ಶೃಂಗೇರಿ: ಯುವಜನಾಂಗ ನಿರಂತರ ಅಧ್ಯಯನ, ಗಂಭೀರ ಯೋಚನೆ, ಆಳ ಅಧ್ಯಯನ ಹಾಗೂ ತಾವು ನಡೆಯುವ ಉತ್ತಮ ಹಾದಿಯ ಬಗ್ಗೆ ನಂಬಿಕೆ, ವಿಶ್ವಾಸವನ್ನು ರೂಢಿಸಿಕೊಳ್ಳಬೇಕೆಂದು ನಿವೃತ್ತ ಪ್ರಾಂಶುಪಾಲ ಡಾ| ಸಿ.ವಿ. ಗಿರಿಧರ ಶಾಸ್ತ್ರೀ ಹೇಳಿದರು.
ಜೆ.ಸಿ.ಬಿ.ಎಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ನೈತಿಕ ಆಧ್ಯಾತ್ಮಿಕ ವೇದಿಕೆ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ ಮತ್ತು ಯುವ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀ ರಾಮಕೃಷ್ಣ ಪರಮಹಂಸರ ಮಾರ್ಗದರ್ಶನದಲ್ಲಿ ಸಾಗಿದ ವಿವೇಕಾನಂದರು ದೇಶಕಂಡ ಅಪ್ರತಿಮ ದೇಶಭಕ್ತ. ಹಿಂದೂ ಸನ್ಯಾಸಿ ಎಂದರು.
ವಿದ್ಯಾರ್ಥಿಗಳು ಧೈರ್ಯವನ್ನು ಬೆಳೆಸಿಕೊಂಡು, ದೇಶದ ಬಗ್ಗೆ ಹೆಚ್ಚು ಹೆಚ್ಚು ವಿಚಾರಗಳನ್ನು ತಿಳಿದುಕೊಂಡು ದೇಶದ ಹಿರಿಮೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ದೃಢ ಸಂಕಲ್ಪ ಕೈಗೊಳ್ಳಬೇಕು. ನಾವು ದೇಶಕ್ಕೆ ಏನಾದರೂ ಕೊಡುಗೆಯನ್ನು ನೀಡದೇ ಹೋದರೆ ನಮ್ಮ ಜೀವನ ಸಾರ್ಥಕವಾಗಲಾರದು. ಈ ನಿಟ್ಟಿನಲ್ಲಿ ಇಂದಿನ ಯುವ ಸಮೂಹ ಯೋಚಿಸಿ ದೇಶದ ಅಭಿವೃದ್ಧಿಯಲ್ಲಿ ಸಂವಿಧಾನದ ಅಡಿ ಕೆಲಸ ನಿರ್ವಹಿಸಬೇಕೆಂದರು.
ಸ್ವಾಮಿ ವಿವೇಕಾನಂದರು ದೇಶದ ಅದ್ವೈ ತ ತತ್ವ, ಉಪನಿಷತ್ತುಗಳ ತತ್ವ ಮತ್ತು ವೇದಗಳ ಸಂದೇಶವನ್ನು ಈ ಜಗತ್ತಿಗೆ ಸಾರಿದರು. ವಿವೇಕಾನಂದರಿಗೆ ಒಂದು ದೃಢವಾದ ಕಾರ್ಯ ಸಾಧಿಸುವ ಛಲವಿತ್ತು. ಭಕ್ತಿ, ವಿಶ್ವಾಸ ಮತ್ತು ಧರ್ಮದಿಂದ ಮಾತ್ರ ದೇಶವನ್ನು ಒಗ್ಗೂಡಿಸಲು ಸಾಧ್ಯ ಎಂಬುದನ್ನು ಅರಿತಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ| ಕೆ.ಪಿ.ಪ್ರಕಾಶ್, ಧಾರ್ಮಿಕ ಸಹನೆ, ಎಲ್ಲಾ ಧರ್ಮಗಳಿಗೂ ಆಶ್ರಯ ನೀಡಿದ ದೇಶ ಭಾರತ. ಪರಧರ್ಮ ಸಹಿಷ್ಣತೆಗೆ, ಜಗತ್ತಿನ ಎಲ್ಲಾ ಧರ್ಮಗಳ ಜನರನ್ನು ಒಪ್ಪಿಸಿ ಬಾಳುವ ಅಪರೂಪದ ದೇಶ ನಮ್ಮದು. ಹಿಂದೂ ಧರ್ಮದ ಹಿರಿಮೆ, ಗರಿಮೆಯನ್ನು ಅಮೆರಿಕದ ಚಿಕಾಗೋ ಭಾಷಣದ ಮೂಲಕ ಜಗತ್ತಿಗೆ ಸಾರಿದ ಸ್ವಾಮಿ ವಿವೇಕಾನಂದರು ಯಾವಾಗಲೂ ಯುವಕರಿಗೆ ಶಕ್ತಿಯ ಚಿಲುಮೆಯ ವ್ಯಕ್ತಿ. ಯುವಕರು ತಮ್ಮ ಆತ್ಮವಂಚನೆ ಮಾಡಿಕೊಳ್ಳದೆ ಇಂದು ಮನೋಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ನೈತಿಕ, ಆಧ್ಯಾತ್ಮಿಕ ವೇದಿಕೆಯ ಸಂಚಾಲಕಿ ಜ್ಯೋತಿ ಕಾಕತ್ಕರ್ ನಿರೂಪಿಸಿ, ಎನ್.ಎಸ್.ಎಸ್. ಅಧಿ ಕಾರಿ ಪ್ರಶಾಂತ್ ಸ್ವಾಗತಿಸಿ, ನಾಗಶ್ರೀ ವಂದಿಸಿದರು.