Advertisement
ನಾವು ನಮ್ಮ ಕೆಲಸದಲ್ಲಿ ಎಷ್ಟೇ ಅನುಭವಿಗಳಾಗಿರಲಿ, ಪರಿಶ್ರಮ ಹಾಕುತ್ತಿರಲಿ..ಬದುಕಿನಲ್ಲಿ ಹಲವಾರು ಬಾರಿ ವೈಫಲ್ಯವನ್ನು ಎದುರಿಸಬೇಕಾಗುತ್ತದೆ. ಜೀವನವಿರುವುದೇ ಹೀಗೆ. ಸೋಲಲಿ ಅಥವಾ ಗೆಲ್ಲಲಿ ನಮ್ಮೊಳಗೆ ಒಂದು ವಿನಮ್ರತೆ ಇರುವುದು ಅವಶ್ಯಕವಲ್ಲವೇ? ಹೀಗಿದ್ದಾಗ ಮಾತ್ರ ಸೋತಾಗ ನಮ್ಮ ಅಹಂಗೆ ಪೆಟ್ಟುಬೀಳುವುದಿಲ್ಲ
Related Articles
ಪಾಕಿಸ್ತಾನ ನಮ್ಮ ವೈರಿ ರಾಷ್ಟ್ರ. ನಮ್ಮ ಮತ್ತು ಪಾಕಿಸ್ತಾನದ ನಡುವೆ ಉತ್ತಮ ಮೈತ್ರಿ ಸಂಬಂಧವಿಲ್ಲ. ಯಾವುದೋ ಒಂದು ಆಟದ ಮೂಲಕ ಈ ಶತ್ರುತ್ವ ಸ್ನೇಹವಾಗಿ ಬದಲಾಗಿಬಿಡುತ್ತದೆ ಎಂದು ಭಾವಿಸುವುದು ಮೂರ್ಖತನ ಎಂದು ನನಗನ್ನಿಸುತ್ತದೆ. ನಾವು ಪಾಕಿಸ್ತಾನಿಯರೊಂದಿಗೆ ಪ್ರಪಂಚದ ಯಾವುದೇ ಮೂಲೆಯಲ್ಲೂ ಆಟವಾಡಬಾರದು. ಆ ದೇಶದೊಂದಿಗೆ ಯಾವುದೇ ಸಂಬಂಧವಿಟ್ಟುಕೊಳ್ಳುವ ಅಗತ್ಯವಿಲ್ಲ ಎನ್ನುವುದು ನನ್ನ ಭಾವನೆ. ಆದರೆ, ಒಂದು ವೇಳೆ ಆಟವಾಡುವುದೇ ಆದರೆ, ಆ ಆಟವನ್ನು ಆಟವೆಂದು ನೋಡಬೇಕಷ್ಟೇ ಹೊರತು, ಯುದ್ಧವೆಂದಲ್ಲ. ಅಂದರೆ ಕ್ರೀಡಾಸ್ಫೂರ್ತಿಯಿರಬೇಕೇ ಹೊರತು ಕೋಪ-ದ್ವೇಷ ಅದರಲ್ಲಿ ನುಸುಳಲೇಬಾರದು.
Advertisement
ಯುದ್ಧ ನಡೆಯಬೇಕು ಎಂದು ಪದೇ ಪದೇ ಹೇಳುವವರಿರುತ್ತಾರಲ್ಲ, ಅವರಿಗೆ ನಿಜಕ್ಕೂ ಯುದ್ಧವೆಂದರೇನು ಎನ್ನುವುದೇ ತಿಳಿದಿರುವುದಿಲ್ಲ. ಇವರೆಲ್ಲ ಎಂಥವರೆಂದರೆ ಒಂದು ವೇಳೆ ಕದನ ನಿಜಕ್ಕೂ ಆರಂಭ ವಾಯಿತೆಂದರೆ ಮೊದಲು ತಮ್ಮ ತಲೆ ಉಳಿಸಿಕೊಳ್ಳಲು ಯೋಚಿಸುವವರು. ಬೇರೆಯವರ ಬಗ್ಗೆ ಇವರು ತಲೆಕೆಡಿಸಿಕೊಳ್ಳುವುದೇ ಇಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳಬಲ್ಲೆ. ಪಲಾಯನ ಮಾಡುವಾಗ ತಮ್ಮ ದೇಶಪ್ರೇಮ ಯಾವಾಗ ಸ್ವಯಂಪ್ರೇಮವಾಗಿ ಬದಲಾಗುತ್ತದೆ ಎನ್ನುವ ಎಚ್ಚರವೂ ಇವರಿಗಿರುವುದಿಲ್ಲ.
ಒಂದು ವಿಷಯ ಅರ್ಥಮಾಡಿಕೊಳ್ಳಿ. ನಾವು ನಮ್ಮ ಕೆಲಸದಲ್ಲಿ ಎಷ್ಟೇ ಅನುಭವಿಗಳಾಗಿರಲಿ, ಪರಿಶ್ರಮ ಹಾಕುತ್ತಿರಲಿ.. ಬದುಕಿನಲ್ಲಿ ಹಲವಾರು ಬಾರಿ ಸೋಲು ಮತ್ತು ವೈಫಲ್ಯವನ್ನು ಎದುರಿಸಲೇಬೇಕಾಗುತ್ತದೆ. ಜೀವನವಿರುವುದೇ ಹೀಗೆ. ಸೋಲಲಿ ಅಥವಾ ಗೆಲ್ಲಲಿ ನಮ್ಮೊಳಗೆ ಒಂದು ವಿನಮ್ರತೆ ಇರುವುದು ಅವಶ್ಯಕವಲ್ಲವೇ? ಹೀಗಿದ್ದಾಗ ಮಾತ್ರ ಸೋತಾಗ ನಮ್ಮ ಅಹಂಗೆ ಪೆಟ್ಟುಬೀಳುವುದಿಲ್ಲ ಮತ್ತು ಗೆದ್ದಾಗ ಆ ಗೆಲುವು ಇನ್ನಷ್ಟು ಸುಂದರವೆನಿಸುತ್ತದೆ.
ಕ್ರೀಡಾಸ್ಫೂರ್ತಿ ಎನ್ನುವುದು ಕೇವಲ ಆಟಗಾರರಿಗಷ್ಟೇ ಅಲ್ಲ. ಬದಲಾಗಿ, ಆ ಆಟವನ್ನು ವೀಕ್ಷಿಸುವ ನಮ್ಮಂಥವರಿಗೂ ಅಷ್ಟೇ ಅಗತ್ಯವಿದೆ. ಬೆಳಗ್ಗೆದ್ದು ಸಂವೇದನಾಶೀಲ ಸಂದೇಶಗಳನ್ನು ಕಳುಹಿಸಿ ತಮ್ಮ ಹೃದಯವಂತಿಕೆಯ ಪರಿಚಯ ಮಾಡಿಕೊಳ್ಳುವ ಜನರು, ಮ್ಯಾಚ್ ನೋಡುತ್ತಿದ್ದಂತೆಯೇ ಕೋಪೋದ್ರಿಕ್ತರಾಗಿ, ನಕಾರಾತ್ಮಕ ಮೆಸೇಜ್‌ಗಳನ್ನು ಕಳುಹಿಸಲು ಶುರು ಮಾಡುತ್ತಾರೆ. ನಮ್ಮದೇ ಆಟಗಾರರು ಮತ್ತು ಅವರ ಪರಿವಾರದ ಬಗ್ಗೆ ಅಸಭ್ಯವಾಗಿ ಮಾತನಾಡಲಾರಂಭಿಸು ತ್ತಾರೆ. ಇನ್ನು ವಿರೋಧಿಗಳ ವಿಷಯಕ್ಕೆ ಬಂದರೆ, ಎದುರಾಳಿ ಆಟಗಾರರ ಹಿಂದಿನ ಮೂರು ತಲೆಮಾರು ಮತ್ತು ಮುಂದಿನ ಮೂರು ಪೀಳಿಗೆಯವರನ್ನೆಲ್ಲ ಸೇರಿಸಿ ಅಸಭ್ಯ, ಅಶ್ಲೀಲ ಭಾಷೆಯನ್ನು ಉಪಯೋಗಿಸಿ ಬೈಯುತ್ತಾರೆ.
ಜನರು ಹೀಗೆ ವರ್ತಿಸುವುದನ್ನು ನೋಡಿ ದಾಗ ಅವರ ನಿಜವಾದ ಚಹರೆಯಾವುದು ಎನ್ನುವ ಅನುಮಾನ ಆರಂಭವಾಗುತ್ತದೆ. ಬೆಳಗ್ಗೆ ಸ್ಫೂರ್ತಿದಾಯಕ ಮೆಸೇಜುಗಳನ್ನು ವಿನಿಮಯ ಮಾಡಿಕೊಳ್ಳುವುದು, ಸಂಜೆಯ ಹೊತ್ತಿಗೆ ಬಾಯಿಗೆ ಬಂದಂತೆ ಬರೆಯುವುದು! ಹೀಗೆ ವರ್ತಿಸುವ ವ್ಯಕ್ತಿಗಳೆಲ್ಲ ನಿಜಕ್ಕೂ ಕಪಟಿಗಳಲ್ಲವೇ?
ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ಮಶ್ರಫೆ ಮೊರ್ತಜಾ ಯಾವುದೋ ಪ್ರಸ್ ಕಾನ್ಫರೆನ್ಸ್ ಒಂದರಲ್ಲಿ ಬಹಳ ಅದ್ಭುತ ಮಾತೊಂದನ್ನು ಹೇಳಿದ್ದರು. “ಆಟದಲ್ಲಿ ಗೆಲುವು ಎದುರಾಗಲಿ ಅಥವಾ ಸೋಲು. ಇದರಿಂದ ಏನೂ ತೊಂದರೆ ಇಲ್ಲ. ಇದು ಜೀವನ ಮರಣದ ಪ್ರಶ್ನೆಯಲ್ಲ. ನಾವು ಆಟಗಾರರು ಒಬ್ಬ ವೈದ್ಯರಂತೆ ಜನರ ಪ್ರಾಣ ರಕ್ಷಿಸುವವರಲ್ಲ, ಸೈನಿಕರಂತೆ ದೇಶವನ್ನು ರಕ್ಷಿಸುವವರೂ ಅಲ್ಲ. ನಾವೆಲ್ಲ ಸಿನೆಮಾ ನಟರಂತೆ ಜನರಿಗೆ ಮನರಂಜನೆ ಒದಗಿಸುವವರು. ಇದಕ್ಕಾಗಿ ನಮಗೆ ಭರಪೂರ ಹಣ ಸಿಗುತ್ತದೆ’. ತಮ್ಮ ಕೆಲಸದ ಬಗ್ಗೆ ಅವರು ಎಷ್ಟು ಸರಿಯಾಗಿ ವಿಶ್ಲೇಷಣೆ ಮಾಡಿದ್ದಾರೆ ನೋಡಿ!
ಹೀಗಾಗಿ, ಇನ್ಮುಂದೆ ಜ್ಞಾನಪೂರಿತ ಗುಡ್ ಮಾರ್ನಿಂಗ್ ಮೆಸೇಜ್‌ಗಳನ್ನು ಕಳುಹಿಸುವ ಮುನ್ನ, ಆ ಸಂದೇಶ ಮತ್ತು ಅದರಲ್ಲಿನ ಆಶಯ ನಿಮ್ಮ ಜೀವನದ ಭಾಗವೋ ಅಲ್ಲವೋ ಎನ್ನುವುದನ್ನು ಯೋಚಿಸಿ. ಅಲ್ಲ ಎನ್ನುವುದಾದರೆ ಆ ಸಂದೇಶವನ್ನು ಫಾರ್ವರ್ಡ್ ಮಾಡುವ ಮುನ್ನ ಅದನ್ನು 10 ಬಾರಿ ಓದಿ, ಅದರಲ್ಲಿನ ಸಲಹೆಯನ್ನು ಬದುಕಲ್ಲಿ ಅಳವಡಿಸಿಕೊಳ್ಳಿ. ಹೀಗಾದರೆ ಮಾತ್ರ ನಿಮ್ಮ ಮತ್ತು ನಿಮ್ಮ ಸುತ್ತಲಿನ ಜಗತ್ತು ನಿಶ್ಚಿತವಾಗಿ ಇನ್ನಷ್ಟು ಸುಂದರವಾಗುತ್ತದೆ.
ಅಂದಹಾಗೆ ಒಂದು ವಿಷಯ. ಈ ಲೇಖನ ಬರೆದ ಮೇಲೆ ನಾನು ಇದನ್ನು ಕನಿಷ್ಟಪಕ್ಷ 25 ಬಾರಿಯಾದರೂ ಓದಿದ್ದೇನೆ! ಇನ್ನೊಬ್ಬರತ್ತ ಬೆರಳು ತೋರಿಸುವ ಮುನ್ನ, ನನ್ನತ್ತ ತಿರುಗಿರುವ ಬೆರಳುಗಳನ್ನು ಹೇಗೆ ತಾನೆ ಕಡೆಗಣಿಸಲಿ? ಹ್ಯಾವ್ ಅ ಗ್ರೇಟ್ ಡೇ. ನಿಮ್ಮ ದಿನ ಮತ್ತು ನಿಮ್ಮ ಜೀವನ ಸಕಾರಾತ್ಮಕತೆಯೊಂದಿಗೆ ತುಂಬಿ ತುಳುಕಾಡಲಿ!
– ರೇಣುಕಾ ಶಹಾನೆ ಬಾಲಿವುಡ್ ನಟಿ