ಬಂಟ್ವಾಳ: ನಿಷೇಧಾಜ್ಞೆ ಜಾರಿಯಲ್ಲಿದ್ದು, ಬಿಗಿ ಪೊಲೀಸ್ ಬಂದೋ ಬಸ್ತ್ ನ ನಡುವೆಯೂ ಬಿ.ಸಿ. ರೋಡ್‌ನಲ್ಲಿ ಮಂಗಳವಾರ ರಾತ್ರಿ ಯುವಕನಿಗೆ ಚೂರಿಯಿಂದ ಇರಿಯಲಾಗಿದೆ.
ಸಜಿಪಮುನ್ನೂರು ಗ್ರಾಮದ ಮಡಿವಾಳಪಡ್ಪು ನಿವಾಸಿ ತನಿಯಪ್ಪ ಮಡಿವಾಳ ಅವರ ಪುತ್ರ, ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ (28) ಅವರು ಗಾಯಾಳು. ಬಿ.ಸಿ.ರೋಡ್‌ನಲ್ಲಿ ಶರತ್ ತಂದೆಯೊಂದಿಗೆ ಉದಯ ಲಾಂಡ್ರಿಯನ್ನು ನಿರ್ವಹಿಸುತ್ತಿದ್ದರು. ಮಂಗಳವಾರ ರಾತ್ರಿ 9.30ರ ವೇಳೆ ಅಂಗಡಿಯನ್ನು ಬಂದ್ ಮಾಡುತ್ತಿರುವ ಸಂದರ್ಭ
ಬೈಕಿನಲ್ಲಿ ಬಂದ ಮೂವರು ತಲವಾರಿನಿಂದ ಕಡಿದು ಪರಾರಿಯಾಗಿದ್ದಾರೆ. ಈ ಸಂದರ್ಭ ಶರತ್ ಅವರ ಬೊಬ್ಬೆ ಕೇಳಿ ಹತ್ತಿರದಲ್ಲಿದ್ದ ಸಾರ್ವಜನಿಕರು ಧಾವಿಸಿ ಬಂದು ಕೂಡಲೇ ತುಂಬೆ ಆಸ್ಪತ್ರೆಗೆ ದಾಖಲಿಸಿದರು. ಆದರೆ ಅವರ ದೇಹಸ್ಥಿತಿ ಗಂಭೀರವಾಗಿರುವುದನ್ನು ತಿಳಿಸಿದ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ತಲೆಗೆ ಗಂಭೀರ ಏಟು: ಮಾಣಿ ಬದಿಯಿಂದ ಹಾ.ಹೆದ್ದಾರಿ ಮೂಲಕ ಬೈಕ್‌ನಲ್ಲಿ ಆಗಮಿಸಿದ್ದ ದುಷ್ಕರ್ಮಿಗಳು ಫ್ಲೈಓವರ್‌ನ ಕೊನೆಯಲ್ಲಿ ಬೈಕ್ ನಿಲ್ಲಿಸಿ, ಎಡ ಬದಿಯ ಸರ್ವೀಸ್ ರಸ್ತೆಯಲ್ಲಿರುವ ಶರತ್ ಅವರ ಅಂಗಡಿಯತ್ತ ತೆರಳಿ ದಾಳಿ ನಡೆಸಿದರು ಎನ್ನಲಾಗಿದೆ.
ತಲೆ ಮತ್ತು ಕುತ್ತಿಗೆಯ ನಡುವೆ ಬಲವಾದ ಏಟು ಬಿದ್ದಿರುವುದರಿಂದ ತೀವ್ರ ರಕ್ತಸ್ರಾವವಾಗಿದೆ. ಪ್ರಸ್ತುತ ಅವರ ಸ್ಥಿತಿ ತೀರಾ ಗಂಭೀರವಾಗಿದೆ ಎಂದು ಶರತ್ ಅವರ ಸಂಬಂಧಿಕರು ತಿಳಿಸಿದ್ದಾರೆ.
ಬಂದ ದಾರಿಯಲ್ಲಿಯೇ ತೆರಳಿದರು: ದುಷ್ಕರ್ಮಿಗಳು ಫ್ಲೈಓವರ್‌ನಲ್ಲಿ ಬಂದು ತಲವಾರಿನಿಂದ ಕಡಿದು, ಚೂರಿಯಿಂದ ಇರಿದ ಬಳಿಕ ಅದೇ ದಾರಿಯಲ್ಲಿ ವಾಪಸ್ ತೆರಳಿದ್ದಾರೆ ಎನ್ನಲಾಗಿದೆ. ಇಲ್ಲಿ ಫ್ಲೈಓವರ್ ಏಕಮುಖವಾಗಿದ್ದರೂ ಬೈಕ್ ತಿರುಗಿಸಿ ಅದೇ ದಾರಿಯಲ್ಲಿ ಮರಳಿದ್ದರು.
ಪೊಲೀಸ್ ಬಂದೋಬಸ್ತ್: ಘಟನೆಯ ಬಳಿಕ ಹೆಚ್ಚುವರಿ ಪೊಲೀಸರನ್ನು ಬಿ.ಸಿ.ರೋಡ್‌ಗೆ ಕರೆಸಿಕೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ರೆಡ್ಡಿ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ.