Advertisement

ನಿಮ್ಮ ಒಂದು ಮತದ ಮೌಲ್ಯ 7 ಲಕ್ಷ ರೂ.!

12:23 PM Mar 26, 2019 | Lakshmi GovindaRaju |

ಬೆಂಗಳೂರು: ಪ್ರತಿ ಚುನಾವಣೆ ವೇಳೆ ಕೇವಲ ಒಂದೆರಡು ಸಾವಿರ ರೂಪಾಯಿಗಳಿಗೆ ಮತಗಳು ಬಿಕರಿ ಆಗುತ್ತವೆ. ಆದರೆ, ವಾಸ್ತವವಾಗಿ ಬೆಂಗಳೂರಿನಲ್ಲಿರುವ ಪ್ರತಿಯೊಬ್ಬ ಪ್ರಜೆಯ ಮತದ ಮೌಲ್ಯ 6ರಿಂದ 7 ಲಕ್ಷ ರೂ.!

Advertisement

ಹೌದು, ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ, ಬಿಬಿಎಂಪಿ ಬಜೆಟ್‌ಗಳು, ಕೇಂದ್ರದ ಅನುದಾನ ಸೇರಿದಂತೆ ವಿವಿಧ ರೂಪಗಳಲ್ಲಿ 55 ಸಾವಿರ ಕೋಟಿಗೂ ಅಧಿಕ ಮೊತ್ತ ಹರಿದುಬಂದಿದೆ.

ಅದನ್ನು ನಗರದಲ್ಲಿರುವ ಸುಮಾರು 72 ಲಕ್ಷ ಮತದಾರರಿಗೆ ಹಂಚಿಕೆ ಮಾಡಿದರೆ, ತಲಾ 6ರಿಂದ 7 ಲಕ್ಷ ರೂ. ಬರುತ್ತದೆ. ಆದರೆ, ಅದೇ ಐದು ವರ್ಷಗಳಿಗೊಮ್ಮೆ ಬರುವ ಚುನಾವಣೆಯಲ್ಲಿ ಮತಗಳು ಕೇವಲ ಎರಡು-ಮೂರು ಸಾವಿರ ರೂ.ಗೆ ಬಿಕರಿ ಆಗುವ ಪ್ರಕರಣಗಳು ಕಂಡುಬರುತ್ತಿವೆ.

2014-15ರಿಂದ 2018-19ರವರೆಗೆ ಬಿಬಿಎಂಪಿಯಲ್ಲಿ 43,580 ಕೋಟಿ ಮೊತ್ತದ ಬಜೆಟ್‌ ಮಂಡನೆ ಆಗಿದೆ. ಇದೇ ಅವಧಿಯಲ್ಲಿ ರಾಜ್ಯ ಸರ್ಕಾರದಿಂದ 14ರಿಂದ 15 ಸಾವಿರ ಕೋಟಿ ರೂ. ಅನುದಾನ ಬಂದಿದೆ. ಇದಲ್ಲದೆ, ಸ್ಮಾರ್ಟ್‌ಸಿಟಿ, ಸಂಸದರ ನಿಧಿ, ರಾಜ್ಯಸಭಾ ಸದಸ್ಯರ ನಿಧಿ, ವಿಶ್ವವಿದ್ಯಾಲಯಗಳು ಸೇರಿದಂತೆ ವಿವಿಧ ರೂಪದಲ್ಲಿ ನೂರಾರು ಕೋಟ್ಯಂತರ ರೂ. ಬಂದಿದೆ.

ಅದೆಲ್ಲವೂ ಸಮರ್ಪಕ ಬಳಕೆ ಆಗಬೇಕಾದರೆ, ಪ್ರತಿಯೊಬ್ಬರೂ ಮತ ಚಲಾಯಿಸಬೇಕು ಹಾಗೂ ಆ ಮೂಲಕ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂದು ತಜ್ಞರು ತಿಳಿಸುತ್ತಾರೆ. ನಗರದ ಅಭಿವೃದ್ಧಿಗಾಗಿ ಬರುವ ಅನುದಾನದ ಮೇಲೆ ನಾಗರಿಕರ ಹಕ್ಕಿದೆ.

Advertisement

ಈ ಅನುದಾನದ ಸಮರ್ಪಕ ಬಳಕೆಗಾಗಿ ಜನ, ಮತ ಚಲಾಯಿಸುವ ಮೂಲಕ ತಮ್ಮ ಜನಪ್ರತಿನಿಧಿಯನ್ನು ಆಯ್ಕೆ ಮಾಡುತ್ತಾರೆ. ಆದರೆ ಕೇವಲ ಎರಡು-ಮೂರು ಸಾವಿರ ರೂ.ಗಳಿಗೆ ಆ ಮತಗಳನ್ನೇ ಮಾರಾಟ ಮಾಡುವುವದರಿಂದ ತಮಗೆ ಗೊತ್ತಿಲ್ಲದೆ, ಲಕ್ಷಾಂತರ ರೂ. ನಷ್ಟ ಅನುಭವಿಸಲಿದ್ದಾರೆ.

ದೂರ ಉಳಿದವರೂ ನಷ್ಟದ ಪಾಲುದಾರ: ಹಣ ಕೊಟ್ಟು ಮತಗಳನ್ನು ಖರೀದಿಸುವ ಅಭ್ಯರ್ಥಿ, ಗೆದ್ದ ಮೇಲೆ ಆ ಹಣವನ್ನು ಬಡ್ಡಿಸಹಿತ ಜನರಿಂದಲೇ ವಸೂಲು ಮಾಡುತ್ತಾನೆ. ವಿವಿಧ ಯೋಜನೆಗಳು, ಟೆಂಡರ್‌ಗಳು ಸೇರಿದಂತೆ ಎಲ್ಲದರಲ್ಲೂ “ಕಮೀಷನ್‌’ ಪಡೆಯುತ್ತಾರೆ.

ಇದರಿಂದ ಬಂದ ಅನುದಾನದಲ್ಲಿ ಪರೋಕ್ಷವಾಗಿ “ಪಾಲು’ ಹೋಗುತ್ತದೆ. ಇದು ಅಂತಿಮವಾಗಿ ಜನರಿಗೆ ನಷ್ಟದ ರೂಪದಲ್ಲೇ ಪರಿಣಮಿಸುತ್ತದೆ. ನಗರದಲ್ಲಿ ಕೇವಲ ಶೇ. 50-55ರಷ್ಟು ಮತದಾನ ಆಗುತ್ತದೆ. ಹಾಗಾಗಿ, ಮತದಾನದಿಂದ ದೂರ ಉಳಿದವರೂ ಈ ನಷ್ಟದ ಪಾಲುದಾರರಾಗುತ್ತಾರೆ ಎಂದು ಸಿವಿಕ್‌ ಬೆಂಗಳೂರು ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್‌ ತಿಳಿಸುತ್ತಾರೆ.

ಚುನಾವಣೆಗೆ ಇನ್ನು ಹತ್ತು ದಿನಗಳು ಬಾಕಿ ಇರುವಾಗ, ಮನೆ-ಮನೆ ಪ್ರಚಾರವನ್ನೇ ನಿಷೇಧಿಸಬೇಕು. ಯಾಕೆಂದರೆ, ಕಳೆದ ಐದು ವರ್ಷಗಳಲ್ಲಿ ಅಭ್ಯರ್ಥಿ ತಮ್ಮ ಕ್ಷೇತ್ರಕ್ಕೆ ಏನು ಮಾಡಿದ್ದಾನೆ ಎಂಬುದನ್ನು ಜನ ನೋಡಿರುತ್ತಾರೆ.

ಹೊಸ ಅಭ್ಯರ್ಥಿ ಕೂಡ ಚುನಾವಣೆಗೆ ಸ್ಪರ್ಧಿಸುವ ಮುನ್ನ ತಾನು ಆ ಕ್ಷೇತ್ರಕ್ಕೆ ಅಲ್ಲದಿದ್ದರೂ, ಸಾರ್ವಜನಿಕ ಕ್ಷೇತ್ರದಲ್ಲಿ ಆತನ ಕೊಡುಗೆ ಏನು ಎಂಬುದು ಗೊತ್ತಿರುತ್ತದೆ. ಹತ್ತು ದಿನಗಳಲ್ಲಿ ಅದನ್ನು ಮನದಟ್ಟು ಮಾಡುವ ಅವಶ್ಯಕತೆ ಇಲ್ಲ ಎಂದೂ ಅವರು ಅಭಿಪ್ರಾಯಪಡುತ್ತಾರೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next