ಬೀದರ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ ಜನಸಾಮಾನ್ಯರ ಹಣ ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಷಾ ಫರೀದ್ ಉಲ್ಲಾ ಖಾನ್ ನೇತೃತ್ವದಲ್ಲಿ ನಗರದ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್ಯಾಲಿ ನಡೆಸಿದರು. ಬಳಿಕ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.
ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಜನಸಾಮಾನ್ಯರ ಹಣ ಅಂಬಾನಿ, ಅದಾನಿ, ನಿರವ್ ಮೋದಿ, ಲಲಿತ ಮೋದಿ, ಸುಶೀಲ ಮೋದಿ ಅವರಿಗೆ ಮಾತ್ರ ಸೀಮಿತವಾಗಿದೆ. ರಾಷ್ಟ್ರದಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಜನ ಸಾಮಾನ್ಯರು, ಬಡವರು, ಸಾಲ ಪಡೆಯಬೇಕಾದರೆ ಅನೇಕ ದಾಖಲಾತಿಗಳನ್ನು ತರಲು ಬ್ಯಾಂಕ್‌ನಲ್ಲಿರುವ ಸಿಬ್ಬಂದಿ ಸೂಚಿಸಿರುತ್ತಾರೆ ಎಂದು ತಿಳಿಸಲಾಗಿದೆ.
ದೇಶದಲ್ಲಿ ಏನಾದರೂ ಖರೀದಿಸಲು ಆಧಾರ ಕಾರ್ಡ್ ಇಲ್ಲದೇ ಏನೂ ಪಡೆಯಲು ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ಕೋಟ್ಯಂತರ ರೂ. ಸಾಲ ಪಡೆಯುವಲ್ಲಿ ನಿರವ್ ಮೋದಿ ಫಲರಾಗಿದ್ದಾರೆ. ಸುಮಾರು 11,500 ಕೋಟಿ ರೂ. ಬ್ಯಾಂಕ್ ಸಾಲ ಪಡೆದು, ದೇಶ ಬಿಟ್ಟು ಪರಾರಿಯಾಗಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಅರುಣ ಜೇಟ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿರುವ ಪಕ್ಷ, ಕೂಡಲೇ ಪಂಜಾಬ್ ಬ್ಯಾಂಕ್‌ನ ಸಿಇಒ ಉಚ್ಛಾಟನೆ ಮಾಡಿ ಸಾರ್ವಜನಿಕರ ಹಣ ವಾಪಸ್ ಪಡೆಯಬೇಕು ಎಂದು ಆಗ್ರಹಿಸಲಾಗಿದೆ. ಅಜರ್ ಅಹ್ಮದ್ ಖಾನ್, ಸಾಜೀದ್ ಅಲಿ, ಫಸಿ ಪಟೇಲ್, ಸುಧಾಕರ ಕೊಳ್ಳೂರ, ಸೈಯದ್ ಫಜವುದ್ದೀನ್, ಶೇಕ್ ಸೋಹೇಲ್, ಅಕ್ಮಲ್ ಪಾಶಾ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.