ಸಿದ್ದಾಪುರ: ಶಂಕರನಾರಾಯಣ ಗ್ರಾಮದ ಕುಳ್ಳುಂಜೆ ಗುಂಡು ಕೊಡ್ಲು ಲಕ್ಷ್ಮಣ ನಾಯ್ಕ ಅವರ ಪುತ್ರಿ ಅಮಿತಾ (21) ಅವರು ಬುಧವಾರ ಬೆಳಗ್ಗೆ ವಾರಾಹಿ ಹೊಳೆಗೆ ಬಟ್ಟೆ ತೊಳೆಯಲು ಹೋದವಳು ನಾಪತ್ತೆ ಆಗಿದ್ದು, ಹೊಳೆಯಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಘಟನೆ ವಿವರ
ಬುಧವಾರ ಬೆಳಗ್ಗೆ 9.30ರ ಹೊತ್ತಿಗೆ ಹೊಳೆಗೆ ಬಟ್ಟೆ ತೊಳೆಯಲು ಹೋಗುತ್ತೇನೆ ಎಂದು ತಾಯಿಯಲ್ಲಿ ಹೇಳಿ ಹೋಗಿದ್ದ ಅಮಿತಾ ತುಂಬಾ ಹೊತ್ತಾದರೂ ಬರಲಿಲ್ಲ. ತಾಯಿ ಹುಡುಕಿಕೊಂಡು ಹೋದಾಗ ಬಟ್ಟೆ ಹಾಗೂ ಯುವತಿಯ ಚಪ್ಪಲಿ ಹೊಳೆ ದಂಡೆಯ ಬಂಡೆಯ ಮೇಲಿತ್ತು. ಗಾಬರಿಗೊಂಡ ತಾಯಿ ಕೂಡಲೆ ಪತಿ ಲಕ್ಷ್ಮಣ ನಾಯ್ಕ ಅವರಿಗೆ ತಿಳಿಸಿದರು. ಬಳಿಕ ಪೊಲೀಸರು ಹಾಗೂ ಹಾಗೂ ಅಗ್ನಿಶಾಮಕದಳದವರಿಗೆ ತಿಳಿಸಲಾಯಿತು. ಯುವತಿ ಬಟ್ಟೆ ತೊಳೆಯಲು ಬಂದ ಸ್ಥಳ ಅಪಾಯಕಾರಿಯಾಗಿದ್ದು, ಆಳ ಮತ್ತು ಸುಳಿಯಿಂದ ಕೂಡಿದೆ ಎನ್ನಲಾಗಿದೆ.
ಅಗ್ನಿ ಶಾಮಕದಳದವರು, ಪೊಲೀಸರು ಹಾಗೂ ಸ್ಥಳೀಯ ಮುಳುಗು ತಜ್ಞರು ಹೊಳೆಯಲ್ಲಿ ಶೋಧ ನಡೆಸಿದರು. ಆದರೆ ಯುವತಿ ಪತ್ತೆಯಾಗಿಲ್ಲ. ಗುರುವಾರ ಹುಡುಕಾಟ ಮುಂದುವರಿಯಲಿದೆ.
ಲಕ್ಷ್ಮಣ ನಾಯ್ಕರ ಇಬ್ಬರು ಪುತ್ರಿಯರಲ್ಲಿ ಅಮಿತಾ ಹಿರಿಯವಳಾ ಗಿದ್ದು, ಮತ್ತೂಬ್ಬಳು ವಿದ್ಯಾರ್ಥಿನಿಯಾಗಿದ್ದಾಳೆ. ಅಮಿತಾ ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಬಾರಿ ಬಿ.ಕಾಂ. ಪರೀಕ್ಷೆ ಬರೆದಿದ್ದು, ಫಲಿತಾಂಶ ಬರಬೇಕಾಗಿದೆ. ಲಕ್ಷ್ಮಣ ನಾಯ್ಕ ಅವರು ಗಾರೆ ಕೆಲಸ ಮಾಡುತ್ತಿದ್ದಾರೆ.
ಘಟನ ಸ್ಥಳಕ್ಕೆ ಜಿ. ಪಂ. ಸದಸ್ಯ ರೋಹಿತ್ ಕುಮಾರ ಶೆಟ್ಟಿ, ಶಂಕರನಾರಾಯಣ ಗ್ರಾ. ಪಂ. ಅಧ್ಯಕ್ಷ ರವಿ ಕುಲಾಲ ಮೊದಲಾದವರು ಭೇಟಿ ನೀಡಿದರು. ಲಕ್ಷ್ಮಣ ನಾಯ್ಕ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದೆ.