Advertisement

ಒಂಟಿ ಮಹಿಳೆಯರ ನೆರವಿಗೆ ಯುವಕರ ತಂಡ

06:11 PM Sep 04, 2021 | Team Udayavani |

ಹುಬ್ಬಳ್ಳಿ: ರಾತ್ರಿ ವೇಳೆ ಸೂಕ್ತ ಸಾರಿಗೆ ಸೌಲಭ್ಯವಿಲ್ಲದೆ ಸಂಕಷ್ಟ ಅನುಭವಿಸುವ ಒಂಟಿ ಮಹಿಳೆಯರ ನೆರವಿಗೆ ಆಗಮಿಸಲು ಯುವಕರ ತಂಡವೊಂದು ಸಿದ್ಧವಾಗಿದೆ. ರಾತ್ರಿ ಎಷ್ಟೇ ಸಮಯವಾದರೂ ಒಂದು ಕರೆ ಮಾಡಿದರೆ ಅವರನ್ನು ಮನೆಗೆ ತಲುಪಿಸುವ ಕಾರ್ಯವನ್ನು ಈ ತಂಡ ಮಾಡಲಿದೆ.

Advertisement

ನೆರೆ ಸಂತ್ರಸ್ತರಿಗೆ ನೆರವು, ಪ್ರತಿಭೆಗಳಿಗೆ ಕೈಲಾದಷ್ಟು ಸಹಾಯ, ಹಬ್ಬಗಳ ವೈಶಿಷ್ಟಪೂರ್ಣ ಆಚರಣೆ, ಜನರಲ್ಲಿ ಸಂಚಾರ ನಿಯಮಗಳ ಜಾಗೃತಿ, ಕೋವಿಡ್‌ ಅರಿವು, ಬಡ ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿ, ಸತ್ತ ಪ್ರಾಣಿಗಳ ಅಂತ್ಯಸಂಸ್ಕಾರ ಹೀಗೆ ಹತ್ತಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ಯುವಕರ ತಂಡ ಇದೀಗ ಈ ಕಾರ್ಯಕ್ಕೆ ಮುಂದಾಗಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎಸ್‌ಡಬ್ಲ್ಯೂ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಸುನೀಲ ಜಂಗಾಣಿ ನೇತೃತ್ವದಲ್ಲಿ ಸ್ನೇಹಿತರು ಒಗ್ಗೂಡಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ದೆಹಲಿಯಲ್ಲಿ ನಡೆದ ಪೈಶಾಚಿಕ ಕೃತ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿ ಮಹಿಳೆಯರ ರಕ್ಷಣೆಗೆ ಏನಾದರೂ ಕಾರ್ಯ ಮಾಡಬೇಕು ಎನ್ನುವ ಸುನೀಲ್‌
ಅವರ ತಾಯಿಯ ಮನದಿಂಗಿತ ಈ ಕಾರ್ಯಕ್ಕೆ ಪ್ರೇರಣೆ ನೀಡಿದೆ.

ಫೌಂಡೇಶನ್‌-ಆಟೋ ಸಿದ್ಧ: ಆಟೋ ರಿಕ್ಷಾ ಫೌಂಡೇಶನ್‌ ಹೆಸರಿನಲ್ಲಿ ಇತ್ತೀಚೆಗೆ ಒಂದು ಎನ್‌ಜಿಒಆರಂಭಿಸಿದ್ದಾರೆ. ಒಂದು ಆಟೋ ಖರೀದಿಸಿ ಬಿಳಿ ಹಾಗೂ ಗುಲಾಬಿ ಬಣ್ಣದಿಂದ ಸಿದ್ಧಪಡಿಸಲಾಗುತ್ತಿದ್ದು, ಚಾಲನೆ ನೀಡುವುದೊಂದು ಬಾಕಿಯಿದೆ. ತಂದೆ ಹನುಮಂತಪ್ಪ ಜಂಗಾಣಿ ಯೋಧರಾಗಿ ದೇಶ ಸೇವೆಯಲ್ಲಿದ್ದಾರೆ. ಅವರ ಪ್ರೇರಣೆಯಿಂದ ಸುನೀಲ ಜಂಗಾಣಿ ಅವರೊಂದಿಗೆ ಕವಿವಿ ಸಂಶೋಧಕ ದುಂಡಪ್ಪ ಬಡಲಕ್ಕನವರ, ತಾಯಿ ಸಾವಿತ್ರಿ ಜಂಗಾಣಿ, ಸ್ನೇಹಿತರಾದ ವಿಜಯಕುಮಾರ ಬೆಳ್ಳೇರಿಮಠ,ಕಾರ್ತಿಕ ರಾಯ್ಕರ, ರೇವಣೆ ಶಿವಾಪೂರ, ಪ್ರಮೋದ ಕಮತರ,
ವಿಶ್ವನಾಥ ಸನದಿ, ಗಿರೀಶ ನಾಯ್ಕ ಒಗ್ಗೂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಬೈಕ್‌ ಖರೀದಿಸಲು ಕೂಡಿಟ್ಟ ಹಣ ಹಾಗೂ ಸ್ನೇಹಿತರ ಹಣದಿಂದ ಆಟೋ ರಿಕ್ಷಾ ಖರೀದಿಸಿದ್ದಾರೆ.

ಇದನ್ನೂ ಓದಿ:ಸಾಲಿಗೆ ಹೋಗಾಕ ಇನ್ನೂ ಬರವಲ್ದು ಬಸ್‌!

ಪ್ರತಿಫಲಾಪೇಕ್ಷೆ ಇಲ್ಲ: ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಯಾವುದೇ ಸಾರಿಗೆ ಸೌಲಭ್ಯವಿಲ್ಲದೆ ಪರಿತಪಿಸುತ್ತಿರುವ ಒಂಟಿ ಮಹಿಳೆಯರು ಈ ಸಂಸ್ಥೆ ನೀಡುವ ಸಂಖ್ಯೆಗೆ ಕರೆ ಮಾಡಿದರೆ ನಗರದಲ್ಲಿ ಎಲ್ಲಿಯೇ ಇದ್ದರೂ ಪ್ರತಿಫಲಾಪೇಕ್ಷೆಯಿಲ್ಲದೆ ಅವರನ್ನು ಮನೆಗೆ ಬಿಡುವ ಕೆಲಸ ಮಾಡಲಿದ್ದಾರೆ. ಸೇವೆ ಪಡೆದವರು ಆಟೋದಲ್ಲಿರಿಸಿದ ದೇಣಿಗೆ ಪೆಟ್ಟಿಗೆಗೆ ಹಣ ಹಾಕಬಹುದು. ಇದು ಕಡ್ಡಾಯವಲ್ಲ. ಸಂಗ್ರಹಗೊಂಡ ಹಣವನ್ನು ಕಡು ಬಡತನದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬಳಸುವ ಗುರಿ ಹೊಂದಿದ್ದಾರೆ.

Advertisement

ರಿಕ್ಷಾದೊಂದಿಗೆ ಬೈಕ್‌: ಆಟೋ ಅಲ್ಲದೆ ಬೈಕ್‌ ಮೂಲಕವೂ ಈ  ಸೇವೆ ನೀಡುವ ಚಿಂತನೆಯಿದೆ.ಮಹಿಳೆ ಸಹಾಯ ಕೋರಿ ಕರೆ ಮಾಡಿದಾಗ ಅವರು ಇರುವ ಸ್ಥಳದ ಮಾಹಿತಿ ಪಡೆದುಕೊಂಡು ಹತ್ತಿರ ಇರುವ ಸ್ನೇಹಿತನಿಗೆ ಮಾಹಿತಿ ನೀಡಲಾಗುತ್ತದೆ.

ನಂತರ ಮಹಿಳೆಗೆ ಕರೆ ಮಾಡಿ ಸಹಾಯಕ್ಕೆ ಬರುವ ಯುವಕರು ಹೆಸರು,ವಾಹನ ಸಂಖ್ಯೆ,ಆತನ ಮೊಬೈಲ್‌ ಸಂಖ್ಯೆ,ಗುರುತಿಸಿ ಚೀಟಿ ಸೇರಿದಂತೆ ಸಮರ್ಪಕ ಮಾಹಿತಿ ನೀಡಲಾಗುತ್ತದೆ.ಇದಕ್ಕಾಗಿಯೇ ಗುರುತಿನ ಚೀಟಿ,ಸಮವಸ್ತ್ರ ಸ್ನೇಹಿತರ ಬೈಕ್‌ಗಳ ಮಾಹಿತಿ ಸಂಗ್ರಹಿಸಲಾಗಿದೆ.

ಯುವತಿಯರಿಗೆ ತರಬೇತಿ: ಆಟೋ ರಿಕ್ಷಾ ಯುವತಿರ ರಕ್ಷಣೆಗೆ ಬೇಕಾದ ತರಬೇತಿ ನೀಡುವುದಕ್ಕಾಗಿ ಬಳಕೆಯಾಗಲಿದೆ.ನಗರ ಸುತ್ತಲಿನ ಗ್ರಾಮದಲ್ಲಿರುವ ಸ್ನೇಹಿತರನ್ನು ಸಂಪರ್ಕಿಸಿ ಅಲ್ಲಿನ ಆಸಕ್ತ ಯುವತಿಯರು,ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆಗೆ ಬೇಕಾದ ಕರಾಟೆ ಕೌಶಲಗಳ
ಬಗ್ಗೆ ತರಬೇತಿ ನೀಡಲಿದ್ದಾರೆ. ಇದಕ್ಕಾಗಿ ಪ್ರತಿ ರವಿವಾರ ಗ್ರಾಮಕ್ಕೆ ತೆರಳಲು ಈ ಆಟೋ ರಿಕ್ಷಾ ಬಳಕೆ ಮಾಡಲಿದ್ದಾರೆ.ಅಲ್ಲದೆ ಸಣ್ಣ ಅಂಬ್ಯುಲೆನ್ಸ್‌ ಮಾದರಿಯಲ್ಲಿ ಇದು ಬಳಕೆಯಾಗಲಿದ್ದು, ವಿದ್ಯಾರ್ಥಿ ದಿಶೆಯಲ್ಲಿನ ಯುವಕರ ಕಾರ್ಯ ಮಾದರಿಯಾಗಲಿದೆ.

ಅಮ್ಮನ ಆಸೆ ಈಡೇರಿಸಬೇಕೆಂದು ಬಹಳ ವರ್ಷಗಳಿಂದ ನನ್ನಲ್ಲಿತ್ತು. mಒಂಟಿ ಮಹಿಳೆಯರಿಗೆ ನೆರವು ನೀಡುವ ಕುರಿತು ಸ್ನೇಹಿತರೊಂದಿಗೆ ಚರ್ಚಿಸಿ ಈ ಕಾರ್ಯಕ್ಕೆ ಮುಂದಾಗಿದ್ದೇವೆ. ಸುರಕ್ಷತೆ ಕಾರಣಕ್ಕೆ ಆಟೋ ರಿಕ್ಷಾವನ್ನು ನಾವೇ ಚಲಾಯಿಸುತ್ತೇವೆ. ಈ ಕಾರ್ಯಕ್ಕೆ ಮಹಿಳೆಯಾಗಿ ಮುಂದೆ ಬರಲಿ ಎನ್ನುವ ಕಾರಣಕ್ಕೆ ಅಮ್ಮನಿಗೂ ಆಟೋ ರಿಕ್ಷಾ ಓಡಿಸುವುದನ್ನು ಕಲಿಸುತ್ತಿದ್ದೇನೆ.
-ಸುನೀಲ ಜಂಗಾಣಿ, ಎಂಎಸ್‌ಡಬ್ಲ್ಯೂ ವಿದ್ಯಾರ್ಥಿ

ಇವರ ವಿವಿಧ ಸಾಮಾಜಿಕ ಕಾರ್ಯಗಳನ್ನು ಹತ್ತಿರದಿಂದ ಗಮನಿಸುತ್ತಿದ್ದೆ. ಮಹಿಳೆಯರ ರಕ್ಷಣೆ ಬಗ್ಗೆ ವಿವರಿಸಿದಾಗ, ಇದನ್ನು ಒಂದು
ಸಂಸ್ಥೆಯ ಮೂಲಕ ಜಾರಿಗೆ ತರೋಣಎಂದು ಇವರೊಂದಿಗೆಕೈ ಜೋಡಿಸಿದ್ದೇನೆ. ವಿದ್ಯಾರ್ಥಿಗಳ ಕಾರ್ಯ ಸಮಾಜಕ್ಕೆ ಮಾದರಿ ಹಾಗೂ ದೊಡ್ಡ
ಸಂದೇಶ ನೀಡಲಿದೆ.
-ದುಂಡಪ್ಪ ಬಡಲಕ್ಕನವರ, ಸಂಶೋಧಕರು, ಕವಿವಿ

-ಹೇಮರಡ್ಡಿ ಸೈದಾಪುರ

 

Advertisement

Udayavani is now on Telegram. Click here to join our channel and stay updated with the latest news.

Next