Advertisement

Hubli; ಭಾರತದ ನಂಬರ್ 1 ಆಗಲು ಯುವಕರು ಶ್ರಮಿಸಬೇಕು: ಇಸ್ರೋ ಮಾಜಿ ಅಧ್ಯಕ್ಷ ಡಾ.ಕಿರಣ್ ಕುಮಾರ್

02:28 PM Jan 27, 2024 | Team Udayavani |

ಹುಬ್ಬಳ್ಳಿ: ಜಗತ್ತು ತೀವ್ರವಾಗಿ ಬದಲಾಗುತ್ತಿದ್ದು ಭಾರತ 2047ಕ್ಕೆ ವಿಶ್ವದ ನಂಬರ್ ಒನ್ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲು ಯುವಕರು ತಮ್ಮ ಜ್ಞಾನ ಮತ್ತು ಕೌಶಲ್ಯದೊಂದಿಗೆ ಶ್ರಮಿಸಲು ಮುಂದಾಗಬೇಕು ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ.ಎ .ಎಸ್. ಕಿರಣ್ ಕುಮಾರ್ ಕರೆ ನೀಡಿದರು.

Advertisement

ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಐದನೇ ಘಟಿಕೋತ್ಸವದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ರಷ್ಯಾ 1957ರಲ್ಲಿ ಮೊದಲ ಉಪಗ್ರಹ ಉಡಾವಣೆ ಮಾಡಿತ್ತು. ಉಪಗ್ರಹ ವಿಚಾರದಲ್ಲಿ ರಷ್ಯಾ ಮತ್ತು ಅಮೆರಿಕ ನಡುವೆ ಪೈಪೋಟಿ ಏರ್ಪಟ್ಟಿದ್ದಾಗ ಭಾರತ ಆ ನಿಟ್ಟಿನಲ್ಲಿ ಸಾಕಷ್ಟು ಹಿಂದೆಯಿತ್ತು ಎಂಬ ಭಾವನೆ ಮೂಡಿತ್ತು.

ವಿಕ್ರಂ ಸಾರಾಭಾಯಿ ಯವರು ದೇಶದಲ್ಲಿ ತಂತ್ರಜ್ಞಾನದ ಅಭಿವೃದ್ಧಿ ಅದರಲ್ಲೂ ವಿಶೇಷವಾಗಿ ಉಪಗ್ರಹ ತಂತ್ರಜ್ಞಾನಕ್ಕೆ ಮುಂದಾದಾಗ ನಮ್ಮಲ್ಲಿರುವ ಸಂಪನ್ಮೂಲ ಸೌಲಭ್ಯ ಅಷ್ಟಕಷ್ಟೇ ಎನ್ನುವಂತಿತ್ತು. ಮೀನುಗಾರರ ಜಾಗವನ್ನು ಉಪಗ್ರಹ ತಯಾರು-ಪ್ರಯೋಗದ ಬಳಕೆ ಕಾರ್ಯಕ್ಕೆ ಮುಂದಾದಾಗ, ಮುಂದೊಂದು ದಿನ  ಮೀನುಗಾರಿಕೆಗೆ ಉಪಯುಕ್ತವಾಗುವಂತಹ ಮಾಹಿತಿ‌ ಇದಾಗಲಿದೆ ಎಂದು ಮೀನುಗಾರರಿಗೆ ಭರವಸೆ ನೀಡಲಾಗಿತ್ತು.

ಇದೀಗ ಮೀನುಗಾರರಿಗೆ ಉಪಗ್ರಹ ಆಧಾರಿತವಾಗಿ ಮೀನು ಹೆಚ್ಚು ಎಲ್ಲಿವೆ, ಮೀನುಗಾರರು ಸಮುದ್ರದಲ್ಲಿ ಎಷ್ಟು ದೂರ ಕ್ರಮಿಸಿದ್ದಾರೆ. ಅವರೇನಾದರೂ ಅಂತಾರಾಷ್ಟ್ರೀಯ ಗಡಿಯನ್ನು ದಾಟಿದ್ದಾರೆಯೇ ಎಂಬ ನಿಖರ ಮಾಹಿತಿ ನೀಡುವಷ್ಟರ ಮಟ್ಟಿಗೆ ನಮ್ಮ ತಂತ್ರಜ್ಞಾನ ಬೆಳೆದು ನಿಂತಿದೆ. 1999 ರ ನಂತರದಲ್ಲಿ ಮೀನುಗಾರರಿಗೆ ಸಾಕಷ್ಟು ಮಾಹಿತಿಯನ್ನು ತಂತ್ರಜ್ಞಾನದ ಮೂಲಕ ನೀಡಲಾಗುತ್ತಿದೆ ಎಂದರು.

ಪ್ರಸ್ತುತ ಭಾರತ ವಿಶ್ವದಲ್ಲಿಯೇ ಐದನೇ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿದ್ದು ಸ್ವಾತಂತ್ರ್ಯ ಶತಮಾನೋತ್ಸವ ಸಂಭ್ರಮದ ವೇಳೆಗೆ ನಾವು ವಿಶ್ವದ ನಂಬರ್ ಒಂದನೇ ಆರ್ಥಿಕ ರಾಷ್ಟ್ರವಾಗಿ ಬೆಳೆದು ನಿಲ್ಲಬೇಕಾಗಿದೆ ಇದಕ್ಕಾಗಿ ಅಗತ್ಯ ತಯಾರಿಗಳು ನಡೆಯಬೇಕಾಗಿದ್ದು, ಪದವೀಧರ ಯುವಕರು ಈ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ ಎಂದು ನುಡಿದರು.

Advertisement

2040ರ ವೇಳೆಗೆ ಭಾರತ ಚಂದ್ರನಲ್ಲಿ ಮಾನವ ವಾಸದ ಯತ್ನಕ್ಕೆ ಮುಂದಾಗಿದ್ದು 2035 ರ ವೇಳೆಗೆ ಅಲ್ಲಿ ಅಗತ್ಯ ತಯಾರಿಗಳನ್ನು ನಾವು ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಯತ್ನಗಳು ಸಾಗಿವೆ. ಯುವಕರು ತಮ್ಮ ವ್ಯಾಸಂಗದಲ್ಲಿ ಪಡೆದ ಕೌಶಲ ಹಾಗೂ ಜ್ಞಾನವನ್ನು ಸಮಾಜ ಮತ್ತು ದೇಶದ ಪ್ರಗತಿಗೆ ಮಾನವೀಯ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಬೇಕೆಂದು ಅವರು ಕರೆ ನೀಡಿದರು.

ಘಟಿಕೋತ್ಸವದಲ್ಲಿ ಒಟ್ಟು 1,599 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ನೀಡಲಾಯಿತು. 29 ವಿದ್ಯಾರ್ಥಿಗಳಿಗೆ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ನೀಡಡಲಾಯಿತು.

ಕೆಎಲ್ಇ ಚೇರ್ಮನ್ ಡಾ. ಪ್ರಭಾಕರ ಕೋರೆ, ಕೆಎಲ್ಇ ತಾಂತ್ರಿಕ ವಿವಿ ಕುಲಪತಿ ಡಾ. ಅಶೋಕ ಶೆಟ್ಟರ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next