ಸುಳ್ಯ: ಅಂಗಡಿ ಬಳಿ ತಾಗಿದ ವಿಚಾರದಲ್ಲಿ ಹೊಡೆದಾಟ ನಡೆದು, ಬಳಿಕ ತಂಡದಿಂದ ಕೈಯಿಂದ ಹಾಗೂ ಬಾಟಲಿಯಿಂದ ಹಲ್ಲೆಗೊಳಗಾಗಿ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಯುವಕ ಚಿಕಿತ್ಸೆ ಫಲಕಾರಿಯಾಗದೇ ಜು.21ರಂದು ಮೃತಪಟ್ಟಿದ್ದಾನೆ.
ಕಾಸರಗೋಡು ಜಿಲ್ಲೆಯ ಮೊಗ್ರಲ್‌ಪುತ್ತೂರು ಮಸೂದ್ ಬಿ.(18) ಮೃತ ಯುವಕ. ಮಸೂದ್ ತಿಂಗಳ ಹಿಂದೆ ಸುಳ್ಯದ ಕಳಂಜದಲ್ಲಿರುವ ಅಜ್ಜ ಅಬ್ಬು ಮುಕ್ತಿ ಎಂಬವರ ಮನೆಗೆ ಬಂದು, ಸ್ಥಳೀಯವಾಗಿ ಕೂಲಿ ಕೆಲಸ ಮಾಡುತ್ತಿದ್ದ. ಜು.19ರ ಸಂಜೆ ಕಳಂಜ ವಿಷ್ಣುನಗರ ಎಂಬಲ್ಲಿ ತಾಗಿದ ವಿಚಾರದಲ್ಲಿ ಯುವಕರ ಗುಂಪಿನೊಂದಿಗೆ ಮಾತಿನ ಚಕಮಕಿ ನಡೆದು, ಬಳಿಕ ರಾತ್ರಿ ಮಾತುಕತೆ ನಡೆಸುವಂತೆ ತಿಳಿಸಿ ಮಸೂದ್‌ನನ್ನು ಕರೆಸಿಕೊಂಡು 8 ಜನರ ಗುಂಪು ಹಲ್ಲೆ ನಡೆಸಿ, ಕಾಲಿನಿಂದ ತುಳಿದು, ಬಾಟಲಿಯಿಂದ ತಲೆಗೆ ಹಲ್ಲೆ ಮಾಡಲಾಗಿತ್ತು ಎಂದು ದೂರು ದಾಖಲಾಗಿತ್ತು.
ಗಂಭೀರ ಗಾಯಗೊಂಡಿದ್ದ ಮಸೂದ್‌ನನ್ನು ಸುಳ್ಯದ ಆಸ್ಪತ್ರೆಗೆ ಕರೆತಂದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಾಯಾಳು ಯುವಕ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುತ್ತಾನೆ ಎಂದು ತಿಳಿದುಬಂದಿದೆ.
8 ಮಂದಿ ಬಂಧನ;
ಘಟನೆಯ ಬಗ್ಗೆ ಇಬ್ರಾಹಿಂ ಶಾನೀಫ್ ಬೆಳ್ಳಾರೆ ಠಾಣೆಯಲ್ಲಿ ಎಂಟು ಮಂದಿಯ ವಿರುದ್ಧ ದ್ವೇಷದಿಂದ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಲಾಗಿದೆ ಎಂದು ದೂರು ನೀಡಲಾಗಿತ್ತು. ಹಲ್ಲೆ ನಡೆಸಿದ ಆರೋಪದಲ್ಲಿ ಪೊಲೀಸರು ಜು.20ರಂದು ಸುನಿಲ್, ಸುಧೀರ್, ಶಿವ, ಸದಾಶಿವ, ರಂಜಿತ್, ಅಭಿಲಾಷ್, ಜಿಮ್‌ರಂಜಿತ್, ಭಾಸ್ಕರ ಎಂಬವರನ್ನು ಬಂಧಿಸಿದ್ದರು. ಇದೀಗ ಬೆಳ್ಳಾರೆ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಬೆಳ್ಳಾರೆಯಲ್ಲಿ ಹೆಚ್ಚುವರಿ ಪೊಲೀಸರ ನಿಯೋಜಿಸಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿ ಕಳೆದ ಜೂನ್ ಮೊದಲ ವಾರದಲ್ಲಿ ಚರಣ್‌ರಾಜ್ ರೈ ಎಂಬಾತನ ಹತ್ಯೆ ನಡೆದಿತ್ತು. ಇದೀಗ ಹಲ್ಲೆಗೊಳಗಾದ ಗಾಯಾಳು ಮಸೂದ್ ಮೃತಪಟ್ಟಿದ್ದು, ಠಾಣಾ ವ್ಯಾಪ್ತಿಯಲ್ಲಿ ಎರಡು ತಿಂಗಳಲ್ಲಿ ಎರಡನೇ ಕೊಲೆ ಪ್ರಕರಣ ಇದಾಗಿದೆ.