ಬರಿದಾಗಿದ್ದ ಮನದಲ್ಲಿ ನಿನ್ನ ಹೆಜ್ಜೆಯ ಗುರುತು ಮೂಡಿದಾಗಲೇ ನಾನೆಂದೂ ಕಾಣದ ಸಂತಸ, ಸಂಭ್ರಮದ ಅರ್ಥ ಅರಿತಿದ್ದು. ದಿನದ ಪ್ರತಿ ಕ್ಷಣದಲ್ಲೂ ನನ್ನನ್ನು ಕಾಡುವ ನಿನ್ನನ್ನು ನೆನೆದಾಗ ಅದೇನೋ, ಎಲ್ಲ ಮರೆತು ಮೊಗದಲ್ಲೊಂದು ನಗೆ ಅರಳುತ್ತದೆ. ನಾನು ನಿನ್ನನ್ನು ಕಣ್ತುಂಬಿಕೊಂಡಿದ್ದು ಎರಡೇ ಸಲ. ಆದರೂ, ಮನದಲ್ಲಿ ಅಚ್ಚಾಗಿರುವ ನಿನ್ನ ಚಿತ್ತಾರವ ನೆನೆದರೆ ಅಚ್ಚರಿಯೆನಿಸುತ್ತದೆ. ನಿನ್ನೊಟ್ಟಿಗೆ ಪ್ರತಿದಿನ ಅದೆಷ್ಟು ಹರಟಿದರೂ ಮತ್ತಷ್ಟು ಬಾಕಿ ಉಳಿದಿರುವಂತೆ ಹೃದಯ ಮತ್ತೆ ಮತ್ತೆ ನಿನ್ನ ಮಾತಿಗೆ, ನಗುವಿನ ಕಲರವಕ್ಕೆ ಹಂಬಲಿಸುತ್ತದೆ.
ನನ್ನ ಭಾವುಕತೆಯನ್ನು ತೆರದಿಡಬಾರದೆಂದು ಬಚ್ಚಿಟ್ಟರೂ ನಿನ್ನೆದುರು ಮನಸು ತಾನಾಗಿಯೇ ತೆರೆದುಕೊಳ್ಳುತ್ತದೆ. ನೀನು ಕಣ್ಣೆದುರು ಸುಳಿದಾಗೆಲ್ಲಾ, ಅದ್ಯಾವುದೋ ಚೈತನ್ಯ ತುಂಬಿಕೊಂಡು ಮನದ ಬೇಸರವೆಲ್ಲಾ ಕಳೆದು ಹುಮ್ಮುಸ್ಸಿನ ಹುರುಪು ಹುಟ್ಟಿಕೊಳ್ಳುತ್ತದೆ. ಅದೆಂತಹ ಶಕ್ತಿ ನಿನ್ನದು? ಅದ್ಯಾವ ಮೋಡಿಯ ಜಾಡಿನಲ್ಲಿ ಬಲೆಯ ಬೀಸಿ ಬಿಗಿದು ಹಾಕಿರುವೆ? ಇಬ್ಬರೂ ಅದೆಷ್ಟು ಅಂತರದಲ್ಲಿದ್ದೇವೆ.
ಅಷ್ಟು ದೂರವನ್ನೂ ಸರಿಸಿ ಅದು ಹೇಗೆ ಹುರಿದುಂಬಿಸಿ ಹತಾಶೆಯ ಗಳಿಗೆಗಳನ್ನು ಅಳಿಸಿ ಹಾಕುವೆ? ನಿಜಕ್ಕೂ ನೀನೆಂದರೆ ನನ್ನ ಬದುಕಲ್ಲಿ ಮುಗಿಯದ ಸಂಭ್ರಮ. ಬದುಕಿನ ಜೋಳಿಗೆಯಲ್ಲಿ ಮೊಗೆದಷ್ಟು, ಬರಿದಾಗದ ನಿನ್ನ ನೆನಪುಗಳನ್ನು ಜತನವಾಗಿ ಎತ್ತಿಟ್ಟುಕೊಂಡಿದ್ದೇನೆ. ಅದಷ್ಟು ಸಾಕು ನನ್ನ ನಾಳೆಗಳಿಗೆ. ಕಣ್ಣುಗಳು ನಿನ್ನ ಕನಸುಗಳನ್ನೇ ತುಂಬಿಕೊಂಡು ಎದೆಯೊಳಗೊಂದು ಇಂಪಾದ ಹೊಸರಾಗ ಹುಟ್ಟಿಸಿಕೊಂಡಿದೆ. ಬರಿದಾಗಿದ್ದ ಬದುಕಲ್ಲಿ ಭರವಸೆಯ ತುಂಬಿದ ನಿನ್ನ ಕನಸು ಹೊತ್ತೇ ಕಾಲ ಸವೆಸಬೇಕೆನ್ನುವ ಹಂಬಲ ಹೆಚ್ಚಾಗಿದೆ.
ಇಂತಿ
ಸೌಮ್ಯಶ್ರೀ ಎ.ಎಸ್.