ಹುಬ್ಬಳ್ಳಿ: ಯುವಕರು ಎಂಜಿನಿಯರ್, ಡಾಕ್ಟರ್ ಆಗಲು ಆಸಕ್ತಿ ತೋರುವಂತೆ ಭಾರತೀಯ ಸೇನೆ ಸೇರಲು ಆಸಕ್ತಿ ತೋರಬೇಕು ಎಂದು ನಿವೃತ್ತ ಸೇನಾಧಿಕಾರಿ ಬಸಪ್ಪ ಜಿನ್ನೂರ ಹೇಳಿದರು.
ಗ್ಲೋಬಲ್ ಕಾಲೇಜ್ ಆಫ್ ಮ್ಯಾನೇಜ್ ಮೆಂಟ್, ಐಟಿ ಹಾಗೂ ಕಾಮರ್ಸ್ ವತಿಯಿಂದ ಭಾರತೀಯ ಸೈನಿಕರಿಗೆ ಗೌರವ
ನೀಡಲು ಬುಧವಾರ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಆಯೋಜಿಸಿದ್ದ ಸ್ವಾಭಿಮಾನ ಕಾರ್ಯಕ್ರಮದಲ್ಲಿ ಅವರು
ಮುಖ್ಯ ಅತಿಥಿಯಾಗಿ ಮಾತನಾಡಿದರು.
ದೇಶಕ್ಕೆ ಎಂಜಿನಿಯರ್‌ಗಳು, ವೈದ್ಯರ, ವ್ಯವಸ್ಥಾಪಕರ ಅವಶ್ಯತೆಯಿದ್ದಂತೆ ದೇಶ ರಕ್ಷಣೆಗೆ ಸೈನಿಕರ ಅವಶ್ಯಕತೆ ಕೂಡ ಇರುತ್ತದೆ. ಆಸಕ್ತ ಯುವಕರು ಭಾರತೀಯ ಸೇನೆ ಸೇರಬೇಕು. ದೇಶಸೇವೆಯ ಸತ್ಕಾರ್ಯ ಮಾಡಬೇಕು ಎಂದರು.
ಸೇನಾಧಿಕಾರಿ ಪರಶುರಾಮ ದಿವಾನದ ಮಾತನಾಡಿ, ಭಾರತದ ಸೈನಿಕರು ಗಡಿಯಲ್ಲಿ ಪಾಕಿಸ್ತಾನ ಹಾಗೂ ಚೀನಾ ದಾಳಿಗೆ ಪ್ರತ್ಯುತ್ತರ ನೀಡಿದಾಗ ಮಾತ್ರ ನಮ್ಮ ಜನರಿಗೆ ಸೈನಿಕರ ಬಗ್ಗೆ ಗೌರವ ಮೂಡುತ್ತದೆ.ಉಳಿದ ಸಂದರ್ಭದಲ್ಲಿ
ಸೈನಿಕರು ಮಾಡುವ ಕಾರ್ಯವನ್ನು ಯಾರೂ ಕೂಡ ಶ್ಲಾಘಿಸುವುದಿಲ್ಲ ಎಂದರು.
ಸೈನಿಕರು ದಿನದ 24 ಗಂಟೆ ವರ್ಷದ 12 ತಿಂಗಳು ಗಡಿಯಲ್ಲಿ ದೇಶ ಕಾಯುತ್ತಾರೆ. ಶತ್ರುಗಳು ಗಡಿಯಲ್ಲಿ ನುಸುಳದಂತೆ
ತಡೆಯುತ್ತಾರೆ. ಹವಾಮಾನ ವೈಪರಿತ್ಯ ಸಂದರ್ಭದಲ್ಲಿ ಕೂಡ ದೇಶ ಕಾಯುವ ಕಾಯಕ ಮಾಡುತ್ತಾರೆ ಎಂದರು.
ಆಸಕ್ತರು ಭಾರತೀಯ ಸೈನ್ಯ ಸೇರಬಹುದು. ಭೂಸೇನೆ, ವಾಯುಸೇನೆ ಹಾಗೂ ಜಲಸೇನೆಯಲ್ಲಿ ಸಾಕಷ್ಟು ಅವಕಾಶಗಳಿದ್ದು, ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.
ಯುವಕರು ದೃಢಸಂಕಲ್ಪ ಮಾಡಿದರೆ ಯಾವುದೇ ಕ್ಷೇತ್ರದಲ್ಲಾದರೂ ಅಮೋಘ ಸಾಧನೆ ಮಾಡಲು ಸಾಧ್ಯ. ಗುರಿ ಇಟ್ಟುಕೊಂಡು ನಿರಂತರ ಕಾರ್ಯಪ್ರವೃತ್ತರಾಗಬೇಕು ಎಂದರು. ಇದೇ ಸಂದರ್ಭದಲ್ಲಿ ಗ್ಲೋಬಲ್ ಕಾಲೇಜ್ ಆಫ್ ಕಾಮರ್ಸ್ ಹಳೆ ವಿದ್ಯಾರ್ಥಿಗಳ ಅಸೋಸಿಯೇಶನ್ ಉದ್ಘಾಟಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಲಾಯಿತು. ಗ್ಲೋಬಲ್ ಎಜುಕೇರ್ ಫೌಂಡೇಶನ್ ಅಧ್ಯಕ್ಷ ಎನ್.ಬಿ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಡಾ| ಮಹೇಶ ದೇಶಪಾಂಡೆ, ಪುಷ್ಪಾ ಹಿರೇಮಠ, ಸಚಿನಕುಮಾರ, ಸವಿತಾ ಶೇಜವಾಡಕರ ವೇದಿಕೆ ಮೇಲಿದ್ದರು.