Advertisement

ಲೋನ್‌ ಆ್ಯಪ್‌ ಸುಳಿಯಲ್ಲಿ ಕರಾವಳಿಯ ಯುವತಿಯರು!

02:48 AM Mar 08, 2022 | Team Udayavani |

ಮಂಗಳೂರು: ಸುಲಭದಲ್ಲಿ ಸಾಲ ನೀಡುತ್ತೇವೆಂದು ಹೇಳಿ ಈಗಾಗಲೇ ಕೆಲವು ಯುವಕರ ಬದುಕನ್ನೇ ಕಸಿದುಕೊಂಡಿರುವ “ಲೋನ್‌ ಆ್ಯಪ್‌’ಗಳ ಸುಳಿಯಲ್ಲಿ ಕರಾವಳಿ ಭಾಗದ ಕೆಲವು ಯುವತಿಯರು ಕೂಡ ಸಿಲುಕಿರುವುದು ಬೆಳಕಿಗೆ ಬಂದಿದೆ.

Advertisement

ತುರ್ತು ಅಗತ್ಯಕ್ಕಾಗಿ ಆ್ಯಪ್‌ ಮೂಲಕ ಸಾಲ ಪಡೆದು ಸಕಾಲದಲ್ಲಿ ಮರುಪಾವತಿಸಲು ಸಾಧ್ಯವಾಗದವರು ಮಾತ್ರವಲ್ಲದೆ, ಮರುಪಾವತಿ ಮಾಡಿದವರು ಕೂಡ ಹಿಂಸೆ ಅನುಭವಿಸುತ್ತಿದ್ದಾರೆ.

ಯುವತಿಯೋರ್ವಳು ಕುಟುಂಬದ ತುರ್ತು ಅಗತ್ಯಕ್ಕಾಗಿ “ಲೋನ್‌ ಆ್ಯಪ್‌’ ಮೂಲಕ 8,000 ರೂ. ಪಡೆದುಕೊಂಡಿದ್ದು ಬಳಿಕ ಮರುಪಾವತಿ ಮಾಡಿದ್ದರು. ಆದರೂ ಕೆಲವು ದಿನಗಳ ಅನಂತರ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಸಲಾಗಿದೆ. ಬಳಿಕ ಆಕೆಯ ಫೋಟೋವನ್ನು ಪಡೆದು ಅಶ್ಲೀಲವಾಗಿ ಎಡಿಟ್‌ ಮಾಡಿ ಆಕೆಯ ಗೆಳೆಯರು, ಸಂಬಂಧಿಕರು, ಪಕ್ಕದ ಮನೆಯವರಿಗೆ ಕಳುಹಿಸಲಾಗಿದೆ. ಇದನ್ನು ತಿಳಿದ ಯುವತಿ ಪೊಲೀಸರ ಮೊರೆ ಹೋಗಿದ್ದಾಳೆ. ಆಕೆಗೆ ಬರುತ್ತಿದ್ದ ವಾಟ್ಸ್‌ಆ್ಯಪ್‌ಕರೆಗೆ ವಾಪಸ್‌ ಕರೆ ಮಾಡಿದರೆ ಅದು ಯಾವುದೋ ಓರ್ವಳು ಮಹಿಳೆಗೆ ಸಂಪರ್ಕ ಆಗುತ್ತಿದೆ. ಆಕೆ ತನಗೇನೂ ಗೊತ್ತಿಲ್ಲ ಎನ್ನುತ್ತಿದ್ದಾಳೆ. ಕಿರುಕುಳಕ್ಕೊಳಗಾದ ಯುವತಿ ಸದ್ಯ ಸಿಮ್‌ ಬದಲಾಯಿಸಿದ್ದಾಳೆ. ಆದರೆ ಈಗ ಆಕೆಯ ಸಹೋದರಿಗೆ ನಿರಂತರ ಕರೆ ಮಾಡಿ ಕಿರುಕುಳ ನೀಡಲಾಗುತ್ತಿದೆ. ಇದೇ ರೀತಿ ಮತ್ತೋರ್ವಳು ಯುವತಿಯೂ ತೊಂದರೆಗೀಡಾಗಿದ್ದಾರೆ. ದ.ಕ.,ಉಡುಪಿ ಜಿಲ್ಲೆಯಲ್ಲಿ ಇಂತಹ ಹಲವು ಪ್ರಕರಣಗಳು ನಡೆದಿರುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮಂಗಳೂರಿನಲ್ಲಿ ಮತ್ತೆ 3 ಪ್ರಕರಣ
ಕಳೆದ ಜನವರಿಯಲ್ಲಿ ಸುರತ್ಕಲ್‌ನ ಓರ್ವ ಯುವಕ ಲೋನ್‌ ಆ್ಯಪ್‌ ಸುಳಿಗೆ ಬಿದ್ದು ಅನಾಹುತ ಮಾಡಿಕೊಂಡಿದ್ದ. ಇದೀಗ ಮತ್ತೆ ಮೂವರು ಯುವಕರು ತೊಂದರೆಗೆ ಸಿಲುಕಿರುವುದು ಬೆಳಕಿಗೆ ಬಂದಿದೆ. ಅವರಿಗೆ ಪೊಲೀಸ್‌ ಇಲಾಖೆಯಿಂದ ಸೂಕ್ತ ಮಾರ್ಗದರ್ಶನ ನೀಡಲಾಗಿದ್ದು ಸದ್ಯ ಮಾನಸಿಕವಾಗಿ ಸುಧಾರಿಸಿಕೊಳ್ಳುತ್ತಿದ್ದಾರೆ.

ಚೀನ ಲಿಂಕ್‌; ಕೇಂದ್ರ ಗುಪ್ತಚರ ಸಂಸ್ಥೆಗಳಿಂದ ತನಿಖೆ
ಲೋನ್‌ ಆ್ಯಪ್‌ ಚೀನದ ಲಿಂಕ್‌ ಇರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಕರಾವಳಿ ಭಾಗದಲ್ಲಿ ನಡೆದಿರುವ ಲೋನ್‌ ಆ್ಯಪ್‌ ಪ್ರಕರಣಗಳ ಮಾಹಿತಿಯನ್ನು ಕೇಂದ್ರ ಗುಪ್ತಚರ ಸಂಸ್ಥೆಗಳು ಪಡೆದುಕೊಂಡಿವೆ. ಇದರಲ್ಲಿ ಕಳೆದ ಜನವರಿಯಲ್ಲಿ ಸುರತ್ಕಲ್‌ನಲ್ಲಿ ಲೋನ್‌ ಆ್ಯಪ್‌ನವರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಯುವಕನ ಪ್ರಕರಣದ ವರದಿಯೂ ಸೇರಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

ಫೋಟೋ, ಸಂದೇಶಕ್ಕೆ ಹೆದರಬೇಡಿ
ಹಲವಾರು ಲೋನ್‌ ಆ್ಯಪ್‌ಗ್ಳು ಚಾಲ್ತಿಯಲ್ಲಿವೆ. ಯಾರೂ ಅವುಗಳ ಮೂಲಕ ಸಾಲ ಪಡೆಯಬಾರದು. ಈಗಾಗಲೇ ಕಿರುಕುಳ ಅನುಭವಿಸುತ್ತಿದ್ದರೆ ಕೂಡಲೇ ಸಿಮ್‌ಕಾರ್ಡ್‌ ಬದಲಾಯಿಸಬೇಕು. ಹೊಸ ನಂಬರನ್ನು ತೀರಾ ಆಪ್ತರಿಗೆ ಮಾತ್ರ ನೀಡಬೇಕು. ದುಡುಕಿ ಅನಾಹುತ ಮಾಡಿಕೊಳ್ಳುವ ಅಗತ್ಯವಿಲ್ಲ. ಎಡಿಟ್‌ ಮಾಡಿದ ಫೊಟೊ, ಬೆದರಿಕೆಯ ಸಂದೇಶಗಳನ್ನು ನಿರ್ಲಕ್ಷಿಸಿ. ಪೊಲೀಸರಿಗೆ ಮಾಹಿತಿ ನೀಡಿದರೆ ಸೂಕ್ತ ಕಾನೂನು ಪ್ರಕ್ರಿಯೆ ನಡೆಸಲು ಅನುಕೂಲವಾಗುತ್ತದೆ. ಮಾಹಿತಿಯನ್ನು ಗೌಪ್ಯವಾಗಿಡುತ್ತೇವೆ. ಈಗಾಗಲೇ ಕೆಲವು ಆ್ಯಪ್‌ಗ್ಳನ್ನು ಸರಕಾರ ನಿಷೇಧಿಸಿದೆ.
– ಹರಿರಾಂ ಶಂಕರ್‌, ಡಿಸಿಪಿ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next