Advertisement
ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜೆಡಿಎಸ್‌ನ ಐಟಿ ವಿಂಗ್ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲಿಗರ ಜತೆಗಿನ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಎರಡೂವರೆ ಸಾವಿರ ಮಂದಿ ಪಾಲ್ಗೊಂಡು, ಮುಂದಿನ ವಿಧಾನಸಭೆ ಚುನಾವಣೆ, ರಾಜ್ಯದ ಸ್ಥಿತಿಗತಿ, ಅಭಿವೃದ್ಧಿ, ಪ್ರಣಾಳಿಕೆ ವಿಚಾರಗಳ ಬಗ್ಗೆ ಪ್ರಶ್ನಿಸುವುದರ ಜತೆಗೆ ಕುಮಾರಸ್ವಾಮಿಯವರಿಗೆ ಸಲಹೆ-ಸೂಚನೆ ನೀಡಿದರು.
Related Articles
Advertisement
ಸಾಲಮನ್ನಾ ಖಚಿತ: ಸಂವಾದ ಸಂದರ್ಭದಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಾಲಮನ್ನಾ ಮಾಡುವುದು ಖಚಿತ. ಚುನಾವಣೆ ಪ್ರಣಾಳಿಕೆಯಲ್ಲೇ ಅದನ್ನು ಸೇರಿಸಲಾಗುವುದು ಎಂದು ಹೇಳಿದರು. ಜೆಡಿಎಸ್ ಅಧಿಕಾರಕ್ಕೆ ಬಂದರೆ ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆ ಮುಚ್ಚುವುದಿಲ್ಲ. ಬದಲಿಗೆ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಕೆಯನ್ನೂ ಆರಂಭಿಸಲಾಗುವುದು ಎಂದರು.
ಕಾಂಗ್ರೆಸ್ ಶಾಸಕರೊಬ್ಬರು ಮುಂದಿನ ಚುನಾವಣೆಗೆ 10 ಕೋಟಿ ರೂ. ಹಣ ಸಿದ್ಧ ಮಾಡಿಕೊಂಡಿದ್ದೇನೆಂದು ಬಹಿರಂಗವಾಗಿ ಹೇಳ್ತಾರೆ. ಆಡಳಿತಾರೂಢ ಪಕ್ಷ ರಾಜ್ಯದಲ್ಲಿ ಯಾವ ಸ್ಥಿತಿ ನಿರ್ಮಾಣ ಮಾಡಿದೆ ಎಂಬುದಕ್ಕೆ ಇದು ಸಾಕ್ಷಿ. ಹತ್ತು ಕೋಟಿ ರೂ. ಹಂಚಿ ಶಾಸಕರಾಗುವ ಬದಲು ಒಂದೆರಡು ಕೆರೆ ದತ್ತು ತೆಗೆದು ಅಭಿವೃದ್ಧಿ ಮಾಡಬಹುದಲ್ಲವೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಸರ್ಕಾರಿ ಭೂ ಒತ್ತುವರಿ ಪತ್ತೆ ಹಚ್ಚಲು ಎ.ಟಿ.ರಾಮಸ್ವಾಮಿ ನೇತೃತ್ವದ ಸದನ ಸಮಿತಿ ರಚಿಸಿದ್ದೇ ನಾನು. ಜೆಡಿಎಸ್ ಅಧಿಕಾರಕ್ಕೆ ಬಂದರೆ ಒತ್ತುವರಿಯಾಗಿರುವ ಎಲ್ಲ ಸರ್ಕಾರಿ ಭೂಮಿ ವಶಕ್ಕೆ ಪಡೆಯುತ್ತೇನೆ. ವಸತಿ ಬಡಾವಣೆ ನಿರ್ಮಾಣದ ಹೆಸರಲ್ಲಿ ರೈತರ ಭೂಮಿಯನ್ನು ಪಡೆಯಲ್ಲ. ಸರ್ಕಾರಿ ಒತ್ತುವರಿ ಭೂಮಿ ವಶಕ್ಕೆ ಪಡೆದು ಬೆಂಗಳೂರಿನಲ್ಲಿ ಸೂರಿಲ್ಲದ ಪ್ರತಿಯೊಬ್ಬರಿಗೂ ಮನೆ ನಿರ್ಮಿಸಿಕೊಡುತ್ತೇನೆ ಎಂದು ಘೋಷಿಸಿದರು.
ಪ್ರಧಾನಿ ವಿರುದ್ಧ ವಾಗ್ಧಾಳಿ: ಕಾರ್ಯಕ್ರಮದಲ್ಲಿ ಪ್ರಧಾನಿ ವಿರುದ್ಧ ವಾಗ್ಧಾಳಿ ನಡೆಸಿದ ಶಾಸಕ ವೈ. ಎಸ್.ವಿ.ದತ್ತಾ, ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಹಿಂದೆ ಕಾಂಗ್ರೆಸ್ ಸಹ ಇದೇ ದಾರಿಯಲ್ಲಿ ಇತ್ತು. ಇಂದಿರಾ ಇಂಡಿಯಾ, ಇಂಡಿಯಾ ಇಂದಿರಾ ಅನ್ನೋ ಹೊಗಳುಭಟರು ಸೃಷ್ಟಿಯಾದ್ರು, ದೇಶಕ್ಕೆ ತುರ್ತುಪರಿಸ್ಥಿತಿ ಜಾರಿಯಾಯ್ತು, ಇದೇ ಹಾದಿಯಲ್ಲಿ ಈಗ ದೇಶವಿದೆ. ಮೋದಿ ಅನ್ನೋ ಬಂಡೆ ನಿಮ್ಮ ಬದುಕಿನ ಮೇಲೆ ಅಪ್ಪಳಿಸಲಿದೆ ಎಂದು ಹೇಳಿದರು.
20 ತಿಂಗಳಲ್ಲಿ ಜನಪರಆಡಳಿತ ಕೊಡಲಿಲ್ಲವಾ?
ರಾಜ್ಯದಲ್ಲಿ ಕಾಂಗ್ರೆಸ್‌ಗೂ ಅಧಿಕಾರ ಕೊಟ್ಟಿದ್ದೀರಿ, ಬಿಜೆಪಿಗೂ ಅಧಿಕಾರ ಕೊಟ್ಟಿದ್ದೀರಿ, ಯಾರ ಮನೆ ಬಾಗಿಲಿಗೂ ಹೋಗಿ ಬೆಂಬಲ ಕೋರದೆ ಸ್ವಂತ ಶಕ್ತಿ ಮೇಲೆ ಸರ್ಕಾರ ರಚಿಸುವ ಶಕ್ತಿ ಜೆಡಿಎಸ್ ಗೆ ಈ ಬಾರಿ ಕೊಡಿ. ಐದು ವರ್ಷ ಉತ್ತಮ ಆಡಳಿತ ಕೊಟ್ಟು ತೋರಿಸುತ್ತೇನೆ. ನನ್ನ ಅಭಿವೃದ್ಧಿ ಕಲ್ಪನೆ ರಾಜ್ಯದ ಮನೆ ಮನೆಗೆ ತಲುಪಿಸಿ ಎಂದು ಸಾಮಾಜಿಕ ಜಾಲತಾಣ ಬೆಂಬಲಿಗರಿಗೆ ಕರೆ ನೀಡಿದ ಎಚ್.ಡಿ. ಕುಮಾರಸ್ವಾಮಿ, ನಾನು ಕಾಂಗ್ರೆಸ್,
ಬಿಜೆಪಿಗಿಂತ ಖಂಡೆಮ್ಮಾ…? 20 ತಿಂಗಳಲ್ಲಿ ಜನಪರ ಆಡಳಿತ ಕೊಡಲಿಲ್ಲವಾ ಎಂದು ಪ್ರಶ್ನಿಸಿದರು. ಜೆಡಿಎಸ್ ಅಧಿಕಾರಕ್ಕೆ ಬಂದರೆ ವಾರದಲ್ಲಿ ಒಂದು ದಿನ ಬೆಳಗಾವಿಯ ಸುವರ್ಣಸೌಧದಲ್ಲಿ ಕುಳಿತು ಕೆಲಸ ಮಾಡುತ್ತೇನೆ. ಕೋಟ್ಯಂತರ ರೂ. ವೆಚ್ಚ ಮಾಡಿರುವ ಸುವರ್ಣಸೌಧ ನಿರ್ಮಾಣದ ಉದ್ದೇಶ ಈಡೇರಿಸುವ ನಿಟ್ಟಿನಲ್ಲಿ ಇಂಥದ್ದೊಂದು ಕ್ರಮ ಕೈಗೊಳ್ಳುತ್ತೇನೆ. ರಾಜ್ಯ ವಿಭಜನೆ ಕೂಗು ದೂರ ಮಾಡಿ ಆ ಭಾಗದ ಜನರಲ್ಲಿ ವಿಶ್ವಾಸಮೂಡಿಸುವ ಕೆಲಸ ಮಾಡುತ್ತೇನೆ.
– ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ