Advertisement

Gokarna ಯುವ ಚೇತನಗಳು ಗುರುತ್ವಾಕರ್ಷಣೆಗೆ ಒಳಗಾಗಬೇಕು: ರಾಘವೇಶ್ವರ ಶ್ರೀ

12:04 AM Sep 11, 2023 | Team Udayavani |

ಗೋಕರ್ಣ: ಯುವ ಮನಸ್ಸುಗಳನ್ನು ಗುರುತ್ವಾ ಕರ್ಷಣೆಗೆ ಗುರಿಪಡಿಸಿದಾಗ ಇಡೀ ಯುವಚೇತನ ಸತ್ಪಥದಲ್ಲಿ ಸುತ್ತುತ್ತಿರುತ್ತದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

Advertisement

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಚಾತುರ್ಮಾಸ್ಯ ಸಂದರ್ಭದಲ್ಲಿ ನಡೆದ ಬೃಹತ್‌ ಯುವ ಸಮಾವೇಶದಲ್ಲಿ ಶ್ರೀಸಂದೇಶ ಅನುಗ್ರಹಿಸಿದ ಅವರು, ಮಠದ ಭವಿಷ್ಯಕ್ಕೆ ಯುವಕರು ಬೇಕು. ಯುವಕರ ಭವಿಷ್ಯಕ್ಕಾಗಿ ಮಠ ಬೇಕು. ಬಾಲ್ಯದಲ್ಲೇ ಮಕ್ಕಳನ್ನು ಮಠಕ್ಕೆ ಕರೆತಂದು, ನಮ್ಮ ಆಚಾರ ವಿಚಾರಗಳು, ಸಂಸ್ಕೃತಿ ಪರಂಪರೆ, ಆಹಾರ ವಿಹಾರಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಮಠಗಳು ನೀಡುವ ಸಂಸ್ಕಾರ ಬೇರೆ ಎಲ್ಲಿಂದಲೂ ಸಿಗದು ಎಂದು ಅಭಿಪ್ರಾಯಪಟ್ಟರು.

ಇಸ್ರೋ ವಿಜ್ಞಾನಿಗೆ ಗೌರವ
ಇದೇ ಸಂದರ್ಭದಲ್ಲಿ ಶ್ರೀಮಠದಿಂದ ಇಸ್ರೋದ ಬಾಹ್ಯಾ ಕಾಶ ವಿಭಾಗದ ಹಿರಿಯ ವಿಜ್ಞಾನಿ ಡಾ| ರಾಧಾಕೃಷ್ಣ ವಾಟೆಡ್ಕ ಅವರಿಗೆ ವಿಷ್ಣುಗುಪ್ತ ಸಮ್ಮಾನ ಪ್ರದಾನಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಅವರು, ನನಗೆ ಸಂದ ಗೌರವ ಇಸ್ರೋಗೆ ಸಮರ್ಪಣೆ. 140 ಕೋಟಿ ಭಾರತೀಯರ ಆಶೋತ್ತರಗಳು, ಪರಮಪೂಜ್ಯರ ಅನುಗ್ರಹ, ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ವಿಕ್ರಂ ಸಾರಾಭಾಯಿ, ಯು.ಆರ್‌. ರಾವ್‌ ಅವರ ದೂರದೃಷ್ಟಿಯಿಂದಾಗಿ ಇಸ್ರೊ ಇಂದು ಜಾಗತಿಕ ಮಟ್ಟದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್‌ ಹಾರ್ನಹಳ್ಳಿ , ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮಾತನಾಡಿದರು.

ನೀರ್ನಳ್ಳಿಗೆ ಪ್ರಶಸ್ತಿ ಪ್ರದಾನ
ಹಿರಿಯ ಕಲಾವಿದ ನೀರ್ನಳ್ಳಿ ಗಣಪತಿ ಅವರಿಗೆ ಉಂಡೆಮನೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪರಂಪರಾ ಗುರುಕುಲದ ಮಕ್ಕಳು ಹಾಡಿದ ಹವ್ಯಕ ಗೀತೆಗೆ ಹಿರಿಯ ಕಲಾವಿದ ನೀರ್ನಳ್ಳಿ ಗಣಪತಿ ಮತ್ತು ಯುವ ಕಲಾವಿದೆ ಶ್ರೀಲಕ್ಷಿ ಚಿತ್ರದ ಅಭಿವ್ಯಕ್ತಿ ನೀಡುವ ಗೀತಗಾಯನ ಜುಗಲ್‌ಬಂದಿ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ 11 ಮಂದಿಗೆ ಯುವ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next