ಬೆಂಗಳೂರು/ಹೊಸದಿಲ್ಲಿ: ವ್ಯಕ್ತಿಯ ಸಂಪೂರ್ಣ ಮಾಹಿತಿ ಬೇಕಾ..? ಕೇವಲ 15 ಸಾವಿರ ರೂ. ನೀಡಿದರೆ ಸಾಕು. ಅವೆಲ್ಲವೂ ನಿಮ್ಮ ಕೈಸೇರಲಿವೆ! ಇಂಥದ್ದೊಂದು ಆಘಾತಕಾರಿ ಸುದ್ದಿಯೊಂದು ಬಹಿರಂಗವಾಗಿದೆ. ಆದರೆ ಈ ದಂಧೆ ಬೆಂಗಳೂರಿನಲ್ಲಿಯೇ ನಡೆಯುತ್ತಿದೆ ಎನ್ನುವುದು ಪ್ರಮುಖ ವಿಚಾರ.
ಆದಾಯ, ಮನೆ ವಿಳಾಸ, ವಯಸ್ಸು , ಬ್ಯಾಂಕ್ ಖಾತೆಗಳಲ್ಲಿನ ಠೇವಣಿ, ಫೋನ್ ನಂಬರ್, ಇ-ಮೇಲ್ ಸಹಿತ ಖಾಸಗಿ ಮಾಹಿತಿಗಳೆಲ್ಲವನ್ನೂ ಈ ದಂಧೆಕೋರರು ಹಣ ಕೊಟ್ಟವರ ಕೈಸೇರಿಸುತ್ತಾರೆ. ಈ ಬಗ್ಗೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
“ಡೇಟಾ ದಲ್ಲಾಳಿಗಳು’ ಎಂದು ಕರೆಸಿಕೊಳ್ಳುವ ದಂಧೆಕೋರರು ಬೆಂಗಳೂರು, ಹೈದರಾಬಾದ್ ಮತ್ತು ದಿಲ್ಲಿಯಲ್ಲಿ ನಿಗೂಢವಾಗಿ ಕಾರ್ಯಾಚರಿಸುತ್ತಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಮಂದಿಯ ಖಾಸಗಿ ಮಾಹಿತಿಗಳೆಲ್ಲವೂ ಈಗಾಗಲೇ ಈ ದಂಧೆಯಿಂದಾಗಿ ಬಿಕರಿಯಾಗಿವೆ. 15,000 ರೂ.ಗಳಿಂದ 10,000 ರೂ. ಪಡೆದು ಮಾಹಿತಿಗಳನ್ನೆಲ್ಲ ಆನ್‌ಲೈನ್‌ನಿಂದ ಕದ್ದು ಬೇಡಿಕೆದಾರನ ಕೈಗಿಡಲಾಗುತ್ತಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಕಂಪೆನಿಗಳು ಪ್ರತಿಕ್ರಿಯಿಸಿದ್ದು, ಎಲ್ಲ ಕಂಪೆನಿ, ಬ್ಯಾಂಕ್‌ಗಳು ತಮ್ಮ ಸುರಕ್ಷತಾ ಕ್ರಮವನ್ನು ಸಮರ್ಥಿಸಿಕೊಂಡಿವೆ. ಬ್ಯಾಂಕ್‌ಗಳು ಗ್ರಾಹಕರಲ್ಲಿ ಜಾಗೃತಿ ಮೂಡಬೇಕಿದೆ ಎಂದೂ ಹೇಳಿಕೊಂಡಿವೆ.
ಒಂದು ತಿಂಗಳಿಗೂ ಹೆಚ್ಚು ಕಾಲ ದಂಧೆಯ ಬೆನ್ನುಬಿದ್ದಾಗ ಪತ್ರಿಕೆಗೆ ಅದರಲ್ಲಿ ಭಾಗಿ ಯಾಗುವವರು ಹೇಳಿದ್ದು ಹೀಗೆ “ಆನ್‌ಲೈನ್‌ನಲ್ಲಿ ಹೆಚ್ಚಾಗಿ ವ್ಯವಹರಿಸುವ ವ್ಯಕ್ತಿಗಳು, ಮಾಸಿಕ ವೇತನ ಪಡೆಯುವ ವ್ಯಕ್ತಿಗಳು, ಕ್ರೆಡಿಟ್ ಕಾರ್ಡ್ ಹೊಂದಿರುವವರು, ಕಾರು ಮಾಲಕರು ಹಾಗೂ ನಿವೃತ್ತ ಮಹಿಳಾ ಅಧಿಕಾರಿಗಳ ಯಾವುದೇ ಮಾಹಿತಿ ನೀಡುವುದಾಗಿ ದಲ್ಲಾಳಿಯಲ್ಲೊಬ್ಬ ಹೇಳಿಕೊಂಡಿದ್ದಾನೆ’
ವ್ಯಕ್ತಿಯ ಕುರಿತಾದ ಎಲ್ಲ ಮಾಹಿತಿಗಳನ್ನು ಎಕ್ಸಲ್ ಶೀಟ್ (ಕಂಪ್ಯೂಟರೀಕೃತ ಪಟ್ಟಿ)ನಲ್ಲೇ ನೀಡುತ್ತೇವೆ. ವ್ಯಕ್ತಿಯ ಆದಾಯ ಮೂಲಗಳು, ಸಂಬಂಧಿತ ವಿಳಾಸಗಳನ್ನೂ ಸೇರಿಸಿ ನೀಡುವುದಾಗಿ ಬೆಂಗಳೂರಿನ ಬ್ರೋಕರ್‌ಗಳು ಹೇಳುತ್ತಾರೆ. ಹೀಗೆ ನೀಡಲಾದ ಸ್ಯಾಂಪಲ್ ಪಟ್ಟಿಯನ್ನು ಪರಿಶೀಲಿಸಿ ನೋಡಿದಾಗ ಇದು ಸತ್ಯವಾಗಿತ್ತು ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಇದು ಸ್ಯಾಂಪಲ್ ಅಷ್ಟೆ, ಹಣ ನೀಡಿದರೆ ಇನ್ನಷ್ಟು ಮಾಹಿತಿಗಳು ಲಭ್ಯ ಎನ್ನುವುದು ಹೈದರಾಬಾದ್ ಮೂಲದ ಡೇಟಾ ಬ್ರೋಕರ್ ರಾಜಶೇಖರ್ ಹೇಳಿಕೆ.
ಗುರುಗ್ರಾಮ ಮೂಲದ ಡೇಟಾ ಬ್ರೋಕರ್ 3,000ಕ್ಕೂ ಹೆಚ್ಚು ಮಂದಿಯ ಆಕ್ಸಿಸ್ ಬ್ಯಾಂಕ್ ಮತ್ತು ಎಚ್‌ಡಿಎಫ್ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರ ಮಾಹಿತಿ ನೀಡಿದ್ದಾಗಿಯೂ ವರದಿಯಲ್ಲಿ ಪ್ರಸ್ತಾವವಿದೆ. ಇದರಂತೆ ದಿಲ್ಲಿಯಲ್ಲಿಯೂ ಲಕ್ಷಾಂತರ ಮಂದಿಯ ಮಾಹಿತಿ ಬಿಕರಿಯಾಗಿದೆ ಎಂದಿದೆ. ಇದಕ್ಕೊಂದು ಸಾಕ್ಷಿ ಎಂಬಂತೆ ಬೆಂಗಳೂರು ಮೂಲದ ನಾಗರಾಜ್ ಬಿ.ಕೆ. ಎನ್ನುವವರು ಪ್ರತಿಕ್ರಿಯಿಸಿದ್ದು, 7,000 ಸಾವಿರ ರೂ.ಗೆ ಮಾಹಿತಿಗಳನ್ನು ನೀಡಲಾಗಿದೆ. ನನ್ನ ಉದ್ಯಮಕ್ಕೆ ಸಂಬಂಧಿಸಿದ ಮಾಹಿತಿಗಳನ್ನೆಲ್ಲಾ ನೀಡಿರುವುದು ಗಮನಕ್ಕೆ ಬಂದಿದೆ ಎಂದಿದ್ದಾರೆ.
ಡೇಟಾ ಎಲ್ಲಿಂದ ಲಭ್ಯ?
ಎಲ್ಲ ಡೇಟಾಗಳು ಮೊಬೈಲ್ ಸೇವಾದಾರರು, ಏಜೆಂಟರು, ಆಸ್ಪತ್ರೆಗಳು, ಬ್ಯಾಂಕ್‌ಗಳಿಂದ, ಸಾಲ ಕೊಡಿಸುವ ಮಧ್ಯವರ್ತಿಗಳು, ಕಾರ್ ಡೀಲರ್‌ಗಳಿಂದ ಲಭ್ಯ ಎಂದು ದಿಲ್ಲಿ ಮೂಲದ ಡೇಟಾ ಬ್ರೋಕರ್ ರಾಜೇಶ್ ಹೇಳಿದ್ದಾರೆ.
ಅಮೆಜಾನ್ ಮೂಲಕ
ಆನ್‌ಲೈನ್‌ನಲ್ಲಿ 115ಕ್ಕೂ ಹೆಚ್ಚು ವಸ್ತುಗಳನ್ನು ಖರೀದಿಸಿದ್ದೆ. ಇದಕ್ಕೆ ನನ್ನ ಫೋನ್ ನಂಬರ್ ನೀಡಿದ್ದೆ. ಒಮ್ಮೆ ಈ ಕುರಿತಾದ ಮಾಹಿತಿ ಬಗ್ಗೆ ಪರಿಶೀಲಿಸಿದಾಗ ಅಮೆಜಾನ್‌ನಲ್ಲಿರುವ ನನ್ನ ಅಕೌಂಟ್‌ನ ಎಲ್ಲ ಮಾಹಿತಿಗಳೂ ಸರಿಯಾಗಿಯೇ ಇದ್ದವು.
ಶೃತಿ, ಬೆಂಗಳೂರು