ನವದೆಹಲಿ: ಖಾಸಗಿ ಸಂಸ್ಥೆಗಳಲ್ಲಿ ಹೆಚ್ಚಾಗಿ ರಜೆಯ ವಿಚಾರದಲ್ಲಿ ಬಾಸ್ ಜೊತೆ ಅಥವಾ ಮ್ಯಾನೇಜರ್ ಗಳ ಜೊತೆ ಜಟಾಪಟಿ ನಡೆಯುತ್ತಲೇ ಇರುತ್ತದೆ. ಅದೇ ರೀತಿ ರಜೆಯ ವಿಷಯದಲ್ಲಿ ಬಾಸ್ ಧೋರಣೆಯಿಂದ ಬೇಸತ್ತು ಕೆಲಸವನ್ನೇ ಬಿಟ್ಟಿದ್ದು, ತನ್ನ ಹಾಗೂ ಬಾಸ್ ನಡುವೆ ನಡೆದ ವಾಟ್ಸಪ್ ಚಾಟ್ ನ Screen shot ಅನ್ನು ರೆಡಿಟ್ ನಲ್ಲಿ ಶೇರ್ ಮಾಡಿರುವುದು ವೈರಲ್ ಆಗಿದೆ.
ಇದನ್ನೂ ಓದಿ:ತಡವಾಗಿ ಬಂದ ಬಸ್ :ರಸ್ತೆ ಮಧ್ಯೆಯೇ ಬಸ್ ನಿಲ್ಲಿಸಿ ಚಾಲಕನಿಗೆ ಮಹಿಳೆಯರ ಕ್ಲಾಸ್…
ತಮ್ಮ ನಡುವೆ ನಡೆದ ಸಂಭಾಷಣೆಯನ್ನು ರೆಡಿಟ್ ನಲ್ಲಿ ಶೇರ್ ಮಾಡಿಕೊಂಡಿರುವ ಪ್ರಕಾರ, ವಾರದ ರಜೆಯ ದಿನ ಬೆಳಗ್ಗೆ 7ಗಂಟೆ ಶಿಫ್ಟ್ ಗೆ ಕಚೇರಿಗೆ (6.15ಕ್ಕೆ ಬಂದು ಸಿದ್ಧತೆ ಮಾಡಿಕೊಳ್ಳಬೇಕು) ಬರುವಂತೆ ಮ್ಯಾನೇಜರ್ ಮೆಸೇಜ್ ಹಾಕಿದ್ದರು. ಆದರೆ ಉದ್ಯೋಗಿ ಸಂದೇಶವನ್ನು ಓದಿ ಸುಮ್ಮನಾಗಿದ್ದ. ಅಷ್ಟಕ್ಕೂ ಬೆಂಬಿಡದ ಮ್ಯಾನೇಜರ್, ನೀನು ಮೆಸೇಜ್ ಓದಿದ್ದೀಯಾ, ಹಾಗಾಗಿ ನಾಳೆ ಬೆಳಗ್ಗೆ 6.15ಕ್ಕೆ ಕಚೇರಿಯಲ್ಲಿ ಸಿಗೋಣ..ಮತ್ತೊಮ್ಮೆ ಥ್ಯಾಂಕ್ಸ್ ಎಂದು ಮರು ಸಂದೇಶ ಕಳುಹಿಸಿದ್ದರು.
ಅದಕ್ಕೆ ಉದ್ಯೋಗಿ..ಹಾಯ್ Sorry, ನಾಳೆ ನನಗೆ ಕಚೇರಿ ಬರಲು ಆಗಲ್ಲ. ನೀವು ಬ್ರಿಯಾನ್ ಅವರ ಬಳಿ ಕೇಳುತ್ತೀರಾ? ಥ್ಯಾಂಕ್ಸ್ ಅಂತ ಮೆಸೇಜ್ ಹಾಕಿದ್ದ. ಪ್ರತ್ಯುತ್ತರ ನೀಡಿದ ಮ್ಯಾನೇಜರ್, ಬ್ರಿಯಾನ್ ಗೆ ಮದುವೆಯಾಗಿದ್ದು, ಮಗು ಕೂಡಾ ಇದೆ. ಅಷ್ಟೇ ಅಲ್ಲ ದಿಢೀರನೆ ನಾಳೆ ಕೆಲಸಕ್ಕೆ ಬನ್ನಿ ಅಂತ ಹೇಳಲು ಆಗಲ್ಲ..ನೀನು ಒಬ್ಬಂಟಿ..ನಿನಗ್ಯಾಕೆ ಕಚೇರಿಗೆ ಬರಲು ಆಗಲ್ಲ ಅಂತ ಪ್ರಶ್ನಿಸಿರುವುದು ಚಾಟ್ ನಲ್ಲಿದೆ.
ಈ ಸಂಭಾಷಣೆ ಅಷ್ಟಕ್ಕೆ ಮುಗಿದಿಲ್ಲ…ಏನೇ ಕೆಲಸವಿದ್ದರೂ ನೀನು ನಾಳೆ ಕಚೇರಿಗೆ ಬರಲೇಬೇಕು ಎಂದು ಮ್ಯಾನೇಜರ್ ಮತ್ತೊಂದು ಸಂದೇಶ ಕಳುಹಿಸಿದ್ದರು. ಆದರೆ ಉದ್ಯೋಗಿ ಕಚೇರಿಗೆ ಹೋಗಲು ಒಪ್ಪಲೇ ಇಲ್ಲ. ಕೊನೆಗೆ ಇನ್ಮುಂದೆ ನಿಮ್ಮ ಕಂಪನಿಯಲ್ಲಿ ಕೆಲಸವನ್ನೇ ಮಾಡುವುದಿಲ್ಲ ಎಂದು ಹೇಳಿ ರಾಜೀನಾಮೆ ಪತ್ರವನ್ನು ಇ ಮೇಲ್ ಮಾಡಿರುವುದಾಗಿ ವರದಿ ವಿವರಿಸಿದೆ.
ಮ್ಯಾನೇಜರ್ ನ ಈ ಸಂದೇಶ ಉದ್ಯೋಗಿಗೆ ತೀವ್ರ ಬೇಸರ ಮೂಡಿಸಿದ್ದು, ಮದುವೆಯಾಗದವರಿಗೆ ಪರ್ಸನಲ್ ಲೈಫ್ ಇರೋದೇ ಇಲ್ವಾ ಎಂದು ಉದ್ಯೋಗಿ ಪ್ರಶ್ನಿಸಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.