Advertisement
ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಸೈನಿಕ ಶಕ್ತಿ, ವ್ಯಾಪಾರ ವ್ಯವಹಾರ, ಆಧುನಿಕ ತಂತ್ರಜ್ಞಾನಗಳ ಬಳಕೆ, ತಾಂತ್ರಿಕ ಉಪಕರಣಗಳ ಉತ್ಪಾದನೆ ಇತ್ಯಾದಿಗಳಲ್ಲಿ ಬಹಳಷ್ಟು ಮುಂದುವರಿದಿದೆ. ಶಿಕ್ಷಣ, ಕೃಷಿ, ವಿಜ್ಞಾನ, ಸಂಶೋಧನೆ, ಉಪಗ್ರಹಗಳ ಉಡಾವಣೆ ಹೀಗೆ ಹೆಚ್ಚಿನ ಎಲ್ಲ ಕ್ಷೇತ್ರಗಳಲ್ಲೂ ಭಾರತ ಗಣನೀಯ ಪ್ರಗತಿ ಸಾಧಿಸಿದೆ. ಅಲ್ಲದೆ ವಿಶ್ವದ ಮುಂದುವರಿದ ರಾಷ್ಟ್ರಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದೆ.
ಹೆಚ್ಚು ಹೆಚ್ಚು ಹಣ ಗಳಿಸುವ, ಕೂಡಿಡುವ, ಐಷಾರಾಮಿ ಬದುಕು ನಡೆಸುವ ಪೈಪೋಟಿಯೇ ಭ್ರಷ್ಟಾಚಾರ, ಅಸಮಾನತೆ, ಬಡತನ ಮೊದಲಾದ ಅನಿಷ್ಟಗಳಿಗೆ ಕಾರಣವಾಗಿವೆ. ಮನುಷ್ಯನ ಮೂಲ ಮನಸ್ಸು ಬದಲಾಗದೆ ಇವನ್ನೆಲ್ಲ ನಿವಾರಣೆ ಮಾಡುತ್ತೇನೆ ಎಂದು ಹೊರಟರೆ ಅದೊಂದು ಭ್ರಮೆ ಅಷ್ಟೆ ! ಮನಃ ಪರಿವರ್ತನೆಯೊಂದೇ ಸಾಮಾಜಿಕ ಅನಿಷ್ಟ ನಿವಾರಣೆಗೆ ಇರುವ ದಾರಿಯಾಗಿದ್ದು, ಅದು ನೈತಿಕ, ಆಧ್ಯಾತ್ಮಿಕ ತಳಹದಿಯ ಶಿಕ್ಷಣದಿಂದ ಮಾತ್ರ ಸಾಧ್ಯ.
Related Articles
ಭಾರತದ ಜೀವಾಳ ಆಧ್ಯಾತ್ಮಿಕ ಶಕ್ತಿ. ಚಾರಿತ್ರÂಕ್ಕೆ ಅತ್ಯಂತ ಮಹತ್ವ ಕೊಟ್ಟ ದೇಶ ನಮ್ಮದು. ಈ ನೆಲದ ಮೂಲ ದ್ರವ್ಯವಾದ ಆಧ್ಯಾತ್ಮಿಕತೆಯನ್ನು ಮರೆತರೆ ದೇಶ ನಾಶವಾಗುತ್ತದೆ ಎಂದು ಸ್ವಾಮಿ ವಿವೇಕಾನಂದರು, ತಿಲಕರು, ಮಹಾತ್ಮಾ ಗಾಂಧೀಜಿ ಸಹಿತ ವಿವಿಧ ಗಣ್ಯ ವ್ಯಕ್ತಿಗಳು, ಸಾಧು-ಸಂತರು, ರಾಷ್ಟ್ರೀಯ ನೇತಾರರು, ಶಿಕ್ಷಣ ತಜ್ಞರು ಸಾರಿದರು. ಆದ ಕಾರಣ ಆಧ್ಯಾತ್ಮಿಕ-ನೈತಿಕ ಮೌಲ್ಯಗಳ ಆಧಾರದ ಮೇಲೆ ಶಿಕ್ಷಣದ ಮಹಾ ಸೌಧವನ್ನು ನಿರ್ಮಿಸಿಬೇಕಿದೆ. ನೈತಿಕ, ಆಧ್ಯಾತ್ಮಿಕ ಶಿಕ್ಷಣವನ್ನು ( Moral and Spiritual Education )ನೀಡಬೇಕಾಗಿದೆ. ಮಾನವೀಯತೆಯ ಮೂಲ ನೆಲೆಯಲ್ಲಿ ರಾಷ್ಟ್ರದ ಜನಶಕ್ತಿ ಮೇಲೆದ್ದು ನಿಲ್ಲಬೇಕು. ಆದರ್ಶ ಮಾನವನ ಅತ್ಯುತ್ತಮ ಮಾದರಿ ನಮ್ಮ ಯುವ ಜನಾಂಗವಾಗಬೇಕಿದ್ದು, ಅಹಿಂಸೆ, ಪ್ರೀತಿ, ತ್ಯಾಗ, ಇತ್ಯಾದಿಗಳು ಜೀವನ ಮಂತ್ರಗಳಾಗಲಿ.
Advertisement
ಮೌಲ್ಯಗಳಿಗೆಲ್ಲ ತಿಲಾಂಜಲಿಇಂದಿನ ಶಿಕ್ಷಣ ಪದ್ಧತಿ ಕೇವಲ ಬೌದ್ಧಿಕ ಮತ್ತು ಸ್ವಲ್ಪ ಮಟ್ಟಿಗೆ ದೈಹಿಕ ವಿಕಾಸಕ್ಕೆ ಒತ್ತುಕೊಟ್ಟಿದೆಯೇ ಹೊರತು, ನೈತಿಕ ವಿಕಾಸದಕಡೆಗೆ ಗಮನ ಹರಿಸಿಲ್ಲ. ತತ್ಪರಿಣಾ ಮವಾಗಿ ಇಂದು “ಬುದ್ಧಿವಂತ ರಕ್ಕಸ ಜನಾಂಗ’ ಸೃಷ್ಟಿಯಾಗುತ್ತಿದೆ. ನೀತಿ, ನಿಯಮ, ಶಿಸ್ತು, ಮೌಲ್ಯಗಳಿಗೆಲ್ಲ ತಿಲಾಂಜಲಿಯಿತ್ತು ಸ್ವಾರ್ಥಕ್ಕಾಗಿ ಯಾವುದೇ ಕಾರ್ಯಕ್ಕೂ ಹೇಸದ ಜನಾಂಗ ನಿರ್ಮಾಣವಾಗುತ್ತಿದೆ. ಇದಕ್ಕೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿನ ನೈತಿಕ, ಆಧ್ಯಾತ್ಮಿಕ ಶಿಕ್ಷಣದ ಕೊರತೆಯೇ ಕಾರಣ. ಯಾವುದೇ ರೀತಿಯ ಸಮಸ್ಯೆಗಳು ಬಂದಾಗ ಧೃತಿಗೆಡದೆ ದೃಢವಾಗಿದ್ದು, ಸಮಸ್ಯೆ ಬಗೆಗೆ ಚೆನ್ನಾಗಿ ಅರಿತು ಸಮಾಧಾನಕರವಾಗಿ, ಶಾಂತಿಯುತವಾಗಿ ಅದನ್ನು ಪರಿಹರಿಸಬೇಕು. ಇದು ಮಾನವಧರ್ಮದ ಗುಣ. ಮಾನವೀಯ ಮೌಲ್ಯಗಳನ್ನು ತಿಳಿಯಪಡಿಸುವ ನೀತಿಯುಕ್ತ ಶಿಕ್ಷಣದ ಅವಶ್ಯವಿದೆ. ಅಂತಹ ಶಿಕ್ಷಣದಿಂದ ಮಾತ್ರ ಜನರ ಜೀವನ ಮೌಲ್ಯ ವೃದ್ಧಿಸಲು ಸಾಧ್ಯ. ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಬಾಹ್ಯ ಪರಿಸರ ಮಾಲಿನ್ಯ ನಿವಾರಣೆ ಬಗ್ಗೆ ಸಾಕಷ್ಟು ಹೇಳಲಾಗುತ್ತದೆ. ಆದರೆ ಜನರ ಆಂತರಿಕ ಮಾಲಿನ್ಯವನ್ನು ದೂರ ಮಾಡುವ ಬಗ್ಗೆ ಏನನ್ನೂ ತಿಳಿಸಿಲ್ಲ ಎಂಬುದು ಖೇದಕರ. ಯುವಕರಿಗೆ ಪಾಶ್ಚಿಮಾತ್ಯ ರಾಷ್ಟ್ರಗಳ ಆದರ್ಶ, ಸಂಸ್ಕಾರಗಳು ಮಾದರಿಯಾಗುತ್ತಿರುವ ಈ ಸಂದರ್ಭ ಅವರ ಅಂತಃಕರಣವನ್ನು ತಲುಪಿ ದೇಸೀಯ ಚಿಂತನೆ ಯೆಡೆಗೆ ಸೆಳೆದೊಯ್ಯಬಲ್ಲ, ನಮ್ಮ ಪರಂಪರೆಯ ಶ್ರೇಷ್ಠತೆಯನ್ನು ಸಾರಿ ಹೇಳಬಲ್ಲ ಸ್ವಾಮಿ ವಿವೇಕಾನಂದರ ಚಿಂತನೆ, ತತ್ವಗಳನ್ನು ತಿಳಿಯಪಡಿಸಬೇಕಿದೆ. ನಮ್ಮ ದೇಶದಲ್ಲಿ ಆಚಾರ ವಿಚಾರ ಸಂಸ್ಕೃತಿಯನ್ನು ಒಗ್ಗೂಡಿಸುವ ಚಿಂತನೆಗಳಿಗೆ ಕಡಿಮೆಯಿಲ್ಲ. ಆದರೆ ಅಂತಹ ಶ್ರೇಷ್ಠ ಚಿಂತನೆಗಳನ್ನು ಆಚರಣೆಗೆ ತರುವ ಪ್ರಮುಖ ಶಕ್ತಿ ಇಂದಿನ ದಿನಗಳಲ್ಲಿ ಕ್ಷೀಣಿಸುತ್ತಿದೆ. ದೇಶೀಯ ವಿಚಾರಗಳನ್ನು ಆದರಿಸುವ ಗುಣ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಶಿಸುತ್ತಿದೆ. ನಿಜವಾಗಿಯೂ ದೇಶದ ಬಗ್ಗೆ ಯೋಚಿಸಲೇಬೇಕಾದ ಸಂದಿಗ್ಧ ಕಾಲಘಟ್ಟದಲ್ಲಿ ಇಂದು ನಾವಿದ್ದೇವೆ. ದೇಶವನ್ನು ಕಾಡುತ್ತಿರುವ ವಿವಿಧ ಆಂತರಿಕ ಮತ್ತು ಬಾಹ್ಯ ಸಮಸ್ಯೆ ಸವಾಲುಗಳಿಗೆ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳಲ್ಲಿ ಪರಿಹಾರಗಳಿವೆ.ಯೌವನದಲ್ಲಿ ದೈಹಿಕ, ಮಾನಸಿಕ ಶಕ್ತಿ, ತೇಜಸ್ಸು, ಹುಮ್ಮಸ್ಸು, ಸಾಹಸ ಮನೋಭಾವ, ಭರವಸೆ ಎಲ್ಲವೂ ಇರುತ್ತದೆ. ಅವುಗಳೊಂದಿಗೆ ತಾಳ್ಮೆ, ವಿವೇಕ, ಪರೋಪಕಾರ, ಮಾನವೀಯ ಮೌಲ್ಯ, ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಅರಿವು ಹೊಂದುವಂತಾಗಬೇಕು. ಮರೆಯಾಗಿದೆ ನೀತಿ ಪಾಠ
ಹತ್ತಿಪ್ಪತ್ತು ವರುಷಗಳ ಹಿಂದಿನ ಹಳ್ಳಿ ಮನೆಗಳ ವಾತಾವರಣದ ಬಗೆಗೆ ಒಮ್ಮೆ ಅವಲೋಕಿಸಿದರೆ ಸಾಕು, ಮಕ್ಕಳಿಗೆ ಯಾವ ರೀತಿ ಸಂಸ್ಕಾರದಿಂದ ಕೂಡಿದ ಶಿಕ್ಷಣ ದೊರೆಯುತ್ತಿತ್ತು. ಸಂಜೆಯಾದೊಡನೆ ಮಕ್ಕಳನ್ನೆಲ್ಲ ಬಳಿಗೆ ಕರೆಸಿಕೊಳ್ಳುತ್ತಿದ್ದ ಅಜ್ಜ-ಅಜ್ಜಿ ಪುರಾಣದ ಯಾವುದೋ ಒಂದು ಕಥೆಯನ್ನೋ, ನೀತಿ ಕಥೆ ಯನ್ನೋ ಹೇಳುವ ಮೂಲಕ ನಡೆ ನುಡಿ ಹೇಗಿರಬೇಕು ಎಂಬ ಬಗ್ಗೆ ಪರೋಕ್ಷ ಬೋಧನೆ ಮಾಡುತ್ತಿದ್ದರು. ಮತ್ತೂಂದೆಡೆ ವಾರ, ತಿಥಿ, ನಕ್ಷತ್ರಗಳಿಂದ ತೊಡಗಿ ಲೆಕ್ಕ, ಮಗ್ಗಿಯವರೆಗೂ ಅಮ್ಮನಿಂದಲೇ ಪಾಠವಾಗುತ್ತಿತ್ತು. ಗುರು ಹಿರಿಯರನ್ನು ಗೌರವಿಸುವುದು, ಬಡಬಗ್ಗರ ಕುರಿತು ಕಾಳಜಿ ವಹಿಸುವುದು ಸ್ವತ್ಛತೆ, ಪ್ರೀತಿ, ಸ್ನೇಹ, ಹಂಚಿ ತಿನ್ನುವುದು ಇತ್ಯಾದಿ ವಿಚಾರಗಳನ್ನೆಲ್ಲ ಚಿಕ್ಕಂದಿನಲ್ಲೇ ಕಲಿಸುತ್ತಿದ್ದರು. ಅದಕ್ಕೇ ಅಲ್ಲವೇ ಹಿರಿಯರು “ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು’ ಎಂದದ್ದು. ಆದರೆ ಇಂದು? ಮೊದಲ ಶಾಲೆಯಲ್ಲಿ ಅಂತಹ ಪಾಠವಿಲ್ಲ, ಮೊದಲ ಗುರುವಿಗೆ ಪುರುಸೊತ್ತಿಲ್ಲ! ಹೌದು, ಆರ್ಥಿಕ ದೃಷ್ಟಿಕೋನದಿಂದ ನೋಡಿದಾಗ ಜೀವನ ನಿರ್ವಹಣೆ ಇಂದು ಬಲು ಕಷ್ಟ. ನಗರ ಜೀವನದ ಭರಾಟೆಯಲ್ಲಿ ಪತಿ, ಪತ್ನಿ ಇಬ್ಬರೂ ಸಂಸಾರದ ನೊಗ ಹೊರಬೇಕಾದ ಅನಿವಾರ್ಯ ಎದುರಾಗಿದೆ. ಕೆಲವುರು ಟಿವಿ ಧಾರವಾಹಿ, ರಿಯಾಲಿಟಿ ಶೋ, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ತಲ್ಲೀನರಾಗಿ ತಮ್ಮ ಕರ್ತ್ಯವ್ಯದಿಂದ ದೂರ ಉಳಿದಿದ್ದಾರೆ. ಹಾಗಿರುವಾಗ ಮಕ್ಕಳ ಬಗೆಗೆ ಕಾಳಜಿ ವಹಿಸುವವರು ಯಾರು? ಅವರಿಗೆ ನೈತಿಕ, ಆಧ್ಯಾತ್ಮಿಕ ಮೌಲ್ಯಗಳನ್ನು ತಿಳಿಯಪಡಿಸುವುದು ಯಾರು ? ಹೋಗಲಿ ಶಾಲೆಯಲ್ಲಾದರೂ ಅದು ಸಿಕ್ಕೀತೇ? ಶಿಕ್ಷಣವೆಂಬುದು ವಾಣಿಜ್ಯ ವ್ಯವಹಾರವಾಗುತ್ತಿರುವ ಈ ಕಾಲದಲ್ಲಿ ಶಾಲೆ, ಕಾಲೇಜುಗಳಲ್ಲೂ ಸಂಸ್ಕಾರಯುತ ಶಿಕ್ಷಣ ಮರೆಯಾಗುತ್ತಿದೆ. ಓದು, ಬರೆಹ, ಅಂಕ ಗಳಿಸು ವುದಷ್ಟಕ್ಕೇ ಶಿಕ್ಷಣ ಸೀಮಿತವಾಗುತ್ತಿದೆ. ಉದ್ಯಮಿಯೊಬ್ಬ ಬಂಡವಾಳ ಹೂಡುವ ಮುನ್ನ ಮುಂದೆ ತನ್ನ ವ್ಯವಹಾರದಿಂದ ಆಗಬಹುದಾದ ಲಾಭ, ನಷ್ಟದ ಲೆಕ್ಕಾಚಾರ ಹಾಕಿದಂತೆ ಉನ್ನತ ಶಿಕ್ಷಣಕ್ಕೆ ಸೇರುವ ವಿದ್ಯಾರ್ಥಿಗಳ ಪರಿಸ್ಥಿತಿಯಾಗಿದೆ. ಇದಕ್ಕೆ ಪರಿಹಾರ ಹುಡುಕಬೇಕಾದ ತುರ್ತು ಎಲ್ಲರ ಮೇಲಿದೆ. ನೈತಿಕ, ಆಧ್ಯಾತ್ಮಿಕ ಮೌಲ್ಯಗಳು ಅನಿವಾರ್ಯ
ಮುಂದಿನ ಜನಾಂಗವನ್ನು ನೈತಿಕ, ಆಧ್ಯಾತ್ಮಿಕವಾಗಿ ಸಬಲರನ್ನಾಗಿಸಬೇಕಾದ ಮತ್ತು ಅವರಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕಾದ ಅನಿವಾರ್ಯ ನಮ್ಮ ಮುಂದಿದೆ. ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳು, ಸಂಸ್ಕಾರ ಇತ್ಯಾದಿ ಸಾಂಪ್ರದಾಯಿಕ ತಳಹದಿಯ ಮೇಲೆಯೇ ಭವ್ಯ ಭಾರತದ ಭವಿಷ್ಯ ನೆಲೆನಿಂತಿದೆ. ಹೀಗಾಗಿ, ಯುವ ಪೀಳಿಗೆಗೆ ಸಂಸ್ಕಾರದ ಶಿಕ್ಷಣ ನೀಡಬೇಕಾದ್ದು ಅನಿವಾರ್ಯ. ಶಿಕ್ಷಣವು ಕೇವಲ ವಾಣಿಜ್ಯ ವ್ಯವಹಾರದ ಸೊತ್ತಾಗದೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ವ್ಯವಸ್ಥೆಯಾಗಲಿ. ಮಕ್ಕಳು ಎಂಜಿನಿಯರ್, ಡಾಕ್ಟರ್, ಐಎಎಸ್ ಅಧಿಕಾರಿ ಇತ್ಯಾದಿಗಳೇ ಆಗಬೇಕು ಎಂದು ಆಶಿಸುವ ಪಾಲಕರು ಮೊದಲು ಅವರು ಮನುಷ್ಯರಾಗುವುದನ್ನು ಕಾಣಲು ಬಯಸಲಿ. ಆ ನಿಟ್ಟಿನಲ್ಲಿ ಮಾರ್ಗದರ್ಶನ ನೀಡುವಂತಾಗಲಿ. ಕಾಲದ ಓಟಕ್ಕೆ ಅನುಗುಣವಾಗಿ ಬದಲಾಗಬೇಕಾದದ್ದು, ಬದಲಾಗುತ್ತಿರುವ ಸನ್ನಿವೇಶಕ್ಕೆ ಹೊಂದಿಕೊಳ್ಳಬೇಕಾದ್ದು ಅವಶ್ಯ. ಬದಲಾವಣೆ ಜಗದ ನಿಯಮ. ಆದರೆ, ಅದು ನಮಗೆ ಮಾರಕವಾಗದೆ, ಪೂರಕವಾಗಿರಲಿ. – ಗಣೇಶ ಕುಳಮರ್ವ