Advertisement
ಸಾಮಾನ್ಯವಾಗಿ ಜನರು ಪ್ರೀತಿಸಿದಾಗ, ಮದುವೆಯಾದಾಗ ಸೂರ್ಯ ಚಂದ್ರರು ಇರುವವರೆಗೂ ನಾನು ನಿನ್ನನ್ನ ಪ್ರೀತಿಸ್ತೀನಿ ಅಂತ ಮಾತು ಕೊಡುತ್ತಾರೆ. ಅಂದರೆ ಅದರ ಅರ್ಥ ಸೂರ್ಯ ಚಂದ್ರರಿಗೆ ಸಾವೇ ಇಲ್ಲ. ಈ ಜಗತ್ತು ಇರುವ ತನಕ ಅವರೂ ಇರುತ್ತಾರೆ. ಹಾಗೇ ನಮ್ಮ ಪ್ರೀತಿಗೆ ಸಹ ಸಾವಿಲ್ಲ ಎಂದುಕೊಳ್ಳುತ್ತಾರೆ. ನಾವು ಅನೇಕ ಚಲನಚಿತ್ರಗಳಲ್ಲಿ ಈ ರೀತಿಯ ಸಾಂದರ್ಭಿಕ ಸಂಭಾಷಣೆಯನ್ನು ಕೇಳಿದ್ದೇವೆ. ಸೂರ್ಯ ಚಂದ್ರರಿಗೆ ಆಯಸ್ಸು ಇದ್ದರೂ, ಅವರಿಗಿಂತ ಮುಂದೆ ನಮ್ಮ ಜನ್ಮದ ಆಯಸ್ಸು ಮುಗಿದಿರುತ್ತದೆ.
ನಾವೆಲ್ಲ ನವಗ್ರಹಗಳನ್ನು ಪೂಜಿಸುತ್ತೇವೆ. ಏಕೆಂದರೆ ಗ್ರಹಗಳೆಲ್ಲ ನಮ್ಮ ಕಾರ್ಮಿಕ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಅವುಗಳನ್ನು ಪೂಜಿಸಿದರೆ ನಮ್ಮ ಜೀವನದ ಏರುಪೇರುಗಳು ಸರಾಗವಾಗಿಬಿಡುತ್ತವೆ ಎಂದು ಅವರಿಗೆ ಶಾಂತಿ ಹೋಮವನ್ನೂ ಮಾಡುತ್ತೇವೆ. ಕೆಲವರು ನಂಬುತ್ತಾರೆ. ಕೆಲವರು ನಂಬುವುದಿಲ್ಲ. ನಂಬಲು, ಬಿಡಲು ನಾವ್ಯಾರು? ಸಾಮಾನ್ಯ ಮುನಷ್ಯರು. ಗ್ರಹಗ ಳನ್ನು ಸೃಷ್ಟಿಸಿದವರಂತೂ ಅಲ್ಲ. ನವಗ್ರಹಗಳು ಇರುವುದು ಎಷ್ಟು ಸತ್ಯವೋ ಅವು ನಮ್ಮ ಮೇಲೆ ಪ್ರಭಾವ ಬೀರುವುದೂ ಅಷ್ಟೇ ಸತ್ಯ.
Related Articles
Advertisement
ವೈಜ್ಞಾನಿಕವಾಗಿ ಭೂಮಿ ಛಾಯೆ ಚಂದ್ರನ ಮೇಲೆ ಬಿದ್ದಾಗ ಚಂದ್ರ ಗ್ರಹಣವಾಗುತ್ತದೆ; ಹಾಗೆ ಚಂದ್ರನ ಛಾಯೆಯಿಂದ ಸೂರ್ಯ ಗ್ರಹಣವಾಗುವುದು ನಿಮಗೆಲ್ಲ ತಿಳಿದಿರುವ ವಿಷಯವೇ.
ರಾಹು – ಕೇತುವಿನ ಪುರಾಣ ಕತೆ ಭಾಗವತ ಪುರಾಣ, ಮಹಾಭಾರತ ಹಾಗೂ ವಿಷ್ಣು ಪುರಾಣಗಳು ಇದೇ ರಾಹು ಕೇತುಗಳ ಬಗ್ಗೆ ಹೇಳುವ ಕಥೆ ಸ್ವಾರಸ್ಯಕರವಾಗಿದೆ. ಕ್ಷೀರಸಾಗರ ಮಂಥನದ ಸಮಯದಲ್ಲಿ ವಿಷ್ಣು ಮೋಹಿನಿಯ ಅವತಾರದಲ್ಲಿ ದೇವತೆಗಳಿಗೆಲ್ಲ ಅಮೃತ ನೀಡುತ್ತಿದ್ದಾಗ ಅದೇ ಸಾಲಿನಲ್ಲಿ ಅಸುರ ಸ್ವರಭಾನು ಸಹ ದೇವತೆಯ ವೇಷ ಧರಿಸಿ ಕುಳಿತಿರುತ್ತಾನೆ. ವಿಷ್ಣುವಿನ ಕೈಯಿಂದ ಅಮೃತ ಪಡೆದು ಕುಡಿದೂ ಬಿಡುತ್ತಾನೆ. ಈ ವಿಷಯ ತಕ್ಷಣ ಸೂರ್ಯ ಚಂದ್ರರಿಗೆ ತಿಳಿದು ವಿಷ್ಣುವಿಗೆ ತಿಳಿಸುತ್ತಾರೆ. ವಿಷ್ಣು ಕೋಪಗೊಂಡು ತಕ್ಷಣ ಆ ಅಸುರ ಸ್ವರಭಾನುವಿನ ತಲೆಯನ್ನು ಛೇದಿಸುತ್ತಾನೆ. ಅಂದಿನಿಂದ ಅಸುರ ಕೋಪಗೊಂಡು ಸೂರ್ಯ ಚಂದ್ರರನ್ನು ನುಂಗುತ್ತಲೇ ಇರುತ್ತಾನೆ. ಹಾಗಾಗಿ ಸೂರ್ಯ, ಚಂದ್ರ ಗ್ರಹಣಗಳಾಗುತ್ತವೆ. ಅವನ ಕೋಪಕ್ಕೆ ಕೊನೆಯೇ ಇಲ್ಲ. ಗ್ರಹಣಗಳು ಸಂಭವಿಸುವುದು ರಾಹು ಕೇತುಗಳಿಂದ, ಹಾಗಾಗಿ ಗ್ರಹಣ ನಮಗೆಲ್ಲ ಕೆಟ್ಟದ್ದು ಮಾಡುತ್ತದೆಂಬ ನಂಬಿಕೆಯಿದೆ. ಆದ್ದರಿಂದ ಗ್ರಹಣದಲ್ಲಿ ಯಾವ ಶುಭ ಕಾರ್ಯ ಗಳನ್ನೂ ಮಾಡುವುದಿಲ್ಲ. ಪಂಚ ಗ್ರಹಗಳಾದ ಮಂಗಳ, ಬುಧ, ಗುರು, ಶುಕ್ರ, ಶನಿಗಳಿಗೆ ಸೂರ್ಯನಷ್ಟೆ ವಯಸ್ಸು. ಆದರೆ ಚಂದ್ರ ಇವರೆಲ್ಲರಿಗಿಂತ ಸ್ವಲ್ಪ ಚಿಕ್ಕವನು. ವೈಜ್ಞಾನಿಕವಾಗಿ ಚಂದ್ರನು ಹುಟ್ಟಿ 316 ಕೋಟಿಯಿಂದ 450 ಕೋಟಿ ವರ್ಷಗಳಾಗಿರಬಹುದು. ಹಾಗೆ ರಾಹು-ಕೇತುಗಳ ವಯಸ್ಸು ಚಂದ್ರನಷ್ಟೆ. ಸೂರ್ಯ, ಚಂದ್ರರಿಗೂ ಸಾವಿದೆ
ನೀವು ಗಮನಿಸಿರಬಹುದು, ನಾವು ಆಕಾಶ ನೋಡಿದಾಗ ಸೂರ್ಯ, ಪೂರ್ಣಚಂದ್ರರಿಬ್ಬರೂ ಒಂದೇ ಗಾತ್ರದಲ್ಲಿ ಕಾಣಿಸುತ್ತಾರೆ. ಚಂದ್ರನಿಗಿಂತ ವೈಜ್ಞಾನಿಕವಾಗಿ ಸೂರ್ಯನ ಅಡ್ಡಗಲ 400 ಪಟ್ಟು ದೊಡ್ಡದು. ಆದರೂ ಏಕೆ ನಮ್ಮ ಕಣ್ಣಿಗೆ ಒಂದೇ ಗಾತ್ರ ಕಾಣಿಸುತ್ತಾರೆಂದರೆ, ಸೂರ್ಯ ಚಂದ್ರನಿಗಿಂತ 400 ಪಟ್ಟು ದೂರದಲ್ಲಿದ್ದಾನೆ. ಚಂದ್ರ ಭೂಮಿಗೆ ಹತ್ತಿರವಾಗಿದ್ದಾನೆ. ಸೂರ್ಯನಲ್ಲಿ ಸಣ್ಣ ಅಣುಗಳೆಲ್ಲ ಒಂದಕ್ಕೊಂದು ಸೇರಿ ದೊಡ್ಡ ಅಣುಗಳಾಗುತ್ತಿವೆ. ಆದ್ದರಿಂದ ಶಕ್ತಿ ಜಾಸ್ತಿಯಾಗಿರುತ್ತದೆ. ಸೂರ್ಯನಿಗೆ ಆಯಸ್ಸು ಮುಗಿಯುತ್ತಿದ್ದಂತೆ ಸಣ್ಣ ಅಣುಗಳು ಕಡಿಮೆಯಾಗುತ್ತಾ ಬರುತ್ತವೆ. ಸಣ್ಣ ಅಣುಗಳು ಕಡಿಮೆಯಾಗುತ್ತಿದ್ದಂತೆ ಅಣುಗಳ ಜೋಡಣೆ ಮತ್ತು ಅದರಿಂದ ಉತ್ಪತ್ತಿಯಾಗುವ ಶಕ್ತಿ ಇಂಗುತ್ತಾ ಹೋಗುತ್ತದೆ. ಕೊನೆಗೆ ಸೂರ್ಯ ಸ್ಫೋಟಗೊಳ್ಳುತ್ತಾನೆ. ಸೂರ್ಯನೇ ಸ್ಫೋಟಗೊಂಡ ನಂತರ ಬೇರೆ ಗ್ರಹಗಳು ನಶಿಸಿ ಹೋಗುತ್ತವೆ. ಗ್ರಹಗಳೆ ಹೋದ ಮೇಲೆ ರಾಹು-ಕೇತುಗಳಿಗೆ ಅರ್ಥವೇ ಇಲ್ಲ. ಏಕೆಂದರೆ ಅವು ಕೇವಲ ಬಿಂದುಗಳು. ಭೌತಶಾಸ್ತ್ರದಲ್ಲಿ ಎಲ್ಲಾ ಗ್ರಹಗಳ ಆಯಸ್ಸು ಅವು ಯಾವ ರೀತಿ ಹುಟ್ಟಿದವು, ಯಾವ ರೀತಿ ನಶಿಸುತ್ತಾರೆ ಅಂತೆಲ್ಲ ತಿಳಿದುಕೊಳ್ಳಬಹುದು. ಆದರೆ ವಿಶ್ವ ನಿರ್ಮಾಣವಾದ ಕ್ಷಣ ಮತ್ತು ಕಾರಣ ಮಾತ್ರ ತಿಳಿದುಕೊಳ್ಳಲು ಸಾಧ್ಯವಿಲ್ಲ. ವೈಜ್ಞಾನಿಕವಾಗಿ ಮಾತ್ರವಲ್ಲ. ನಮ್ಮ ವೇದಗಳ ಪ್ರಕಾರವೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ನಾಸದೀಯ ಸೂಕ್ತ ಇವೆಲ್ಲವನ್ನೂ ಹೇಳುತ್ತದೆ. ವಿಶ್ವ ಸೃಷ್ಟಿಯಾದ ಮೇಲೆ ದೇವತೆಗಳು ಸೃಷ್ಟಿಯಾದರು ಎಂದೂ ಹೇಳುತ್ತದೆ. ಈ ಜನ್ಮದಲ್ಲಿ ಪ್ರೀತಿಸಿ, ಸಾಕು
ಇವೆಲ್ಲ ಕೋಟಿ ವರ್ಷಗಳ ಕತೆಯಾಯಿತು. ಹೆಚ್ಚೆಂದರೆ ನೂರು ವರ್ಷ ಬದುಕಿ-ಹೋಗುವ ಮನುಷ್ಯ ಆ ಸೂರ್ಯ ಚಂದ್ರ ಇರುವವರೆಗೂ ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಿದರೆ ತರ್ಕಬದ್ಧವಾಗಿ ಯೋಚಿಸುವವರಿಗೆಲ್ಲ ನಗು ಬರದೇ ಇರದು. ಪ್ರೀತಿಯಲ್ಲಿ ಮನಸ್ಸು ಕುರುಡಾಗಿರುವುದರಿಂದ ಪ್ರಿಯಕರ ಹೀಗೆ ಹೇಳಿದಾಗ ಪ್ರೇಯಸಿ ನಂಬಬಹುದಷ್ಟೆ! ಯಾರೂ ಸೂರ್ಯ ಚಂದ್ರ ಇರುವವರೆಗೆ ಸಂಗಾತಿಯನ್ನು ಪ್ರೀತಿಸಬೇಕಿಲ್ಲ. ಅವರ ಪ್ರೀತಿ ಸೂರ್ಯ ಚಂದ್ರರಷ್ಟು ಕಾಲ ಬದುಕಿರುವ ಅಗತ್ಯವೂ ಇಲ್ಲ. ಪ್ರೀತಿಸುವವರು ಬದುಕಿರುವವರೆಗೆ ಅವರ ಪ್ರೀತಿ ಬದುಕಿದ್ದರೆ ಸಾಕು. ತಾವು ಬದುಕಿರುವವರೆಗೆ ಇವರಿಬ್ಬರೂ ಪರಸ್ಪರ ಪ್ರೀತಿಸಿದರೆ ಸಾಕು. ಒಂದೊಂದು ರಾತ್ರಿಗೆ ಪ್ರೀತಿ ಮುಗಿದುಹೋಗುತ್ತಿರುವ ಈ ದಿನಗಳಲ್ಲಿ ಇದಕ್ಕಿಂತ ಹೆಚ್ಚನ್ನು ಹೇಗೆ ತಾನೇ ನಿರೀಕ್ಷಿಸುವುದು? ಪ್ರೀತಿಗೆ ಯಾರ ಸಾಕ್ಷಿಯೂ ಬೇಡ. ಸೂರ್ಯನೂ ಚಂದ್ರನೂ ಅದಕ್ಕೆ ವಿಟ್‌ನೆಸ್ ಆಗಬೇಕಿಲ್ಲ. ಸಾಕ್ಷ್ಯ ಕೇಳುವುದು ಪ್ರೀತಿಯಾಗುವುದಿಲ್ಲ. ಪ್ರೀತಿಯ ನಡುವೆ ಸಾಕ್ಷ್ಯದ ಪ್ರಶ್ನೆ ಬರುವುದು ಡೈವೊರ್ಸ್‌ಗೆ ಅರ್ಜಿ ಹಾಕಿದಾಗ ಮಾತ್ರ!
ಬೇಷರತ್ತಾಗಿ ಪ್ರೀತಿಸೋಣ. ಪ್ರೀತಿಯಲ್ಲಿ ಕಂಡೀಶನ್‌ಗಳು ಬಂದರೆ ಅದೊಂದು ಕೊಡು-ಕೊಳ್ಳುವ ವ್ಯವಹಾರವಷ್ಟೇ ಆಗುತ್ತದೆ ಮತ್ತು ಬಿಸಿನೆಸ್‌ನಲ್ಲಿ ಪ್ರೀತಿಗೆ ಜಾಗವಿಲ್ಲ. – ರೂಪಾ ಅಯ್ಯರ್