Advertisement

ಮನವಿಗೆ ಮಣಿಯದ ಕಿರಿಯ ವೈದ್ಯರು

02:33 PM Oct 25, 2018 | Team Udayavani |

ದಾವಣಗೆರೆ: ಶಿಷ್ಯವೇತನಕ್ಕಾಗಿ ಕಿರಿಯ ವೈದ್ಯರು ಜಿಲ್ಲಾಸ್ಪತ್ರೆ ಆವರಣದಲ್ಲಿ ಸೋಮವಾರದಿಂದ ಆರಂಭಿಸಿರುವ ಅನಿರ್ದಿಷ್ಟಾವಧಿ ಧರಣಿ ಮುಂದುವರಿದಿದೆ.

Advertisement

ಕಳೆದ ಫೆಬ್ರವರಿಯಿಂದ ಬಾಕಿ ಇರುವ ಶಿಷ್ಯವೇತನ ಬಿಡುಗಡೆ ಸಂಬಂಧ ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ, ಸಮಸ್ಯೆ ಬಗೆಹರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌. ಶ್ರೀನಿವಾಸ್‌(ವಾಸು) ಭರವಸೆ ನೀಡಿದರೂ ಅವರ ಮಾತಿಗೆ ಮಣಿಯದ ಕಿರಿಯ ವೈದ್ಯರು ಧರಣಿ ಮುಂದುವರೆಸಲು ನಿರ್ಧರಿಸಿದ್ದಾರೆ.

ಬುಧವಾರ ವಾಲ್ಮೀಕಿ ಜಯಂತಿಯಲ್ಲಿ ಪಾಲ್ಗೊಂಡ ನಂತರ ಜಿಲ್ಲಾ ಚಿಗಟೇರಿ ಆಸ್ಪತ್ರೆ ಆವರಣದಲ್ಲಿ ಕಿರಿಯ ವೈದ್ಯರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌. ಶ್ರೀನಿವಾಸ್‌, ಅವರ ಬೇಡಿಕೆ ಆಲಿಸಿದರು. ಬಾಕಿ ಇರುವ ಶಿಷ್ಯವೇತನ ಬಿಡುಗಡೆಗೆ ಒತ್ತಾಯಿಸಿ ಕಿರಿಯ ವೈದ್ಯರು ಧರಣಿ ಆರಂಭಿಸಿರುವುದು ಗಮನಕ್ಕೆ ಬಂದ ತಕ್ಷಣ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್‌, ಇಲಾಖೆ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿದ್ದೇನೆ. ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

ಕಿರಿಯ ವೈದ್ಯರ ಪ್ರತಿನಿಧಿಗಳು ನನ್ನೊಂದಿಗೆ ಬೇಡಿಕೆಯ ಬಗ್ಗೆ ಚರ್ಚಿಸಿದ್ದಾರೆ. ಗುರುವಾರ ಆ ಪ್ರತಿನಿಧಿಗಳನ್ನು ಸಹ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೊತೆ ಚರ್ಚೆಗೆ ಕರೆದುಕೊಂಡು ಹೋಗುತ್ತೇನೆ. ಧರಣಿ ನಿರತರಲ್ಲಿ ಬಹುತೇಕರು ಶಿಷ್ಯವೇತನ ನೆಚ್ಚಿಕೊಂಡೇ ಓದುತ್ತಿದ್ದಾರೆ ಎಂಬುದು ಗೊತ್ತಿದೆ. 

ನೀವು ಸರ್ಕಾರದ ಗಮನ ಸೆಳೆದಿದ್ದೀರಿ. ಸಮಸ್ಯೆ ಬಗೆಹರಿಸುತ್ತೇನೆ. ರೋಗಿಗಳ ಹಿತದೃಷ್ಟಿಯಿಂದ ಹೋರಾಟ ನಿಲ್ಲಿಸಿ, ಸೇವೆಗೆ ಹಿಂತಿರುಗಿ ಎಂಬುದಾಗಿ ಸಚಿವರು ಮನವಿ ಮಾಡಿದರು. ಆದರೆ, ಕಿರಿಯ ವೈದ್ಯರು ಲಿಖೀತ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದರು.

Advertisement

ಸರ್ಕಾರ ದಾವಣಗೆರೆ ಮತ್ತು ಮಂಗಳೂರು ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ ಸರ್ಕಾರಿ ಕೋಟಾದ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡುತ್ತಿದೆ. ಆ ಬಗ್ಗೆ ಈಗ ಆಡಿಟ್‌ ಅಬೆಕ್ಷನ್‌ ಆಗಿದೆ. ದಾವಣಗೆರೆ ಆಸ್ಪತ್ರೆಯಿಂದ ವರ್ಷಕ್ಕೆ 75 ಲಕ್ಷದಿಂದ 1.25 ಕೋಟಿವರೆಗೆ ಆದಾಯ ಬರುತ್ತಿದೆ. ವರ್ಷಕ್ಕೆ 8-10 ಕೋಟಿಯಷ್ಟು ಶಿಷ್ಯವೇತನ ನೀಡಲಾಗುತ್ತಿದೆ ಎಂದು ಆಡಿಟ್‌ ಅಬೆಕ್ಷನ್‌ ಆಗಿರುವುದು ನಿಮಗೆ ಗೊತ್ತೇ ಇದೆ. ದಾವಣಗೆರೆ ಆಸ್ಪತ್ರೆಯಿಂದ
ಬರುವ ಆದಾಯದ ಬಗ್ಗೆ ಆದಷ್ಟು ಬೇಗ ವರದಿ ನೀಡಲು ಸಂಬಂಧಿತರಿಗೆ ಸೂಚನೆ ನೀಡಿದ್ದೇನೆ. 

ಈವರೆಗೆ ಶಿಷ್ಯವೇತನ ನೀಡುತ್ತಿರುವಂತೆ ಈಗಲೂ ನೀಡಬೇಕು ಎಂಬುದು ಸರ್ಕಾರದ ಬಯಕೆ. ಹಾಗಾಗಿಯೇ ನಾನು ಕ್ಯಾಬಿನೆಟ್‌ ಸಭೆಯಲ್ಲಿ ಚರ್ಚೆ ಮಾಡುತ್ತೇನೆ. ಹೋರಾಟ ಕೈ ಬಿಡಿ ಎಂದು ಧರಣಿನಿರತ ಕಿರಿಯ ವೈದ್ಯರನ್ನು ಮತ್ತೆ ವಿನಂತಿಸಿದರು.

ಆದರೂ, ಧರಣಿ ನಿರತರು ಒಪ್ಪಲೇ ಇಲ್ಲ. ನೀವು ಹೀಗೆ ಹೋದರೆ ನಷ್ಟವಾಗುವುದು ನಿಮಗೆ. ನಿಮ್ಮ ಸೇವೆ ನಮಗೆ ಬೇಡ. ನೀವು ಯಾವ ಕಾಲೇಜಿನಲ್ಲಿ ಓದುತ್ತಿರುವಿರೋ ಅಲ್ಲೇ ಆಸ್ಪತ್ರೆ ಮಾಡಿಕೊಂಡು, ಹೌಸ್‌ ಸರ್ಜನ್‌ ಆಗಿ ಕೆಲಸ ಮಾಡಿ ಎಂಬುದಾಗಿ ಹೇಳಿದರೆ ನಷ್ಟವಾಗುವುದು ನಿಮಗೆ. ನಿಮ್ಮಂತೆಯೇ ಹೋದರೆ ಕೆಲಸ ಆಗೊಲ್ಲ. ಹಾಗಾಗಿ ಹೋರಾಟ ಕೈ ಬಿಡಿ ಎಂದರು. ಆದರೂ, ಧರಣಿ ನಿರತರು ಪಟ್ಟು ಸಡಿಸಲಿಲ್ಲ. ಧರಣಿ ಮುಂದುವರೆಸುತ್ತೇವೆ ಎಂದು ಸಚಿವರಿಗೆ ತಿಳಿಸಿ, ಧರಣಿ ಮುಂದುವರೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next