ಕಮಲಾಪುರ: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕನ್ನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಲಾಡಮುಗಳಿ ಗ್ರಾಮದಲ್ಲಿ ನಡೆದಿದೆ.
ನಿಖಿಲ್ ಕಾಶಪ್ಪ ಪೂಜಾರಿ (25) ಆತ್ಮಹತ್ಯೆ ಮಾಡಿಕೊಂಡವನು.
ಏ.27ರಂದು ಚಂದು ಸಿಂಗೆ ಎನ್ನುವಾತ ಕುಡಿದ ಮತ್ತಿನಲ್ಲಿ ಇನ್ನೊಂದು ಸಮಾಜದ ಯುವಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನುವ ಕಾರಣಕ್ಕೆ ಆ ಸಮುದಾಯದ ಯುವಕರು ಗಲಾಟೆ ಮಾಡಿದ್ದರು. ಆನಂತರ ಗ್ರಾಮದ ಮುಖಂಡರು ಎರಡು ಗುಂಪಿನೊಂದಿಗೂ ಚರ್ಚಿಸಿ ರಾಜಿ ಸಂಧಾನ ಮಾಡಿದ್ದರು.
ಹೀಗಿದ್ದರೂ ನಿಖೀಲ ಪೂಜಾರಿ ಸೇರಿದಂತೆ 15 ಯುವಕರ ಮೇಲೆ ಜಾತಿ ನಿಂದನೆ ಕೇಸ್ ದಾಖಲಾಗಿತ್ತು. ಪೊಲೀಸರು ಗ್ರಾಮಕ್ಕೆ ಆಗಮಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನುವ ವಿಷಯ ತಿಳಿದ ನಿಖೀಲ ಭಯದಿಂದ ಗ್ರಾಮದ ಹೊರ ವಲಯದ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಸಚಿವ ಪ್ರಿಯಾಂಕ್ ಭರವಸೆ:
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ನಿಖಿಲ್ ಕುಟುಂಬದವರಿಗೆ ಕರೆ ಮಾಡಿ ಸರ್ಕಾರದಿಂದ ಪರಿಹಾರ, ಚುನಾವಣೆ ಬಳಿಕ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಿಸುತ್ತೇವೆ. ತಪ್ಪಿತಸ್ಥರನ್ನು ಪೊಲೀಸರು ಬಂಧಿ ಸುತ್ತಾರೆ ಎಂದು ಭರವಸೆ ನೀಡಿದರು ಎಂದು ತಿಳಿದುಬಂದಿದೆ. ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.