮಂಗಳೂರು ಮಂಡಲ ಪ್ರಧಾನ ಕಾರ್ಯದರ್ಶಿ ಹೇಮಂತ್ ಶೆಟ್ಟಿ, ಅಶೋಕ್ ಬಾಡಿ, ರಾಜೇಶ್ ಉಚ್ಚಿಲ್, ಜಯಶ್ರೀ ಪ್ರಪುಲ್ಲದಾಸ್, ಚಿದಾನಂದ ಅರ್.ಉಚ್ಚಿಲ, ರವಿಶಂಕರ್ ಸೋಮೇಶ್ವರ, ಸುರೇಖಾ, ಜಯಪ್ರಕಾಶ್, ಶವಿತ್ ಉಚ್ಚಿಲ್ ಉಪಸ್ಥಿತರಿದ್ದರು.
ಶಿಬಿರ ಉದ್ಘಾಟನೆ
ಸೇನಾ ನೇಮಕಾತಿ ಪೂರ್ವಭಾವಿ ಉಚಿತ ತರಬೇತಿ ಶಿಬಿರಕ್ಕೆ ಮಾಜಿ ಶಾಸಕ ಜಯರಾಮ ಶೆಟ್ಟಿ ಚಾಲನೆ ನೀಡಿ ಜಿಲ್ಲೆಯ ಯುವಕರಿಗೆ ಸೇನೆ ಸಹಿತ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಪೊಲೀಸ್ ಆಯ್ಕೆ ಶಿಬಿರದಲ್ಲಿ ಪಾಲ್ಗೊಳ್ಳಲು ಇಂತಹ ತರಬೇತಿಗಳು ಪೂರಕವಾಗಿದ್ದು, ಇಲ್ಲಿಂದ ತರಬೇತಿ ಪಡೆದ ಎಲ್ಲ ಯುವಕರು ಸೈನ್ಯ ಮತ್ತು ಪೊಲೀಸ್ ಇಲಾಖೆಗೆ ಆಯ್ಕೆಯಾಗಿ ರಾಷ್ಟ್ರದ ರಕ್ಷಣೆಯಲ್ಲಿ ತೊಡಗಿಸಿಕೊಳ್ಳಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇನಾ ನೇಮಕಾತಿ ಪೂರ್ವಭಾವಿ ಉಚಿತ ತರಬೇತಿ ಶಿಬಿರದ ಸಂಚಾಲನ ಸಮಿತಿಯ ಅಧ್ಯಕ್ಷ ಚಂದ್ರಹಾಸ ಉಳ್ಳಾಲ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಂಘ ಅಬ್ಬಕ್ಕ ವಲಯ ಕೊಲ್ಯ ಇದರ ಅಧ್ಯಕ್ಷ ಕೆ.ಸಿ. ನಾರಾಯಣ, ಮಧು ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಮಧುಸೂದನ್ ಆಯರ್, ಸೋಮೇಶ್ವರ ಉಚ್ಚಿಲ ಬೋವಿ ವಿದ್ಯಾಸಂಸ್ಥೆಗಳ ಸಂಚಾಲಕ ದೇವದಾಸ್ ಟಿ. ಉಚ್ಚಿಲ, ಸೇವಾಭಾರತಿಯ ರಾಘವನ್, ಸದಸ್ಯರಾದ ನವೀನ್ ನಾಯಕ್, ಕೃಷ್ಣ ಶೆಟ್ಟಿ ತಾಮಾರು, ಹರಿಶ್ಚಂದ್ರ ಅಡ್ಕ, ಕೃಷ್ಣ ಬಿ.ಎಂ., ದಾಮೋದರ ಡಿ., ದಿನಮಣಿ, ದಿನೇಶ್ ಕಾಜವ ಉಪಸ್ಥಿತರಿದ್ದರು. ಜಯಂತ್ ಸಂಕೊಳಿಗೆ ನಿರ್ವಹಿಸಿದರು. ಸತೀಶ್ ಕಾರಂತ್ ಪ್ರಸ್ತಾವನೆಗೈದರು. ಚಂಚಲಾಕ್ಷಿ ವಂದಿಸಿದರು.
ಸಂಸ್ಥೆಯ ಶ್ಲಾಘ ನೀಯ ಕಾರ್ಯ
ಜಿಲ್ಲೆಯಿಂದ ಸೈನ್ಯಕ್ಕೆ ಸೇರುವವರ ಸಂಖ್ಯೆ ಕಡಿಮೆ ಇದೆ. ಯುವಕರಿಗೆ ಸರಿಯಾದ ಮಾರ್ಗದರ್ಶನದ ಕೊರತೆ ಕಾರಣವಾಗಿದ್ದು, ಇಂತಹ ತರಬೇತಿ ಶಿಬಿರಗಳಲ್ಲಿ ತರಬೇತಿ ಪಡೆದ ಯುವ ಸಮುದಾಯ ಸೇನಾ ಆಯ್ಕೆ ಶಿಬಿರದಲ್ಲಿ ಉತ್ತೀರ್ಣರಾಗಿ ದೇಶದ ಗಡಿ ಕಾಯುವ ಕಾಯಕದಲ್ಲಿ ಕರಾವಳಿಯ ಯುವಕರು ಇನ್ನಷ್ಟು ಹೆಚ್ಚಾಗಲಿ. ಇಂತಹ ತರಬೇತಿಗೆ ಉಚಿತ ಶಾಲೆಯನ್ನು ನೀಡಿದ ಬೋವಿ ಸಮುದಾಯದ ಕಾರ್ಯವೂ ಶ್ಲಾಘನೀಯ ಎಂದು ಸಚಿವರು ಹೇಳಿದರು.