ಚಂಡೀಗಢ/ಹೈದರಾಬಾದ್: ಪ್ರೇಮಿಗಳ ದಿನ ಆಚರಣೆ ಭಾರತೀಯ ಸಂಸ್ಕೃತಿಗೆ ವಿರುದ್ಧ ಹಾಗೂ ಹಿಂದೂ ಧರ್ಮಕ್ಕೆ ಅಪಚಾರ ಎಂದು ಸದಾ ವಿರೋಧಿಸುತ್ತಲೇ ಇದ್ದ ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ ಈಗ ಉಲ್ಟಾ ಹೊಡೆದಿದ್ದಾರೆ. ಪ್ರೀತಿಸುವುದು ಯುವಜನರ ಹಕ್ಕು. ಪ್ರೇಮಿಗಳ ದಿನದಂದು ಯಾವುದೇ ಪ್ರತಿಭಟನೆಗಳನ್ನು ನಾವು ಕೈಗೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಚಂಡೀಗಢದಲ್ಲಿ ವಿಎಚ್‌ಪಿ ಮತ್ತು ಭಜರಂಗದಳದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, “ಯುವ ಜನ ಪ್ರೀತಿಯಲ್ಲಿ ಬೀಳದಿದ್ದರೆ ಮದುವೆಗಳು ಹೇಗೆ ನಡೆಯುತ್ತವೆ? ಮದುವೆಗಳು ನಡೆಯದಿದ್ದರೆ ಪ್ರಪಂಚ ಮುಂದುವರೆ ಯುವುದು ಹೇಗೆ? ಯುವಕ ಯುವತಿಯರಿಗೆ ಪ್ರೀತಿಸುವ ಹಕ್ಕಿದೆ. ಅವರು ಅದನ್ನು ಅನುಭವಿಸಲಿ’ ಎಂದಿದ್ದಾರೆ.
ಇದೇ ವೇಳೆ, ಸಂಜ್ವಾನ್ ಸೇನಾನೆಲೆ ಮೇಲೆ ನಡೆದ ಉಗ್ರ ದಾಳಿಯನ್ನು ಕಟುವಾಗಿ ಖಂಡಿಸಿದ ಅವರು, ನಮ್ಮ ಸೇನೆ ಕೂಡಲೇ ಪಾಕಿಸ್ತಾನದ ಮೇಲೆ ಯುದ್ಧಕ್ಕೆ ಸಿದ್ಧವಾಗಬೇಕು. ಪಾಕಿಸ್ತಾನದ ಹೆಸರನ್ನು ಭೂಪಟದಿಂದಲೇ ಅಳಿಸಬೇಕು ಎಂದಿದ್ದಾರೆ. ಇದೇ ವೇಳೆ, ಸೇನಾ ಸಿಬ್ಬಂದಿ ಮೇಲೆ ಕಲ್ಲು ತೂರಿದವರ ವಿರುದ್ಧದ ಕೇಸುಗಳನ್ನು ಜಮ್ಮು ಕಾಶ್ಮೀರ ಸರ್ಕಾರ ವಾಪಸ್ಸು ಪಡೆದಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ: ಇತ್ತ ತೊಗಾಡಿಯಾ ಪ್ರೇಮಿಗಳ ದಿನವನ್ನು ಬೆಂಬಲಿಸಿದ್ದರೆ, ಅತ್ತ ಹೈದರಾಬಾದ್‌ನಲ್ಲಿ ವಿಎಚ್‌ಪಿ ಮತ್ತು ಭಜರಂಗದಳ ಕಾರ್ಯಕರ್ತರು ಪ್ರೇಮಿಗಳ ದಿನಾಚರಣೆಗೆ ನಿಷೇಧ ಹೇರಿದ್ದಾರೆ. ಹೋಟೆಲ್, ಪಬ್‌ಗಳಲ್ಲಿ ವ್ಯಾಲೆಂಟೈನ್ಸ್ ಡೇ ಆಚರಿಸದಂತೆ ಬೆದರಿಕೆ ಒಡ್ಡಿದ್ದಾರೆ. ಕೊಯಮತ್ತೂರಿನಲ್ಲಿ ಶಕ್ತಿ ಸೇನಾ ಮತ್ತು ಭಾರತ್ ಸೇನಾ ಸಂಘಟನೆಗಳು ಶುಭಾಶಯ ಪತ್ರಗಳನ್ನು ಹರಿದು ಪ್ರತಿಭಟನೆ ನಡೆಸಿವೆ.