Advertisement

ಯುವಶಕ್ತಿ ಸತ್ಯದ ದಾರಿ ಹಿಡಿಯಲಿ

03:48 PM May 02, 2017 | |

ಕಲಬುರಗಿ: ನಮ್ಮ ಯುವ ಜನಾಂಗ ತುಂಬಾ ಅಪಾಯಕಾರಿ ಸ್ಥಿತಿಯಲ್ಲಿದೆ. ಸರಿಯಾದ ಮಾರ್ಗದರ್ಶನ ಮತ್ತು ತಿಳವಳಿಕೆ ಕೊರತೆಯಿಂದ ಕೇವಲ ಭ್ರಮಾಲೋಕದಲ್ಲಿದೆ. ವಾಸ್ತವ ಶಕ್ತಿಗಳ ಅರಿವಿಲ್ಲದೆ ಅಪಾರ ಶಕ್ತಿ ವ್ಯಯವಾಗುತ್ತಿದೆ. ಆದ್ದರಿಂದ ಯುವಕರು ಸಾಂದರ್ಭಿಕ ಸತ್ಯಗಳನ್ನು ಅರ್ಥ ಮಾಡಿಕೊಂಡು ಸತ್ಯದ ದಾರಿ ಹಿಡಿಯಲಿ ಎಂದು ಹಿರಿಯ ಬಂಡಾಯ ಸಾಹಿತಿ ಡಾ| ಚನ್ನಣ್ಣ ವಾಲಿಕಾರ ಹೇಳಿದರು. 

Advertisement

ನಗರದ ರೇಷ್ಮೆ ಭವನದ ಬಳಿಯಲ್ಲಿ ಸೋಮವಾರ ಎಐಟಿಯುಸಿ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಧ್ವಜಾರೋಹಣ ಹಾಗೂ ಕಾರ್ಯಕ್ರಮ ಉದ್ಘಾಟಿಸಿ ಆವರು ಮಾತನಾಡಿದರು. ಯುವಕರು ಮಾಕ್ಸ್‌ವಾದ, ಲೆನಿನ್‌ವಾದವನ್ನು ಸರಿಯಾಗಿ ಓದಿ ತಿಳಿದುಕೊಳ್ಳಬೇಕು.

ಆದ್ದರಿಂದ ಇಂತಹ ರ್ಯಾಲಿಗಳು, ಬಹಿರಂಗ ಸಭೆಗಳು, ವೇತನ ಮತ್ತಿತರ ಬೇಡಿಕೆಗಳ ಕುರಿತು ತಿಳಿದರೆ ಸಾಲುವುದಿಲ್ಲ. ನಿಮ್ಮ ಗುರಿಗಳನ್ನು ನಿಚ್ಚಳ ಮಾಡಿಕೊಳ್ಳಿ. ಕಾರ್ಮಿಕ ವರ್ಗದ ಅಂತಿಮ ಗುರಿ ಬಗ್ಗೆ ಪ್ರತಿ ಕಾರ್ಮಿಕ ಬಂಧುಗಳ ಸಮಸ್ಯೆ ತಿಳಿವಳಿಕೆ ಪಡೆದು ಅದರತ್ತ ಹಂತ ಹಂತವಾಗಿ ಮುನ್ನಡೆಯಬೇಕು ಎಂದು ಹೇಳಿದರು. 

ಹೋರಾಟಗಳಿಂದಲೇ ನಮ್ಮ ಮುಂದಿನ ಬದುಕನ್ನು ಸರಿಯಾಗಿ ಮಾಡಿಕೊಳ್ಳಲು ಸಾಧ್ಯವೇ ಹೊರತು, ಮಾತುಕತೆಯಿಂದಲೂ ಸಾಧ್ಯವಾಗುತ್ತದೆ. ಆದರೆ ಅವುಗಳು ಅಪಾರ ಸಮಯ ಹಾಳು ಮಾಡುತ್ತವೆ. ಆದ್ದರಿಂದ ಜಗತ್ತು ಒಪ್ಪಿಕೊಂಡ ಕೆಂಬಾವುಟ ಪ್ರತಿ ಮನೆಗೂ ತಲುಪಲಿ ಎಂದು ಹೇಳಿದರು. 

ಎನ್‌ಇಕೆಆರ್‌ಟಿಸಿ ಅಧ್ಯಕ್ಷ ಮಹಮ್ಮದ್‌ ಇಲಿಯಾಸ್‌ ಬಾಗಬಾನ್‌ ಮಾತನಾಡಿ, ಸಂವಿಧಾನ ಅಡಿ ಎಲ್ಲ ಕಾರ್ಮಿಕರ ಹಕ್ಕುಗಳನ್ನು ಸಂರಕ್ಷಣೆ ಮಾಡಲಾಗಿದೆ. ಅದರಂತೆ ಸರಕಾರದ ಹಾಗೂ ಆಡಳಿತ ಸಂಸ್ಥೆಗಳಲ್ಲಿ ಸೌಕರ್ಯ ಮತ್ತು ಕಾಯಕಲ್ಪ ನೀಡಲಾಗುತ್ತಿದೆ ಎಂದು ಹೇಳಿದರು. 

Advertisement

ಮುಖ್ಯ ಅತಿಥಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ ಮಾತನಾಡಿ, ದೇಶಕ್ಕೆ ಸ್ವಾತಂತ್ರ ಬಂದು 8 ದಶಕಗಳು ಕಳೆದಿವೆ. ಆದರೂ ಇನ್ನೂ ಕಾರ್ಮಿಕರಿಗೆ ತಮ್ಮ ಹಕ್ಕುಗಳಿಗಾಗಿ ಬೀದಿಗೆ ಇಳಿದು ಹೋರಾಟ ಮಾಡಬೇಕಾದ ಪರಿಸ್ಥಿತಿ ಇದೆ. ದೇಶ ಮತ್ತು ರಾಜ್ಯದಲ್ಲಿ ಜೀತ ಪದ್ಧತಿಯೂ ಇದೆ. 

ಇದೆಲ್ಲವನ್ನು ಹೋಗಲಾಡಿಸಲು ಪ್ರತಿ ಹಂತದಲ್ಲಿ ಹೋರಾಟ ಮಾಡಬೇಕಿದೆ ಎಂದು ಹೇಳಿದರು. ಪರ್ಯಾಯ ಸಮಾಜಕಾರ್ಯ ಕಾಲೇಜಿನ ಪ್ರಾಚಾರ್ಯ ಪ್ರೋ| ಮಹೇಶಕುಮಾರ ರಾಠೊಡ ಮಾತನಾಡಿದರು. ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಪ್ರಭುದೇವ ಯಳಂಸಗಿ ಅಧ್ಯಕ್ಷತೆ ವಹಿಸಿದ್ದರು.

ಶರಣಬಸಪ್ಪ ಗಣಜಲಖೇಡ, ಎಚ್‌.ಸಿ. ಪತಕಿ, ಜಗದೇವಿ ನೂಲಕರ್‌, ಶಾರದಾ ಹಿರೇಮಠ, ನಾಗಮ್ಮ ಗುಡ್ಡಾ, ಲಕ್ಷ್ಮಿಕಾಂತ ಬಿರಾದಾರ, ಶಾಹಾಬುದ್ಧಿನ್‌ ಎಲ್‌ಐಸಿ ನೌಕರರ ಸಂಘದ ಮುಖಂಡ ಸಿ.ಕೆ. ವಿಜೇಂದ್ರ, ಎಐಟಿಯುಸಿ ರಾಷೀಯ ಮಂಡಳಿ ಸದಸ್ಯ ಸಿದ್ದಪ್ಪ ಪಾಲ್ಕಿ, ಕೆಎಸ್‌ಆರ್‌ಟಿಸಿ ಸ್ಪಾಪ್‌ ಆ್ಯಂಡ್‌ ವರ್ಕಸ್‌ ಯೂನಿಯನ್‌ನ ನಂದಪ್ಪ ಜಮಾದಾರ, 

ಮಹಾದೇವಪ್ಪ, ರತ್ನಪ್ಪ ಜೈನ್‌, ಅಂಗನವಾಡಿ ಫೇಡರೇಷನ್‌ನ ಜಗದೇವಿ ಹುಲಿ, ಮಾನಪ್ಪ ಇಜೇರಿ, ಹಣಮಂತರಾಯ ಅಟ್ಟೂರ ಇದ್ದರು. ರಾಮು ಗುತ್ತೇದಾರ ಸ್ವಾಗತಿಸಿದರು. ಸಂಗಣ್ಣ ಹೊಸಮನಿ ಕ್ರಾಂತಿ ಗೀತೆ ಹಾಡಿದರು. ಅಬ್ದುಲ ಕಲಿಂ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next