ಕಾರ್ಕಳ: ವಿದ್ಯಾರ್ಥಿಗಳು, ಯುವಜನತೆ ಮಾದಕ ವಸ್ತುಗಳಿಂದ ದೂರವಿರಬೇಕು. ಯಾವುದೋ ಪ್ರಭಾವ ದಿಂದ ಅದರ ದುಃಶ್ಚಟಕ್ಕೆ ಒಳಗಾಗ ಬಾರದು. ಒಳ್ಳೆಯ ವಿಚಾರಗಳನ್ನು ತಮ್ಮಲ್ಲಿ ಬೆಳೆಸಿಕೊಂಡು ಸ್ವಾಸ್ಥ್ಯ ಸಮಾಜದ ದಿಕ್ಕಿನತ್ತ ಸಾಗಬೇಕು ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.
ಶ್ರೀ. ಕ್ಷೇತ್ರ.ಧ.ಗ್ರಾ.ಯೋಜನೆ, ಅಖೀಲ ಕರ್ನಾಟಕ ಜನ ಜಾಗೃತಿ ವೇದಿಕೆ ಕಾರ್ಕಳ ತಾಲೂಕು ಹಾಗೂ ಎಸ್‌ಎನ್‌ವಿ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಜೂ. 26ರಂದು ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಮತ್ತು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವ್ಯಸನಮುಕ್ತ ಭಾರತ ನಿರ್ಮಾಣವಾಗಲು ಯುವಶಕ್ತಿ ಮುಂದೆ ಬರಬೇಕು. ಸಮಾಜದಲ್ಲಿರುವ ಒಳ್ಳೆಯ ವಿಚಾರ, ಜೀವನಕ್ಕೆ ಪ್ರೇರಣೆ, ಆರೋಗ್ಯಕ್ಕೆ ಒಳ್ಳೆಯದನ್ನು ನೀಡುವುದನ್ನು ನಾವು ಹುಡುಕಿಕೊಂಡು ಹೋಗುವ ಕೆಲಸವಾಗಬೇಕು. ಸಮಾಜದಲ್ಲಿ ಸಾಕಷ್ಟು ಒಳ್ಳೆಯ ವಿಚಾರಗಳು ಇವೆ ಎಂದು ಹೇಳಿದರು.
ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಜನಜಾಗೃತಿ ವೇದಿಕೆ ಅಧ್ಯಕ್ಷ ಕಮಲಾಕ್ಷ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ತಾಲೂಕು ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಎಸ್‌ಎನ್‌ವಿ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಹಾಗೂ ಸ್ವಾಸ್ಥ್ಯ ಸಂಕಲ್ಪದ ಪ್ರತಿಜ್ಞಾ ವಿಧಿ ಬೋಧಿಸಿದರು.
ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷ ಜಯಕುಮಾರ್ ಜೈನ್, ಮಹಾವೀರ ಹೆಗ್ಡೆ ಅಂಡಾರು, ಅಂತೋನಿ ಡಿ’ಸೋಜಾ, ಹರೀಶ್ಚಂದ್ರ ತೆಂಡೂಲ್ಕಾರ್ ಉಪಸ್ಥಿತರಿದ್ದರು.ಯೋಜನಾಧಿಕಾರಿ ಕೃಷ್ಣ ಟಿ. ಸ್ವಾಗತಿಸಿ, ಪ್ರಸ್ತಾವನೆಗೈದರು. ಮೇಲ್ವಿಚಾರಕಿ ವಾರಿಜಾ ವಂದಿಸಿದರು. ಶಿಕ್ಷಕ ಕೆ. ಸುಬ್ರಹ್ಮಣ್ಯ ಆಚಾರ್ಯ ನಿರೂಪಿಸಿದರು.