ಬೆಂಗಳೂರು: ಪ್ರೇಮ ವೈಫಲ್ಯದಿಂದ ಮನನೊಂದು ಯುವತಿಯೊಬ್ಬರು ಕಬ್ಬನ್ ಪಾರ್ಕ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಡಿಸೋಜಾ ಲೇಔಟ್‌ನ ಸಂತೋಷಿ (21) ಆತ್ಮಹತ್ಯೆ ಶರಣಾದವಳು. ಶನಿವಾರ ರಾತ್ರಿ ಕಬ್ಬನ್ ಪಾರ್ಕ್‌ನ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಪಾರ್ಕ್ ಪ್ರವೇಶಿಸಿದ ಸಂತೋಷಿ, ಸಿದ್ದಲಿಂಗಯ್ಯ ವೃತ್ತದ ಬಳಿ ಮರವೊಂದಕ್ಕೆ ತನ್ನ ವೇಲ್‌ನಿಂದ ನೇಣು ಬಿಗಿದುಕೊಂಡಿದ್ದಾಳೆ.
ಭಾನುವಾರ ಬೆಳಗ್ಗೆ 5.30ಕ್ಕೆ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಮೃತ ಯುವತಿಯ ಪೋಷಕರು ನೀಡಿದ ದೂರಿನ ಮೇರೆಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಯುವತಿಯ ಪ್ರಿಯಕರ ನರೇಶ್ (28) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೇಪಾಳ ಮೂಲದ ಸಂತೋಷಿ, ದ್ವಿತೀಯ ಪಿಯುಸಿ ವ್ಯಾಸಂಗ ಮುಗಿಸಿ ಎರಡು ವರ್ಷದಿಂದ ನಗರದ ಸ್ಪಾ ಒಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಈಕೆಯ ತಂದೆ ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದಾರೆ. ಈ ಮಧ್ಯೆ ಅದೇ ಸ್ಪಾದಲ್ಲಿ ಕೆಲಸ ಮಾಡುತ್ತಿದ್ದ ನರೇಶ್ ಜತೆ ಸಂತೋಷಿಗೆ ಪ್ರೇಮಾಂಕುರವಾಗಿತ್ತು. ಇದನ್ನು ತಿಳಿದ ಸ್ಪಾ ಮುಖ್ಯಸ್ಥರು, ಇಬ್ಬರನ್ನೂ ಕೆಲಸದಿಂದ ತೆಗೆದಿದ್ದರು.
ಇದಾದ ಬಳಿಕ ಮದುವೆ ವಿಚಾರದಲ್ಲಿ ಇಬ್ಬರ ಮಧ್ಯೆ ಹಲವು ಬಾರಿ ಜಗಳವಾಗಿತ್ತು. “ನಿನ್ನ ನಡವಳಿಕೆ ಸರಿಯಿಲ್ಲ. ಹೀಗಾಗಿ ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ’ ಎಂದು ನರೇಶ್ ಹೇಳಿದ್ದ. ಇದನ್ನು ಸಂತೋಷಿ ತನ್ನ ಪೋಷಕರಿಗೂ ತಿಳಿಸಿದ್ದಳು. ಶನಿವಾರ ಬೆಳಗ್ಗೆ ಮತ್ತೆ ನರೇಶ್‌ನನ್ನು ಭೇಟಿಯಾಗಿದ್ದ ಸಂತೋಷಿ, ಮದುವೆ ವಿಷಯ ಪ್ರಸ್ತಾಪಿಸಿದ್ದು,
ಆತ ಹಿಂದಿನಂತೆಯೇ ಕಾರಣ ಹೇಳಿ ನಿರಾಕರಿಸಿದ್ದ. ಮದುವೆಯಾಗಲು ಸಾಧ್ಯವೇ ಇಲ್ಲ ಎಂದು ಕಡಾಖಂಡಿತವಾಗಿ ಹೇಳಿ ಆಕೆಯನ್ನು ಮನೆ ಬಳಿ ಬಿಟ್ಟಿದ್ದ. ಈ ವೇಳೆ ಸಂತೋಷಿ ಪೋಷಕರು ನರೇಶ್‌ನನ್ನು ಕರೆದು ಪುತ್ರಿಯನ್ನು ಮದುವೆಯಾಗುವಂತೆ ಕೇಳಿಕೊಂಡರೂ ಒಪ್ಪದೆ ಅಲ್ಲಿಂದ ಹೊರಹೋಗಿದ್ದ.
ಇದಾದ ಬಳಿಕ ಸಂಜೆಯವರೆಗೂ ಮನೆಯಲ್ಲಿ ಮೌನವಾಗಿ ಕೂತಿದ್ದ ಸಂತೋಷಿ, ಸಂಜೆ ಮನೆಯಿಂದ ಹೊರಟಿದ್ದು, ರಾತ್ರಿ ವೇಳೆ ಕಬ್ಬನ್ ಪಾರ್ಕ್ ಬಳಿ ಬಂದು ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಒಳಗಡೆ ಹೋಗಿದ್ದಾಳೆ. ನಂತರ ತಾನು ಹಾಕಿಕೊಂಡು ಬಂದಿದ್ದ ವೇಲ್‌ನಲ್ಲೇ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಭದ್ರತಾ ವ್ಯವಸ್ಥೆ ಲೋಪ!: ರಾತ್ರಿ 8 ಗಂಟೆ ಬಳಿಕ ಕಬ್ಬನ್ ಪಾರ್ಕ್‌ನಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧವಿದೆ. ಹೀಗಿದ್ದರೂ ಯುವತಿ ಪಾರ್ಕ್ ಒಳಗಡೆ ಬಂದಿದ್ದು ಹೇಗೆ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಪಾರ್ಕ್‌ಗೆ ಅಳವಡಿಸಿರುವ ಮೆಷ್ (ಜಾಲರಿ) ಅಲ್ಲಲ್ಲಿ ಮುರಿದು ಹೋಗಿದ್ದು, ಅದರ ಮೂಲಕ ಸಂತೋಷಿ ಒಳಗಡೆ ಬಂದು ಆತ್ಮಹತ್ಯೆ ಮಾಡಿಕೊಂಡಿರಬಹುದು. ಹೀಗಾಗಿ ಆಕೆ ಪಾರ್ಕ್ ಒಳಗೆ ಬಂದಿರುವುದು ಭದ್ರತಾ ಸಿಬ್ಬಂದಿ ಗಮನಕ್ಕೆ ಬಂದಿಲ್ಲ ಎಂದು ಹೇಳಲಾಗಿದೆ.