ವಿಜಯಪುರ : ಪ್ರೀತಿಸುವ ನಾಟಕವಾಗಿ ಯುವತಿಯ ನಗ್ನ ಫೋಟೋ ಪಡೆದಿದ್ದ ಉತ್ತರ ಪ್ರದೇಶ ಮೂಲದ ಯುಕವನೊಬ್ಬ ಇ-ಮೇಲ್ ಮೂಲಕ ಸ್ಥಳೀಯ ಮೊಬೈಲ್ ನಂಬರ್ ಪಡೆದು ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟ ಉತ್ತರ ಪ್ರದೇಶ ರಾಜ್ಯದ ಯುವಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರ ಪ್ರದೇಶ ರಾಜ್ಯದ ಅಲಮೋರಾ ಜಿಲ್ಲೆಯ ಬನೋಳಿ ತಾಲೂಕಿನ ಡುಂಗ್ರಾ ಗ್ರಾಮದ 21 ವರ್ಷದ ರಾಜೇಂದ್ರಸಿಂಗ್ ಜೀವನಸಿಂಗ್ ಬಸ್ತಾ ಬಂಧಿತ ಆರೋಪಿ. ಸದರಿ ಆರೋಪಿ ವಿಜಯಪುರ ನಗರದ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡು, ಪ್ರೀತಿಸುವುದಾಗಿ ನಂಬಿಸಿದ್ದ. ಅಲ್ಲದೇ ಆಕೆಯ ನಗ್ನ ಫೋಟೋಗಳನ್ನು ತರಿಸಿಕೊಂಡಿದ್ದ. ನಂತರ ಆಕೆಯ ಇ-ಮೇಲ್ ಅಕೌಂಟ್ ಪಡೆದು, ಅದರಲ್ಲಿದ್ದ ಸ್ಥಳೀಯರ ಮೊಬೈಲ್ ನಂಬರ್ ಪಡೆದು ವಾಟ್ಸಾಪ್, ಇನ್‍ಸ್ಟ್ರಾಗ್ರಾಂ ಮೂಲಕ ಯುವತಿಯ ನಗ್ನ ಫೋಟೋಗಳನ್ನು ಹರಿಬಿಟ್ಟು ವಂಚಿಸಿದ್ದ.
ಈ ಬಗ್ಗೆ ಯುವತಿ ಎಸ್ಪಿ ಅವರಿಗೆ ದೂರು ನೀಡಿದಾಗ ಪ್ರಕರಣವನ್ನು ಆರ್ಥಿಕ, ಮಾದಕ ದ್ರವ್ಯ ಅಪರಾಧ ಠಾಣೆಯಲ್ಲಿ ದೂರು ದಾಖಲಿಸಲು ಸೂಚಿಸಿದ ಎಸ್ಪಿ ಅನುಪಮ್ ಅಗರವಾಲ್ ಅವರು, ಅಪರಾಧ ವಿಭಾಗದ ಪೊಲೀಸ್ ಠಾಣೆಯ ಸಿಪಿಐ ಸುರೇಶ ಬೆಂಡೆಗುಂಬಳ ಅವರ ನೇತೃತ್ವದ ತಂಡಕ್ಕೆ ತನಿಖೆಯ ಜವಾಬ್ದಾರಿ ನೀಡಿದ್ದರು. ಇದರಲ್ಲಿ ತನಿಖಾ ತಂಡ ದೆಹಲಿ ಹಾಗೂ ಉತ್ತರಪ್ರದೇಶ ರಾಜ್ಯಗಳಲ್ಲಿ ಆರೋಪಿಗಾಗಿ ಶೋದ ನಡೆಸಿತ್ತು.
ಅಂತಿಮವಾಗಿ ಆರೋಪಿಯನ್ನು ಉತ್ತರಪ್ರದೇಶ ಘಾಜಿಯಾಬಾದ್ ನಗರದಲ್ಲಿ ವಶಕ್ಕೆ ಪಡೆದು ದೆಹಲಿಯಿಂದ ವಿಮಾನ ಮಾರ್ಗವಾಗಿ ಹೈದ್ರಾಬಾದ್‍ಗೆ ಬಂದು, ಅಲ್ಲಿಂದ ವಿಜಯಪುರಕ್ಕೆ ಕರೆ ತಂದಿದ್ದಾರೆ. ಆರೋಪಿಯನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ.
ಈ ಪ್ರಕರಣದ ಬಳಿಕ ವಿಜಯಪುರ ಸೈಬರ್ ಕ್ರೈ ಠಾಣೆಯ ಪೊಲೀಸರು ಜಿಲ್ಲೆಯ ಯುವ ಸಮೂಹ ಸಾಮಾಜಿಕ ಜಾಲತಾಣಗಳ ಮೂಲಕ ಅದರಲ್ಲೂ ಯುವತಿಯರು ಮೋಸಕ್ಕೆ ಒಳಗಾದ ಈ ಪ್ರಕರಣ ಎಚ್ಚರಿಕೆಗೆ ಮಾದರಿಯಾಗಿದೆ. ಹೀಗಾಗಿ ಯುವ ಸಮೂಹ ಎಚ್ಚೆತ್ತುಕೊಳ್ಳಬೇಕು. ಅಲ್ಲದೇ ಸದರಿ ಪ್ರಕರಣವನ್ನು ಅದರಲ್ಲೂ ಅನ್ಯರಾಜ್ಯದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ತನಿಖಾ ತಂಡದ ಕಾರ್ಯವನ್ನು ಎಸ್ಪಿ ಅನುಪಮ್ ಅಗರವಾಲ್ ಶ್ಲಾಘಿಸಿದ್ದಾರೆ.