ವಿಜಯಪುರ: ರಾಷ್ಟ್ರ ನಿರ್ಮಾಣ ಹಾಗೂ ಭಾವೈಕ್ಯತೆ ಭಾವನೆ ಬೆಳೆಸುವುದು ಯುವಕರ ಆದ್ಯ ಕರ್ತವ್ಯ ಎಂದು ಜಾವೇದ್ ಜಮಾದಾರ ಹೇಳಿದರು. ವಿಜಯಪುರದ ಅಂಜುಮನ್ ಬಿ.ಎಡ್ ಕಾಲೇಜು ಸಭಾಭವನದಲ್ಲಿ ನೆಹರು ಯುವ ಕೇಂದ್ರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಜಿಲ್ಲಾ ಎನ್ನೆಸ್ಸೆಸ್ ಘಟಕ ಅಂಜುಮನ್ ಇಸ್ಲಾಮ ಸಂಸ್ಥೆ ಆಶ್ರಯದಲ್ಲಿ ದೇಶಭಕ್ತಿ ಹಾಗೂ ರಾಷ್ಟ್ರ ನಿರ್ಮಾಣ ಕುರಿತು ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರದಿಂದಲೇ ನಿಸ್ವಾರ್ಥ ಸೇವೆ ಸಲ್ಲಿಸಿದರೆ ರಾಷ್ಟ್ರ ಸೇವೆಯಾಗುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಯುವ ಜನರಲ್ಲಿ ರಾಷ್ಟ್ರೀಯ ಭಾವೈಕ್ಯ ಮತ್ತು ಸಹೋದರತೆ ಭಾವನೆ ಬೆಳೆಸುವುದು ಅವಶ್ಯಕವಾಗಿದೆ. ಯುವಕರು ಸಮಾಜಕ್ಕೆ ಕೈಲಾದಷ್ಟು ಸೇವೆ ಸಲ್ಲಿಸಬೇಕು. ರಾಷ್ಟ್ರೀಯ ಭಾವೈಕ್ಯತೆಗೆ ಪ್ರಮಾಣಿಕವಾಗಿ ಶ್ರಮ ಹಾಗೂ ಸಮರ್ಪಣಾ ಭಾವ ಬೆಳೆಸಿಕೊಳ್ಳಬೇಕು ಎಂದರು.
ಎನ್ನೆಸ್ಸೆಸ್ ಜಿಲ್ಲಾ ನೋಡೆಲ್ ಅಧಿಕಾರಿ ಡಾ| ಎಚ್. ಎಂ. ಸಜ್ಜಾದೆ ಮಾತನಾಡಿ, ಯುವಕರು ಸಮಯ ವ್ಯರ್ಥ ಮಾಡದೆ ಹಿರಿಯರ ಮಾರ್ಗದರ್ಶನದಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕು. ಆದ್ದರಿಂದ ಯುವಕರು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೇ ಸಮಗ್ರ ಭಾರತದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಮಾಜಿ ಮೇಯರ್ ಸಜ್ಜಾದೆ ಪೀರಾ ಮುಶ್ರೀಫ್ ಮಾತನಾಡಿ, ನೆಹರು ಯುವ ಕೇಂದ್ರ ಯುವಕರನ್ನು ಗುರುತಿಸಿ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಾತ್ಮಕ ಕಾರ್ಯದಲ್ಲಿ ತೊಡಗಿಸುತ್ತಿರುವುದು ಶ್ಲಾಘನೀಯ. ಯುವಕರು ತನು-ಮನದಿಂದ ಸಕ್ರೀಯವಾಗಿ ರಾಷ್ಟ್ರ ನಿರ್ಮಾಣದಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಂಜುಮನ್ ಸಂಸ್ಥೆ ಚೇರಮನ್ ಅಲ್‌ಹಜ್ ಮಹಾಬೂಬಖಾದ್ರಿ ಮುಶ್ರೀಫ್, ಡಾ| ಶಾರದಾಮಣಿ ಹುಣಶ್ಯಾಳ, ಎನ್‌ವೈಕೆ ಜಿಲ್ಲಾ ಸಮನ್ವಯಾಧಿಕಾರಿ ಡಿ. ದಯಾನಂದ ಮಾತನಾಡಿದರು. ಸುನೀಲಕುಮಾರ ಯಾದವ, ಡಾ| ಆರ್.ಎಸ್. ಮೂಲಿಮನಿ, ಡಾ| ಎಸ್.ಎಸ್. ಹುಣಶ್ಯಾಳ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು. ಇಂಡಿ, ಸಿಂದಗಿ, ಮುದ್ದೇಬಿಹಾಳ, ಬಸವನಬಾಗೇವಾಡಿ, ವಿಜಯಪುರ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದವರು ಪಾಲ್ಗೊಂಡಿದ್ದರು. ಧರೆಪ್ಪ ಪೂಜಾರಿ ಸ್ವಾಗತಿಸಿದರು. ಮಾಳಿಂಗರಾಯ ಕಡ್ಲಿಮಟ್ಟಿ ವಂದಿಸಿದರು.
ಬಹುಮಾನ ವಿತರಣೆ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಎಎಸ್‌ಪಿ ಕಾಲೇಜಿನ ಶ್ವೇತಾ ಜೈನ್ ಪ್ರಥಮ ಸ್ಥಾನ ಪಡೆದು 5 ಸಾವಿರ ರೂ. ನಗದು ಸಹಿತ ಬಹುಮಾನ ಪಡೆದರು. ಗಾರಮ್ಮ ಸಜ್ಜನ ಕಾಲೇಜಿನ ಲಾಲಬಿ ಎಲಗಾರ ದ್ವಿತೀಯ ಸ್ಥಾನ ಪಡೆದು 2 ಸಾವಿರ ರೂ. ನಗದು, ಬಸವನಬಾಗೇವಾಡಿಯ ಮಶಾಕ ಗೌಂಡಿ ತೃತೀಯ ಸ್ಥಾನ ಪಡೆದರು. ಪ್ರಥಮ ಹಾಗೂ ದ್ವಿತೀಯ ವಿಜೇತರು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾದರು.