Advertisement

ಸ್ಮಾರ್ಟ್‌ಫೋನ್‌ ಭ್ರಮೆಯಲ್ಲಿ ಯುವಕರು

12:16 AM Apr 08, 2019 | Team Udayavani |

ಬೆಂಗಳೂರು: ಸ್ಮಾರ್ಟ್‌ಫೋನ್‌ ಮೂಲಕ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಿಕೊಂಡಿದ್ದೇವೆ ಎಂಬ ಭ್ರಮೆಯಲ್ಲಿ ಬಹುತೇಕ ಯುವ ಸಮುದಾಯ ಬದುಕುತ್ತಿದ್ದು, ಆ ಮೂಲಕ ವಾಸ್ತವ ಸಮಾಜದೊಂದಿಗೆ ಸಂಪರ್ಕ ಕಡಿದುಕೊಳ್ಳುತ್ತಿದ್ದಾರೆ ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್‌.ಜಾಫೆಟ್‌ ಅಭಿಪ್ರಾಯಪಟ್ಟರು.

Advertisement

ಲಯನ್ಸ್‌ ಕ್ಲಬ್ಸ್ ಇಂಟರ್‌ನ್ಯಾಷನಲ್‌ ಭಾನುವಾರ ನಗರದ ನಿಮ್ಹಾನ್ಸ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಹಮ್ಮಿಕೊಂಡಿದ್ದ “ಲಯನ್ಸ್‌ ಡಿಸ್ಟ್ರಿಕ್ಟ್ 317 ಎಫ್’ನ 6ನೇ ವಾರ್ಷಿಕ ಜಿಲ್ಲಾ ಸಮಾವೇಶದ ಉದ್ದೇಶಿಸಿ ಮಾತನಾಡಿದ‌ ಅವರು, ಪ್ರಪಂಚದ ಶೇ.20ರಷ್ಟು ಯುವಕರು ಭಾರತದಲ್ಲಿ ಇದ್ದಾರೆ. ನಮ್ಮ ದೇಶದ ಜನಸಂಖ್ಯೆಯಲ್ಲಿ ಶೇ.50ರಷ್ಟು ಮಂದಿ 25 ವರ್ಷದೊಳಗಿನವರೇ ಇದ್ದಾರೆ.

ಈ ಬಹುತೇಕ ಯುವಜನತೆ ಸ್ಮಾಟ್‌ಫೋನ್‌ನಲ್ಲಿ ಜನ ಬ್ಯೂಸಿಯಾಗಿದ್ದು, ಅದರ ಮೂಲಕ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಿಕೊಂಡಿದ್ದೇವೆ, ಏನನ್ನೋ ಸಾಧಿಸುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಆದರೆ. ವಾಸ್ತವದಲ್ಲಿ ಸಮಾಜದಿಂದ ದೂರ ಉಳಿಯುತ್ತಾ ಕೊನೆಗೆ ಅವರಿಗೆ ಅವರೇ ಸಂಪರ್ಕ ಕಡಿದುಕೊಂಡು ಭ್ರಮಾ ಲೋಕದಲ್ಲಿದ್ದಾರೆ ಎಂದರು.

ಸಮಾಜವು ಸಂಕೀರ್ಣತೆಯಿಂದ ಕೂಡಿದೆ. ಮನೆಯಲ್ಲಿ ಪೋಷಕರು ಹಾಗೂ ಮಕ್ಕಳ ನಡುವೆ ಆತ್ಮೀಯ ಸಂಬಂಧ ಕಡಿಮೆಯಾಗುತ್ತಿದೆ. ತರಗತಿಯಲ್ಲಿ ವಿದ್ಯಾರ್ಥಿಗಳ ಗಮನದ ಮಟ್ಟ ಕಡಿಮೆಯಾಗಿದೆ. ಈ ಪೀಳಿಗೆ ವಿದ್ಯಾರ್ಥಿಗಳು ಹೆಚ್ಚೆಂದರೆ 15 ನಿಮಿಷಗಳಷ್ಟೇ ಶಿಕ್ಷಕರ ಪಾಠ ಕೇಳುತ್ತಾರೆ. ಉಳಿದಂತೆ ಅವರ ಗಮನ ಬೇರೆಲ್ಲೋ ಇರುತ್ತದೆ.

ಹೀಗಾಗಿ, ವಿದ್ಯಾರ್ಥಿಗಳ ಜತೆಗೆ ಶಿಕ್ಷಕರು ಚರ್ಚಿಸಿ ಅವರ ಮನಸ್ಸು ಮುಟ್ಟಬೇಕು. ಶಿಕ್ಷಣ ಸಂಸ್ಥೆಗಳು ಹಾಗೂ ಸ್ವಯಂ ಸೇವಾ ಸಂಘಗಳು ಯುವಕರೊಂದಿಗೆ ಚರ್ಚಿಸಿ ಅವರನ್ನು ಸಮಾಜದೊಂದಿಗೆ ಸಂಪರ್ಕ ಸಾಧಿಸುವಂತೆ ಮಾಡಬೇಕು. ಈ ಯುವ ಸಮೂಹದ ಸಮಾಜದೊಂದಿಗೆ ಸಂಪರ್ಕ ಸಾಧಿಸದಿದ್ದರೆ ಭಾರತ ಸೂಪರ್‌ ಪವರ್‌ ರಾಷ್ಟ್ರವಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

Advertisement

ಭಾರತ ಆರ್ಥಿಕ ಹಾಗೂ ತಂತ್ರಜ್ಞಾನ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಗತಿಯಾಗುತ್ತಿದ್ದರೂ, ಇಂದಿಗೂ ನಮ್ಮ ಸಮಾಜ ಅಸ್ಥಿರತೆ ಹಾಗೂ ಅಭದ್ರತೆಯಲ್ಲಿದೆ. ಬಡವ ಹಾಗೂ ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಿದೆ.

ಇದಕ್ಕೆ ಮುಖ್ಯ ಕಾರಣ ದೇಶದ ಶೇ.60ರಷ್ಟು ಸಂಪತ್ತು ಕೇವಲ ಶೇ.1ರಷ್ಟು ಮಂದಿಯಲ್ಲಿರುವುದು. ಹೀಗಾಗಿ,ಆ ಕೇಂದ್ರೀಕೃತ ಸಂಪತ್ತನ್ನು ವಿಕೇಂದ್ರಿಕರಣಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಕ್ರಮವಹಿಸಬೇಕು. ಆಗ ಆರ್ಥಿಕ ಅಸಮಾನತೆಯ ಅಂತರ ಕಡಿಮೆ ಮಾಡಬೇಕು ಎಂದು ತಿಳಿಸಿದರು.

ಕಿದ್ವಾಯಿ ಆಸ್ಪತ್ರೆಯ ನಿವೃತ್ತ ವೈದ್ಯೆ ಡಾ.ವಿಜಯ ಲಕ್ಷ್ಮೀ ದೇಶಮಾನೆ ಮಾತನಾಡಿ, ಇಂದು “ಆಯುಷ್ಮಾನ್‌ ಭಾರತ್‌’ ಎಂಬ ಮಹತ್ವದ ಯೋಜನೆಯಿಂದ ದೇಶದಾದ್ಯಂತ ಬಡತನದಲ್ಲಿರುವ ಸಾಕಷ್ಟು ರೋಗಿಗಳಿಗೆ ಉಪಯೋಗವಾಗುತ್ತಿದೆ. ಈ ಯೋಜನೆ ರೂಪಿಸಿದ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸಿದರು.

ಸಾಮಾಜಿಕ ಕಾರ್ಯಕರ್ತೆ ಡಾ.ಸುನೀತಾ ಕೃಷ್ಣನ್‌, ಲಯನ್ಸ್‌ ಕ್ಲಬ್ಸ್ ಜಿಲ್ಲಾ 317ಎಫ್ ಗವರ್ನರ್‌ ಸತ್ಯನಾರಾಯಣ ರಾಜು, ಮಲ್ಟಿಪಲ್‌ ಕೌನ್ಸಿಲ್‌ ಮುಖ್ಯಸ್ಥ ಎಚ್‌.ಕೆ.ಗಿರಿಧರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next