Advertisement

ನೀನು ಸಿಕ್ಕಾಗಲೇ ಮದುವೆ!

06:00 AM Jul 24, 2018 | |

ಪ್ರತೀ ಮದುವೆ ಮನೆಯಲ್ಲೂ ನಿನ್ನನ್ನು ಹುಡುಕಾಡುತ್ತಿದ್ದೇನೆ. ನಿನ್ನ ಸ್ನೇಹಿತರ, ಸಂಬಂಧಿಗಳ ಮದುವೆ ಇದಾಗಿರಬಹುದು, ನೀನು ಬರಬಹುದು ಎನ್ನುವ ನಿರೀಕ್ಷೆಯಲ್ಲಿಯೇ ಆಲ್‌ ಮೋಸ್ಟ್‌ ಎಲ್ಲಾ ಹುಡುಗಿಯರನ್ನು ತಪ್ಪದೇ ನೋಡುತ್ತೇನೆ. ಆದರೆ ಎಲ್ಲಿಯೂ ನೀನು ಕಾಣಿಸುತ್ತಿಲ್ಲ.

Advertisement

ಇವತ್ತಿಗೆ ಸರಿಯಾಗಿ ಮೂರು ವರುಷಗಳ ಹಿಂದೆ, ಮದುವೆ ಮನೆಯಲ್ಲಿ ಮೊದಲ ನಿನ್ನನ್ನು ಬಾರಿ ನೋಡಿದಾಗ ನೀನು ಶಾಮಿಯಾನದ ಮೂಲೆಯಲ್ಲಿ ಹಾಕಿದ್ದ ಬೆಂಚಿನ ಮೇಲೆ ಒಬ್ಬಳೇ ಕುಳಿತು ಆಚೆ ಈಚೆ ನೋಡುತ್ತಿದ್ದೆ. ಅಪ್ಪಟ ಜಿಂಕೆಯ ಕಣ್ಣುಗಳು ನಿನ್ನವು. ಎಷ್ಟು ಬೇಕೋ ಅಷ್ಟು ಪ್ರತಿಕ್ರಿಯಿಸುತ್ತಾ ಕುಳಿತಿದ್ದ ನಿನ್ನ ಗಂಭೀರ ನಿಲುವು ಅದೇಕೋ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ವಾದ್ಯ ನುಡಿಸುತ್ತಲೇ ಆಗೊಮ್ಮೆ ಈಗೊಮ್ಮೆ ನಿನ್ನೆಡೆ ಹಾಗೇ ಸುಮ್ಮನೆ ನೋಡುತ್ತಿದ್ದೆ. ಒಂದೆರಡು ಸಲ ನಿನ್ನ ಕಣ್ಣುಗಳು ನನ್ನ ಕಣ್ಣುಗಳನ್ನು ಏನು? ಎನ್ನುವಂತೆ ಗಂಭೀರವಾಗಿಯೇ ದಿಟ್ಟಿಸಿದಾಗ ಅವುಗಳನ್ನು ಎದುರಿಸಲಾಗದೆ ತಲೆ ತಗ್ಗಿಸಿದ್ದೆ. ನಿನ್ನೆದುರು ಸೋತೆ ಅಂತನ್ನಿಸಿತು. ಆದರೆ ಹೃದಯ ಮಾತ್ರ ನಗುತ್ತಿತ್ತು.

ಅದ್ಯಾರೋ ಆಂಟಿ ಬಂದು “ಮನಸ್ವಿನಿ ಬೇಗ ಬಾ, ಸೀರೆ ಉಟ್ಟು ರೆಡಿಯಾಗು’ ಅನ್ನುತ್ತಲೇ ನಿನ್ನನ್ನು ಒಳಗಡೆ ಕರೆದುಕೊಂಡು ಹೋಗಿದ್ದರಲ್ಲ, ಆಗ ನಿನ್ನ ಹೆಸರು ತಿಳಿದು ಮತ್ತೂಂದಷ್ಟು ಹಿತವೆನಿಸಿತು.

ಸುಮಾರು ಅರ್ಧ ಗಂಟೆ ಕಳೆದು ನೀನು ಹೊರಬಂದಾಗ ನಿಜಕ್ಕೂ ನಾನು ಅದುರಿ ಹೋಗಿದ್ದೆ. ತಿಳಿಹಸಿರು ಬಣ್ಣದ ಸೀರೆ ಮತ್ತು ಕಡುಗುಲಾಬಿ ಬಣ್ಣದ ರವಿಕೆಯಲ್ಲಿ ನೀನು ಅಪ್ಸರೆಯ ಹಾಗೆ ಮಿಂಚುತ್ತಿದ್ದರೆ ನನಗೆ ತುಂಬ ಹೊತ್ತು ನಿನ್ನನ್ನು ನೋಡುವ ಧೈರ್ಯ ಬರಲಿಲ್ಲ. ದಿಬ್ಬಣ ಹೊರಟರೂ ನಾನು ಅದೇಕೋ ನಿನ್ನ ಕಡೆ ನೋಡಲಿಲ್ಲ.

ಮದುವೆ ಹಾಲ್‌ನಲ್ಲಿ, ನೀನು ಎದುರಿನ ಸಾಲಿನಲ್ಲೇ ಕುಳಿತುಕೊಂಡುಬಿಟ್ಟಿದ್ದೆ. ನಾನು ವೇದಿಕೆಯ ಪಕ್ಕದಲ್ಲಿ ತಂಡದೊಂದಿಗೆ ವಾದ್ಯ ನುಡಿಸುತ್ತಿದ್ದೆ. ನನ್ನ ನೇರಕ್ಕೆ ಆಗಾಗ್ಗೆ ನೀನು ದೃಷ್ಟಿ ಬೀರುತ್ತಿದ್ದರೆ ನನ್ನ ವಾದ್ಯ ತಾಳ ತಪ್ಪಿದಂತೆನಿಸುತ್ತಿತ್ತು. ಆದರೂ ನಿನ್ನೆದುರು ಮಿಂಚುವ ಆಸೆಯಲ್ಲಿ ಒಂದಷ್ಟು ಹೆಚ್ಚೇ ಚಂದಗೆ ನುಡಿಸಿದ್ದೆ. ವಧು-ವರರಿಗೆ ಶುಭಾಶಯ ಕೋರಲು ಹೊರಟಾಗ ನೀನು ನನ್ನೆದುರಿನಿಂದ  ಸಾಗುತ್ತಲೇ “ತುಂಬಾ ಚೆನ್ನಾಗಿತ್ತು ಹಾ… ಎಂದು ಹೇಳಿ ವೇದಿಕೆ ಹತ್ತಿದ್ದೆಯಲ್ಲಾ? ನೀನು ವಧುವರರ ಜೊತೆ ಕ್ಯಾಮರಾಕ್ಕೆ ಪೋಸು ಕೊಟ್ಟು ನಗುತ್ತಿದ್ದರೆ, ಆ ನಗು ನನಗಾಗಿಯೇ ಅಂದುಕೊಂಡು ಖುಷಿಪಟ್ಟಿದ್ದೆ. ಹುಚ್ಚು ಹುಡುಗ ನಾನು.

Advertisement

ಅದಾದ ಬಳಿಕ ಜನಜಂಗುಳಿಯ ನಡುವೆ ನೀನು ಅಲ್ಲೆಲ್ಲೂ ಕಾಣಿಸಲಿಲ್ಲ. ಆಗಿನ ನನ್ನ ಸಂಕಟ ದೇವರಿಗೇ ಪ್ರೀತಿ. ಮನದ ತಳಮಳವನ್ನು ಹೇಳಿಕೊಳ್ಳುವ ಹಾಗಿರಲಿಲ್ಲ, ತೋರಿಸಿಕೊಳ್ಳುವ ಹಾಗೂ ಇರಲಿಲ್ಲ. ಊಟಕ್ಕೆ ಕುಳಿತಾಗ, ಪುಟ್ಟ ಹುಡುಗಿಯೊಂದು ತಂದುಕೊಟ್ಟ ಪತ್ರದಲ್ಲಿ ಒಂದು ನಂಬರಿತ್ತು. ಅದು ನಿನ್ನದೇ ಎಂದು ಗೊತ್ತಾಗದಿರುತ್ತಾ!  ಕಣ್ಣೆದುರೇ ಸ್ವರ್ಗ ನಿಂತಂತೆನಿಸಿತು. ಒಂದೇ ಕ್ಷಣಕ್ಕೆ ನಂಬರ್‌ ಮನಸ್ಸಿನಲ್ಲಿ ಅಚ್ಚಾಗಿಬಿಟ್ಟಿತ್ತು.

ಆ ದಿನ ಸಂಜೆ ನಿನ್ನ ಅದೇ ನಂಬರಿಂದ ನೀನು ಕಾಲ್‌ ಮಾಡಿ ಹಲೋ ಹೇಗಿದ್ದೀರಾ?ಎಂದಷ್ಟೇ ಹೇಳಿ ಕಟ್‌ ಮಾಡಿದ್ದೆ. ನಾನು ತಕ್ಷಣವೇ ತಿರುಗಿ ಕಾಲ್‌ ಮಾಡಿ “ಹಾಯ್‌ ಮನಸ್ವಿನಿ’ ಅಂದಿದ್ದೆ. ಅಲ್ಲಿ ನಿಮ್ಮಪ್ಪನೋ, ಅಣ್ಣನೋ ಕಾಲ್‌ ಎತ್ತಿ ಯಾರು? ಎಂದಿದ್ದರು. ನಾನು ತಡವರಿಸಿದ್ದೆ. “ಯಾರ್ರೀ ಅದು ಸುಮ್‌ ಸುಮ್ಮನೆ ಕಾಲ್‌ ಮಾಡ್ತೀರಾ?’ ಎನ್ನುತ್ತಾ ಅವಾಚ್ಯ ಶಬ್ದಗಳಿಂದ ಬೈದು ಫೋನಿಟ್ಟರು. ಅದ್ಯಾಕೋ ಮತ್ತೆ ಕಾಲ್‌ ಮಾಡುವ ಧೈರ್ಯವಾಗಲಿಲ್ಲ.. ಅದೆಷ್ಟೋ ದಿನಗಳ ಬಳಿಕ ಧೈರ್ಯ ಮಾಡಿ ಕಾಲ್‌ ಮಾಡಿದರೆ ಮೊಬೈಲ್‌ ಸ್ವಿಚ್‌ ಆಫ್ ಎಂದಿತ್ತು. ಮತ್ತೆ ಮತ್ತೆ ಮಾಡಿದ್ದೆ. ಫೋನ್‌ ಸ್ವಿಚ್‌ ಆಫ್ ಇದ್ದಾಗ ಧೈರ್ಯ ಜಾಸ್ತಿ ಬರುತ್ತೆ ನೋಡು! ಆದರೆ ಕೇಳಿಸಿದ್ದು ಮತ್ತದೇ ಹಳೇ ಹುಡುಗಿಯ ಸ್ವರ. “ದ ನಂಬರ್‌ ಯು ಆರ್‌ ಟ್ರೈಯಿಂಗ್‌…!

ನಿನಗ್ಗೊತ್ತಾ ? ಅಂದಿನಿಂದ ಇಂದಿನವರೆಗೂ ಪ್ರತೀ ಮದುವೆ ಮನೆಯಲ್ಲೂ ನಿನ್ನನ್ನು ಹುಡುಕಾಡುತ್ತಿದ್ದೇನೆ. ನಿನ್ನ ಸ್ನೇಹಿತರ, ಸಂಬಂಧಿಗಳ ಮದುವೆ ಇದಾಗಿರಬಹುದು, ನೀನು ಬರಬಹುದು ಎನ್ನುವ ನಿರೀಕ್ಷೆಯಲ್ಲಿಯೇ ಆಲ್‌ ಮೋಸ್ಟ್‌ ಎಲ್ಲಾ ಹುಡುಗಿಯರನ್ನು ತಪ್ಪದೇ ನೋಡುತ್ತೇನೆ. ಆದರೆ ಎಲ್ಲಿಯೂ ನೀನು ಕಾಣಿಸುತ್ತಿಲ್ಲ. ಒಂದಂತೂ ಸತ್ಯ. ಇನ್ನೂ ನಿನ್ನನ್ನು ಹುಡುಕುತ್ತಿದ್ದೇನೆ. ನೀನು ಸಿಗುವ ತನಕ ಮತ್ತೆ ಮತ್ತೆ ಮತ್ತೆ ಮತ್ತೆ ಹುಡುಕುತ್ತಿರುತ್ತೇನೆ. ಅಮ್ಮನಿಗೂ ಹೇಳಿದ್ದೀನಿ, ನೀನು ಸಿಕ್ಕಾಗಲೇ ಮದುವೆ ಅಂತ. ಅಮ್ಮನೂ “ಹಾಗೇ ಮಾಡಪ್ಪಾ’ ಅಂದಿದ್ದಾಳೆ!  ಒಮ್ಮೆ ಸಿಕ್ಕಿಬಿಡು ಮನು.. ಆಮೇಲೆ ಎಲ್ಲವೂ ನಿನ್ನಿಷ್ಟ.

ಇತಿ ನಿನ್ನ ಕಾಯುವ ಹುಡುಗ

ನರೇಂದ್ರ ಎಸ್‌ ಗಂಗೊಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next