Advertisement

“ಪ್ರವಾಸಿ ದಿವಸ್‌’ನಲ್ಲಿ ಯುವಶಕ್ತಿ;3 ದಿನಗಳ ಸಮಾವೇಶಕ್ಕೆ ಚಾಲನೆ 

03:45 AM Jan 08, 2017 | |

ಬೆಂಗಳೂರು: ಭಾರತದ ಅಭಿವೃದ್ಧಿಯಲ್ಲಿ ಅನಿವಾಸಿ ಭಾರತೀಯ ಸಮುದಾಯವನ್ನು ಸಕ್ರಿಯವಾಗಿ ಭಾಗಿಯಾಗಿಸಿಕೊಳ್ಳುವುದರ ಜತೆಗೆ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ರವಾನಿಸುವ ಉದ್ದೇಶದ ಮೂರು ದಿನಗಳ ಪ್ರವಾಸಿ ಭಾರತೀಯ ದಿವಸ ಸಮಾವೇಶಕ್ಕೆ ಶನಿವಾರ ಅದ್ಧೂರಿ ಚಾಲನೆ ದೊರೆಯಿತು. 

Advertisement

ಬೆಂಗಳೂರು ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಪ್ರಾರಂಭಗೊಂಡ ಮೊದಲ ದಿನದ ಪ್ರವಾಸಿ ಭಾರತೀಯ ದಿವಸ ಸಂಪೂರ್ಣ ಯುವ ಸಮೂಹದ ದರ್ಬಾರ್‌ ನಂತಿದ್ದು, ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಭಾರತ ವಿಶ್ವಗುರುವಿನ ಪಟ್ಟಕ್ಕೇರಲು ಯುವಸಮೂಹ ಜತೆಗೂಡಬೇಕು. ನಮ್ಮ ಯುವಶಕ್ತಿ ಎಲ್ಲೇ ಇದ್ದರೂ ಭಾರತವನ್ನು ಸೂಪರ್‌ಪವರ್‌ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಟ್ಯಾಲೆಂಟ್‌, ಟೆಕ್ನಾಲಜಿ, ಟ್ರೈನಿಂಗ್‌ ಅಂಡ್‌ ಟೀಂ ವರ್ಕ್‌ ಸೂತ್ರದಡಿ ಕಾಯೋನ್ಮುಖವಾಗಬೇಕು ಎಂದು ಕರೆ ನೀಡಿದರು.

ಉನ್ನತ ಶಿಕ್ಷಣ ವಲಯದಲ್ಲಿ ಅನಿವಾಸಿ ಭಾರತೀಯರ ಮಕ್ಕಳಿಗೆ ಪ್ರಸ್ತುತ ಜಾರಿಯಲ್ಲಿರುವ ಶೇ.15ರಷ್ಟು ಸೀಟು ಮೀಸಲು ಪ್ರಮಾಣ ಹೆಚ್ಚಿಸುವುದು ಹಾಗೂ ಶುಲ್ಕ ಕಡಿಮೆಗೊಳಿಸುವುದು. ಇದರ ಜೊತೆಗೆ ಯುವ ಸಮೂಹಕ್ಕೆ ಗುಣಮಟ್ಟದ ಉನ್ನತ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ 10 ಖಾಸಗಿ ಮತ್ತು 10 ಸರ್ಕಾರಿ ವಿಶ್ವದ್ಯಾಲಯ ಅರಂಭಿಸಿ ಪ್ರಧಾನ ಮಂತ್ರಿ ಶಿಷ್ಯ ವೇತನವನ್ನು ಎರಡು ಸಾವಿರದಿಂದ ಒಂದು ಲಕ್ಷಕ್ಕೆ ಹೆಚ್ಚಿಸುವ ಭರವಸೆಯೂ ಸಮಾವೇಶದಲ್ಲಿ ದೊರೆಯಿತು.

ಇದೇ ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಸಮಾವೇಶವು ಏಳು ಸಾವಿರ ಅನಿವಾಸಿ ಭಾರತೀಯರ ಸಮಾಗಮಕ್ಕೆ ಸಾಕ್ಷಿಯಾಗಿದ್ದಲ್ಲದೆ ಭಾರತೀಯ ಯುವ ಸಮೂಹದ ಅದ್ವಿತೀಯ ಸಂಶೋಧನೆ ಮತ್ತು ಸಾಮರ್ಥ್ಯವನ್ನು ಅನಾವರಣಗೊಳಿಸಿತು. 

ಮೋದಿ ಕನಸಿಗೆ ಕೈಜೋಡಿಸಿ: ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ (ಸ್ವತಂತ್ರ ನಿರ್ವಹಣೆ) ವಿಜಯ್‌ ಗೋಯೆಲ್‌, ಭಾರತದ ಸಮಗ್ರ ಅಭಿವೃದ್ಧಿಯಲ್ಲಿ ಅನಿವಾಸಿ ಭಾರತೀಯರ ಕೊಡುಗೆ ಅಪಾರ. ಅವರಿಂದ 4.3 ಲಕ್ಷ ಕೋಟಿ ರೂ. ಹೂಡಿಕೆ ಭಾರತಕ್ಕೆ ಹರಿದು ಬಂದಿದೆ. ಆದರೂ ಪ್ರಧಾನಿ ನರೇಂದ್ರ ಮೋದಿ ಕಂಡಿರುವ ಆಧುನಿಕ ಭಾರತ ನಿರ್ಮಾಣದ ಕನಸು ನನಸು ಮಾಡಲು ಅನಿವಾಸಿ ಭಾರತೀಯರು ಇನ್ನೂ ಸಕ್ರಿಯವಾಗಿ ಪಾಲ್ಗೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

Advertisement

ಅನಿವಾಸಿ ಭಾರತೀಯರ ಸಮಸ್ಯೆಗಳಿಗೆ ಸ್ಪಂದಿಸಲು ಭಾರತ ಸರ್ಕಾರ ಸದಾ ಸಿದ್ಧ. ಜಗತ್ತಿನ ಯಾವುದೇ ದೇಶದಲ್ಲಿ ವಾಸಿಸುವ ಭಾರತೀಯರ ಜತೆ ನಾವಿದ್ದೇವೆ. ನಿಮಗೆ ಏನೇ ಸಮಸ್ಯೆ ಇದ್ದರೂ ಇ-ಮೇಲ್‌ ಸಂದೇಶ ರವಾನಿಸಿದರೂ ಸಾಕು ಅಲ್ಲಿನ ರಾಜತಾಂತ್ರಿಕರ ಜತೆ ಚರ್ಚಿಸಿ ಬಗೆಹರಿಸಲಾಗುವುದು. ಅನಿವಾಸಿ ಭಾರತೀಯರು ಇಲ್ಲಿ ಹೂಡಿಕೆ ಮಾಡಲು ಯಾವುದೇ ತೊಂದರೆ ಇಲ್ಲದೆ ನಿಯಮಗಳನ್ನೂ ಸರಳೀಕರಣ ಮಾಡಲಾಗಿದೆ ಎಂದು ಹೇಳಿದರು.

ಭಾರತೀಯ ಯುವ ಸಮೂಹವು ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಉದ್ಯೋಗ ನಿಮಿತ್ತ ನೆಲೆಸಿದ್ದು, ತಮ್ಮ ಕಾರ್ಯದಕ್ಷತೆ ಮೂಲಕ ಖ್ಯಾತಿ ಪಡೆಯುವ ಜತೆಗೆ ದೇಶಕ್ಕೂ ಒಳ್ಳೆಯ ಹೆಸರು ತಂದುಕೊಟ್ಟಿದೆ. ಐಟಿ ವಲಯದಲ್ಲಂತೂ ನಮ್ಮವರೇ ಚಾಂಪಿಯನ್‌ಗಳಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಅನಿವಾಸಿ ಭಾರತೀಯರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಭಾರತದಲ್ಲಿ ಪ್ರಸ್ತುತ ಶೇ.15ರಷ್ಟು ಮೀಸಲಾತಿ ಇದ್ದು, ಆ ಪ್ರಮಾಣ ಹೆಚ್ಚಿಸುವುದು ಹಾಗೂ ಶುಲ್ಕದ ಪ್ರಮಾಣ ತಗ್ಗಿಸುವ ಬಗ್ಗೆ ಮಾನವ ಸಂಪನ್ಮೂಲ ಇಲಾಖೆ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಅಭಿವೃದ್ಧಿಗೆ ಟಿ-4 ಸೂತ್ರ: ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಜನರಲ್‌ ವಿ.ಕೆ.ಸಿಂಗ್‌ ಮಾತನಾಡಿ, ಭಾರತವನ್ನು ವಿಶ್ವಗುರು ಆಗಿಸುವ ಪ್ರಧಾನಿ ನರೇಂದ್ರ ಮೋದಿ ಕನಸು ನನಸಾಗಿಸುವ ನಿಟ್ಟಿನಲ್ಲಿ  ಟ್ಯಾಲೆಂಟ್‌, ಟೆಕ್ನಾಲಜಿ, ಟ್ರೆ„ನಿಂಗ್‌ ಮತ್ತು ಟೀಮ್‌ ವರ್ಕ್‌  ಸೂತ್ರದಡಿ ಯುವ ಸಮೂಹ ಕೆಲಸ ಮಾಡಬೇಕು ಎಂದು ತಿಳಿಸಿದರು.

2020ರ ವೇಳೆಗೆ ಭಾರತದ ಶೇ.65ರಷ್ಟು ಜನಸಂಖ್ಯೆ 29 ವರ್ಷದೊಳಗಿನವರಾಗಿರುತ್ತಾರೆ. ಈ ಮೂಲಕ ಭಾರತ ವಿಶ್ವದ ಯುವ ರಾಷ್ಟ್ರವಾಗಿ ಪರಿವರ್ತಿತವಾಗಲಿದೆ. 2022ರ ಹೊತ್ತಿಗೆ ಭಾರತವನ್ನು ಜಾಗತಿಕ ಕೌಶಲ್ಯ ಕೇಂದ್ರವಾಗಿ ಪರಿವರ್ತಿಸುವ ಒತ್ತಾಸೆ ನಮ್ಮದಾಗಿದ್ದು, ಪ್ರತಿಭೆಗಳಿಗೆ ಹೊಸ ಸ್ಪರ್ಶ ನೀಡಿ ಮೌಲ್ಯವರ್ಧನೆ ಮಾಡಲಾಗುವುದು ಎಂದು ಹೇಳಿದರು.

ದೇಶ ನಿರ್ಮಾಣದಲ್ಲಿ ತಂತ್ರಜ್ಞಾನದ ಪಾತ್ರ ಮಹತ್ತರದ್ದಾಗಿದೆ. ಭಾರತೀಯರು ವಿಜ್ಞಾನವನ್ನು ಮಾನವೀಯ ನೆಲೆಗಟ್ಟಿನಲ್ಲಿ ಅಳವಡಿಸಿಕೊಂಡಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯರ ಸಾಧನೆಯೇನೂ ಕಮ್ಮಿಯಲ್ಲ. ಸೂಪರ್‌ ಕಂಪ್ಯೂಟರ್‌ನಿಂದ ದೇಶಿ ನಿರ್ಮಿತ ಚಂದ್ರಯಾನದವರೆಗೆ ಹಲವಾರು ಸಾಧನೆಯನ್ನು ನಾವು ಮಾಡಿದ್ದೇವೆ. ಜಗತ್ತು ಡಿಜಿಟಲ್‌ ಗ್ರಾಮವಾಗಿ ಪರಿವರ್ತಿತವಾಗುತ್ತಿದ್ದು, ಜ್ಞಾನಾಧಾರಿತ ಆರ್ಥಿಕತೆಗೆ ಎಂದೂ ಸೋಲಿಲ್ಲ ಎಂದರು.
ಜ್ಞಾನ ಪರಸ್ಪರ ವಿನಿಮಯ ಆದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳು, ಅನಿವಾಸಿ ಭಾರತೀಯ ವಿದ್ಯಾರ್ಥಿಗಳ ಮಧ್ಯೆ ಜ್ಞಾನದ ವಿನಿಮಯಕ್ಕೆ ನಾವು ವ್ಯವಸ್ಥೆ ಕಲ್ಪಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳ ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಆರಂಭಿಸಿದೆ ಎಂದು ಹೇಳಿದರು.

ಸುರಿನಾಮ್‌ ಗಣರಾಜ್ಯದ ಉಪಾಧ್ಯಕ್ಷ ಮೈಕೆಲ್‌ ಅಶ್ವಿ‌ನ್‌ ಅಧಿನ್‌, ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಆರ್‌.ವಿ.ದೇಶಪಾಂಡೆ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ, ವಿದೇಶಾಂಗ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ದ್ಯಾನೇಶ್ವರ್‌ ಮುಳೆ, ಯುವಜನ ಮತ್ತು ವ್ಯವಹಾರ ಹಾಗೂ ಕ್ರೀಡಾ ಇಲಾಖೆ ಕಾರ್ಯದರ್ಶಿ ಎ.ಕೆ.ದುಬೆ ಉಪಸ್ಥಿತರಿದ್ದರು.

ಅಟಲ್‌ ಗೀತೆ, ಮೋದಿ ಸ್ಮರಣೆ
ಸಮಾವೇಶಕ್ಕೆ ಚಾಲನೆ ನೀಡಿದ ಮಾತನಾಡಿದ ಸಚಿವ ವಿಜಯ್‌ ಗೋಯೆಲ್‌, ಹಿಂದಿನ ಎನ್‌ಡಿಎ ಸರ್ಕಾರದಲ್ಲಿ ಮೊದಲ ಬಾರಿ ಪ್ರವಾಸಿ ಭಾರತೀಯ ದಿವಸ ಸಮಾವೇಶ ಪ್ರಾರಂಭಿಸಿದ ದಿನ ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಭಾಷಣದಲ್ಲಿ ಪ್ರಸ್ತಾಪಿಸಿದ್ದ ಅನಿವಾಸಿ ಭಾರತೀಯರ ಹೃದಯ ದೇಶಕ್ಕಾಗಿ ಮಿಡಿಯಬೇಕು ಎಂಬ ಅರ್ಥದ ಕವನದೊಂದಿಗೆ ಭಾಷಣ ಪ್ರಾರಂಭಿಸಿದರು. ನಂತರ ಪ್ರಧಾನಿ ನರೇಂದ್ರ ಮೋದಿ ನೋಟು ಅಮಾನ್ಯ ಕುರಿತು ಕೈಗೊಂಡ ಕ್ರಮವನ್ನು ಶ್ಲಾ ಸಿ, ಇದೊಂದು ದಿಟ್ಟ ಕ್ರಮ. ಮಹಾತ್ಮಗಾಂಧಿ ಹಾಕಿಕೊಟ್ಟ ಮಾರ್ಗದಲ್ಲಿ ಮೋದಿ ಮುನ್ನಡೆಯುತ್ತಿದ್ದಾರೆ. ಭ್ರಷ್ಟಾಚಾರ ಸ್ವತ್ಛಗೊಳಿಸಲು ಕೈಗೊಳ್ಳುವ ಇಂತಹ ಕ್ರಮಗಳ ಜಾರಿ ಸಂದರ್ಭದಲ್ಲಿ ಅಡೆ-ತಡೆಗಳು ಎದುರಾಗುವುದು ಸಹಜ. ಆದರೆ, ಜನಸಾಮಾನ್ಯರು ನಮ್ಮೊಂದಿಗಿದ್ದಾರೆ, ನಮ್ಮ ನಿಲುವು ಒಪ್ಪಿದ್ದಾರೆ ಎಂದು ಸಮರ್ಥಿಸಿಕೊಂಡರು.

4.3 ಲಕ್ಷ ಕೋಟಿ ಹೂಡಿಕೆ
ಭಾರತದ ಸಮಗ್ರ ಅಭಿವೃದ್ಧಿಯಲ್ಲಿ ಅನಿವಾಸಿ ಭಾರತೀಯರ ಕೊಡುಗೆ ಅಪಾರ. ಅವರು 65 ಬಿಲಿಯನ್‌ ಡಾಲರ್‌ (ಸುಮಾರು 4.3 ಲಕ್ಷ ಕೋಟಿ ರೂ.) ಹಣವನ್ನು ಭಾರತದಲ್ಲಿ ಹೂಡಿಕೆ ಮಾಡಿದ್ದಾರೆ. ಆದರೂ ಪ್ರಧಾನಿ ನರೇಂದ್ರ ಮೋದಿ ಕಂಡಿರುವ ಆಧುನಿಕ ಭಾರತ ನಿರ್ಮಾಣದ ಕನಸು ನನಸು ಮಾಡಲು ಅನಿವಾಸಿ ಭಾರತೀಯರು ಇನ್ನೂ ಸಕ್ರಿಯವಾಗಿ ಪಾಲ್ಗೊಳ್ಳಬೇಕಿದೆ.

– ವಿಜಯ್‌ ಗೋಯೆಲ್‌, ಯುವಜನ-ಕ್ರೀಡಾ ಸಚಿವ

ವಿಶ್ವಗುರುಗೆ 4ಟಿ ಸೂತ್ರ
ಭಾರತವನ್ನು ವಿಶ್ವಗುರು ಆಗಿಸುವ ಪ್ರಧಾನಿ ನರೇಂದ್ರ ಮೋದಿ ಕನಸು ನನಸಾಗಿಸುವ ನಿಟ್ಟಿನಲ್ಲಿ ಟ್ಯಾಲೆಂಟ್‌, ಟೆಕ್ನಾಲಜಿ, ಟ್ರೆ„ನಿಂಗ್‌ ಮತ್ತು ಟೀಮ್‌ ವರ್ಕ್‌ ಸೂತ್ರದಡಿ ಯುವ ಸಮೂಹ ಕೆಲಸ ಮಾಡಬೇಕು. 2020ರ ವೇಳೆಗೆ ಭಾರತದ ಶೇ.65ರಷ್ಟು ಜನಸಂಖ್ಯೆ 29 ವರ್ಷದೊಳಗಿನವರಾಗಿರುತ್ತಾರೆ. ಈ ಮೂಲಕ ಭಾರತ ವಿಶ್ವದ ಯುವ ರಾಷ್ಟ್ರವಾಗಿ ಪರಿವರ್ತಿತವಾಗಲಿದೆ.
– ಜ|ವಿ.ಕೆ.ಸಿಂಗ್‌, ವಿದೇಶಾಂಗ ಖಾತೆ ರಾಜ್ಯ ಸಚಿವ

ಮುಂದಿನ ಹತ್ತು ವರ್ಷಗಳಲ್ಲಿ ಭಾರತ ಜಗತ್ತಿನಲ್ಲಿ ಸೂಪರ್‌ ಪವರ್‌ ಆಗಲಿದ್ದು, ಆ ಕೀರ್ತಿ ಯುವ ಸಮೂಹಕ್ಕೆ ಸಲ್ಲಲಿದೆ. ಭವಿಷ್ಯದ ಭಾರತದ ನಿರ್ಮಾಣ ಯುವ ಸಮೂಹದಿಂದ ಮಾತ್ರ ಸಾಧ್ಯ. ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ದೇಶದ ಭವಿಷ್ಯ ಉಜ್ವಲಗೊಳಿಸಲು ಸಾಧ್ಯ.
– ಆರ್‌.ವಿ.ದೇಶಪಾಂಡೆ, ಬೃಹತ್‌ ಕೈಗಾರಿಕಾ ಸಚಿವ

ಚಿಕ್ಕ ಚಿಕ್ಕ ರಾಷ್ಟ್ರಗಳ ಅಭಿವೃದ್ಧಿ ಮತ್ತು ಅಂತಹ ದೇಶಗಳ ಜತೆ ಸಂಬಂಧ ವೃದ್ಧಿ ವಿಚಾರದಲ್ಲಿ ಭಾರತ ಹಿರಿಯಣ್ಣನ ಪಾತ್ರ ನಿರ್ವಹಿಸಬೇಕು. ಭಾರತವು ಕೇವಲ ತಂತ್ರಜ್ಞಾನ, ಮಾನವ ಸಂಪನ್ಮೂಲದಲ್ಲಷ್ಟೇ ಸೂಪರ್‌ ಪವರ್‌ ಅಲ್ಲ. ಯೋಗ, ಆಯುರ್ವೇದ, ಅಧ್ಯಾತ್ಮ, ಮೌಲ್ಯ, ಪ್ರಾಚೀನ ಪರಂಪರೆ ಉಳಿಸುವಲ್ಲೂ ಸೂಪರ್‌ ಪವರ್‌ ಆಗಬೇಕು.
– ಮೈಕಲ್‌ ಅಶ್ವಿ‌ನ್‌ ಅಧಿನ್‌, ಸಿರಿನಾಮ್‌ ದೇಶದ ಉಪಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next