ಮುಂಬಯಿ: ಮಹಾರಾಷ್ಟ್ರದ ಮೈತ್ರಿಕೂಟ ಸರ್ಕಾರದ ಶಿವಸೇನಾ ಶಾಸಕರು ಬಂಡಾಯ ಸಾರುವ ಮೂಲಕ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿರುವ ನಡುವೆ, ಶಿವಸೇನಾ ಮುಖಂಡ ಸಂಜಯ್ ರಾವತ್ ಅವರ ಮುಂಬಯಿ ನಿವಾಸದ ಹೊರಭಾಗದಲ್ಲಿ ಹಾಕಲಾಗಿರುವ ಬ್ಯಾನರ್ ವೈರಲ್ ಆಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಸಿಎಂ ಬೊಮ್ಮಾಯಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ ಸಾಣೇಹಳ್ಳಿ ಶ್ರೀಗಳ ಪತ್ರ
“ನಿಮ್ಮ ಸೊಕ್ಕು ಇನ್ನು ನಾಲ್ಕೇ ದಿನ, ನಮ್ಮ ರಾಜನ ಆಗಮನವಾಗುತ್ತಿದೆ” ಎಂದು ಮರಾಠಿಯಲ್ಲಿ ಬರೆಯಲಾದ ಬ್ಯಾನರ್ ಅನ್ನು ರಾವತ್ ಮನೆಯ ಹೊರಭಾಗದಲ್ಲಿ ಹಾಕಲಾಗಿದೆ.
ಪೋಸ್ಟರ್ ನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಬಾಳಾಸಾಹೇಬ್ ಠಾಕ್ರೆ, ಆದಿತ್ಯ ಠಾಕ್ರೆ, ಸಂಜಯ್ ರಾವತ್ ಹಾಗೂ ಇತರ ಪ್ರಮುಖರ ಫೋಟೊಗಳಿವೆ. ಈ ಬ್ಯಾನರ್ ಅನ್ನು ಶಿವಸೇನಾ ಕಾರ್ಪೋರೇಟರ್ ದೀಪ್ ಮಾಲಾ ಬಢೆ ಹಾಕಿರುವುದಾಗಿ ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಏಕನಾಥ ಶಿಂಧೆ ಅವರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಸಂಜಯ್ ರಾವತ್ ಹೇಳುವ ಮೂಲಕ ಬಂಡಾಯ ಶಮನಕ್ಕೆ ಮುಂದಾಗಿದ್ದಾರೆ. ಶಿವಸೇನೆಗೆ ಬೂದಿಯಿಂದ ಮೇಲೇಳುವ ಸಾಮರ್ಥ್ಯವಿದೆ. ಶಿಂಧೆ ಹಿರಿಯ ಶಿವಸೈನಿಕರಾಗಿದ್ದು, ನಾವು ಅವರನ್ನು ಬಿಟ್ಟುಕೊಡುವುದಿಲ್ಲ. ಅವರು ಕೂಡಾ ಪಕ್ಷ ಬಿಟ್ಟು ಹೋಗಲ್ಲ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯಪಾಲರಿಗೆ ಕೋವಿಡ್ ದೃಢಪಟ್ಟಿದೆ. ಹೀಗಾಗಿ ನಾವು ಕಾಯಬೇಕಾಗುತ್ತದೆ. ಶಿಂಧೆ ಜೊತೆಗಿನ ಮಾತುಕತೆ ಮುಂದುವರಿದಿದೆ. ನಾನು ಕೂಡಾ ಇಂದು ಬೆಳಗ್ಗೆ ಅವರ ಜೊತೆ ಮಾತನಾಡಿದ್ದೇನೆ. ಅವರಿಗೆ ಯಾವ ಸಮಸ್ಯೆಯೂ ಇಲ್ಲ, ಅವರು ನಮ್ಮೊಂದಿಗೆ ಇರುತ್ತಾರೆ ಎಂದು ರಾವತ್ ಹೇಳಿದರು.