ಬೆಂಗಳೂರು : “ಕನ್ನಡಿಗರ ಪ್ರೀತಿ, ಸಹಕಾರ, ಚಿತ್ರರಂಗದ ಬೆಂಬಲ ಮತ್ತು ಪ್ರೋತ್ಸಾಹದಿಂದಾಗಿಯೇ ನಾನು ಈ ಗೌರವಕ್ಕೆ ಪಾತ್ರಳಾಗಲು ಮುಖ್ಯ ಕಾರಣ’ ಎಂದು ಪದ್ಮಶ್ರೀ ಪುರಸ್ಕೃತೆ ಡಾ.ಭಾರತಿ ವಿಷ್ಣುವರ್ಧನ್ ಹೇಳಿದರು.
ಗಾಂಧಿಭವನದಲ್ಲಿ ಶನಿವಾರ ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಪದ್ಮಶ್ರೀ ಹಾಗೂ 64ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
“ಈ ಪ್ರಶಸ್ತಿ ನನ್ನ ಯಜಮಾನರಿಗೆ ಬರಬೇಕಿತ್ತು. ಆದರೆ, ಬರಲಿಲ್ಲ. ಆದರೆ, ಅವರು ಎಂದೆಂದಿಗೂ ನನ್ನೊಂದಿಗೇ ಇದ್ದಾರೆಂದು ಭಾವಿಸಿದ್ದೇನೆ’ ಎಂದು ಹೇಳುತ್ತಲೇ ಕ್ಷಣಕಾಲ ಭಾವುಕರಾದರು.
ರಾಷÅಪ್ರಶಸ್ತಿ ವಿಜೇತರ ಪೈಕಿ ಮಾತನಾಡಿದ ನಿರ್ದೇಶಕ-ನಟ ನಿಖೀಲ್ ಮಂಜು, “ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗ ಎಲ್ಲೆಡೆ ಸುದ್ದಿಯಾಗುತ್ತಿದೆ. ಹೊಸ ಹೊಸ ಪ್ರಯೋಗಗಳೇ ಇಲ್ಲಿ ಹೆಚ್ಚಾಗುತ್ತಿವೆ. ಅದರಲ್ಲೂ ಹೊಸಬರೇ ಹೆಚ್ಚು ಹೊಸ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ. ಕಲಾತ್ಮಕ ಚಿತ್ರಗಳಿಂದ ಕನ್ನಡತನ, ಸಂಸ್ಕೃತಿ, ಭಾಷೆ ಉಳಿಯುತ್ತದೆಂಬ ಭಾವನೆ ನನ್ನದು. ಈ ರೀತಿಯ ಚಿತ್ರಗಳು ಇನ್ನಷ್ಟು ಹೆಚ್ಚಬೇಕು ಎಂದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್‌ಬಾಬು ಮಾತನಾಡಿ, “ಮುಂದಿನ ದಿನಗಳಲ್ಲಿ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಕನ್ನಡ ಸಿನಿಮಾಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಬೆಂಗಳೂರು, ಮಂಗಳೂರು, ಧಾರವಾಡ ಸೇರಿ ರಾಜ್ಯದ
ಪ್ರಮುಖ ನಗರಗಳಲ್ಲಿ ಒಂದು ವಾರ ಚಿತ್ರೋತ್ಸವ ನಡೆಸುವ ಪ್ರಯತ್ನ ಮಾಡಲಾಗುವುದು. ರಾಜ್ಯ ಸರ್ಕಾರ 300 ಜನತಾ ಚಿತ್ರಮಂದಿರಗಳನ್ನು ಘೋಷಣೆ ಮಾಡಿದೆ. ಮುಂದಿನ ದಿನಗಳಲ್ಲಿ ಅಲ್ಲೂ ಸಹ ಇಂತಹ ಪ್ರಶಸ್ತಿ ಪಡೆದ ಚಿತ್ರಗಳು ಪ್ರದರ್ಶನವಾಗಲು ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಲಾಗುವುದು’ ಎಂದರು.
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಮಾತನಾಡಿ, “ರಾಜ್ಯ ಪ್ರಶಸ್ತಿಗಳಿಗೆ ಆದಷ್ಟು ಕನ್ನಡತನ ಇರುವಂತಹ ಚಿತ್ರಗಳನ್ನೇ ಆಯ್ಕೆ ಮಾಡಬೇಕು.ಅದಕ್ಕೆ ಮೊದಲ ಆದ್ಯತೆ ನೀಡಬೇಕು’ ಎಂದರು. ಶಾಸಕ ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ಸೂರಪ್ಪ ಬಾಬು ಸೇರಿ ಇತರರು ಇದ್ದರು.