Advertisement

ಉದ್ಯಾನ ಸ್ವಚ್ಛತೆಗೆ ಯುವಕರ ಆಸಕ್ತಿ 

04:11 PM Dec 03, 2018 | Team Udayavani |

ಗದಗ: ಕ್ಲೀನ್‌ ಸಿಟಿಗಳನ್ನಾಗಿ ಪರಿವರ್ತಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಕಷ್ಟು ಹಣ ಖರ್ಚು ಮಾಡುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಸಾಕಾರಗೊಳ್ಳುತ್ತಿಲ್ಲ. ಇನ್ನು ಉದ್ಯಾನಗಳ ಸ್ವಚ್ಛತೆ ಹಾಗೂ ಅಭಿವೃದ್ಧಿ ವಿಚಾರದಲ್ಲಿ ನಗರಸಭೆಯತ್ತ ಬೊಟ್ಟು ಮಾಡುವವರೇ ಹೆಚ್ಚು. ಆದರೆ, ಹುಡ್ಕೋ ಕಾಲೋನಿಯ ಸಮಾನ ಮನಸ್ಕರರು ‘ಸ್ನೇಹ ಬಳಗ’ದ ಹೆಸರಲ್ಲಿ ಪ್ರತೀ ರವಿವಾರ ಒಂದೊಂದು ಉದ್ಯಾನದ ಸ್ವಚ್ಛತೆಗೆ ಧುಮುಕಿದ್ದಾರೆ.

Advertisement

ಗದಗ-ಬೆಟಗೇರಿ ಅವಳಿ ನಗರದ ವಿವಿಧೆಡೆ ಅಭಿವೃದ್ಧಿ ವಂಚಿತ ಹಾಗೂ ಸ್ಥಳೀಯರ ಅಸಡ್ಡೆಯಿಂದಾಗಿ ತ್ಯಾಜ್ಯವಿಲೇವಾರಿ ಕೇಂದ್ರಗಳಾಗಿ ಮಾರ್ಪಟ್ಟಿವೆ. ಇದರಿಂದ ಇಲ್ಲಿನ ವಾರ್ಡ್‌ ನಂ. 33ರ ವ್ಯಾಪ್ತಿಯಲ್ಲಿರುವ ಉದ್ಯಾನಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಈ ವಾರ್ಡ್‌ವೊಂದರಲ್ಲೇ ಸಣ್ಣದು-ದೊಡ್ಡದು ಸೇರಿ 30ಕ್ಕೂ ಹೆಚ್ಚು ಉದ್ಯಾನಗಳಿವೆ. ಕೆಲ ಉದ್ಯಾನಗಳಿಗೆ ಫೆನ್ಸಿಂಗ್‌, ಫ್ಲೆàವರ್ ಫುಟ್‌ಪಾತ್‌, ಒಂದೆರಡು ಸಿಮೆಂಟ್‌ ಆಸನಗಳನ್ನು ಅಳವಡಿಸಿದ್ದು ಬಿಟ್ಟರೆ ಬಹುತೇಕ ಬಯಲು ಪ್ರದೇಶ. ಮುಳ್ಳುಕಂಟಿ ಬೆಳೆದಿದ್ದು, ಜನರು ಉದ್ಯಾನಗಳತ್ತ ಸುಳಿಯದಂತಾಗಿದ್ದಾರೆ.

ಸ್ವಚ್ಛತೆಗೆ ಧುಮುಕಿದ ಸ್ನೇಹ ಬಳಗ: ಇಲ್ಲಿನ ಉದ್ಯಾನಗಳು ಮತ್ತು ದೇವಸ್ಥಾನ ಆವರಣಗಳನ್ನು ಸ್ವಚ್ಛಗೊಳಿಸುವಂತೆ ಹಲವು ಬಾರಿ ನಗರಸಭೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆದರೆ, ಉದ್ಯಾನಗಳನ್ನು ಸ್ವಚ್ಛಗೊಳಿಸಿ, ಹಸಿರಿನಿಂದ ಕಂಗೊಳಿಸುವಂತೆ ಮಾಡಬೇಕೆಂದು ಯುವಕರು ಉದ್ದೇಶಿಸಿದ್ದರು.

‘ಬಾಬು ಎನ್‌ ಶಿದ್ಲಿಂಗ್‌ ಸ್ನೇಹ ಬಳಗ’ ಎಂಬ ಗುಂಪಿನ ಹೆಸರಲ್ಲಿ ಒಗ್ಗೂಡಿರುವ ಸರಕಾರಿ ಹಾಗೂ ಖಾಸಗಿ ನೌಕರರು, ವಿದ್ಯಾರ್ಥಿಗಳು ಸೇರಿದಂತೆ 20ರಿಂದ 30 ಜನರು ಸಲಿಕೆ, ಪಿಕಾಸಿ, ಬುಟ್ಟಿಗಳನ್ನು ಹಿಡಿದು ಸ್ವಚ್ಛತಾ ಕಾರ್ಯಕ್ಕೆ ಧುಮುಕ್ಕುತ್ತಿದ್ದಾರೆ. ಪ್ರತೀ ರವಿವಾರ ಒಂದೊಂದು ಉದ್ಯಾನ, ದೇವಸ್ಥಾನಗಳನ್ನು ಆಯ್ದುಕೊಂಡು ಬೆಳಗ್ಗೆ 7 ರಿಂದ 10ರ ವರೆಗೆ ಸುಮಾರು 3 ಗಂಟೆಗಳ ಕಾಲ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಯುವಕರೊಂದಿಗೆ ಸ್ಥಳೀಯರು ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸುತ್ತಿದ್ದಾರೆ.

ಕಳೆದ ನ. 25ರಿಂದ ಉದ್ಯಾನ ಮತ್ತು ದೇವಸ್ಥಾನಗಳ ಸ್ವಚ್ಛತಾ ಕಾರ್ಯ ಆರಂಭಿಸಿರುವ ಸ್ನೇಹ ಬಳಗದ ಸದಸ್ಯರು, ನ. 25ರಂದು ಪಂಚಮುಖೀ ದೇವಸ್ಥಾನ, ಡಿ. 2ರಂದು ಕೇಶವ ನಗರದ ಬನ್ನಿಮಹಾಂಕಾಳಿ ದೇವಸ್ಥಾನ ಹಾಗೂ ಶಿವಾಜಿ ಉದ್ಯಾನವನ್ನು ಶುಚಿಗೊಳಿಸಿದ್ದಾರೆ. ವಾಯು ವಿಹಾರಿಗಳ ಅನುಕೂಲಕ್ಕಾಗಿ ಉದ್ಯಾನದಲ್ಲಿ ಬೆಳೆದು ನಿಂತಿರುವ ಬೇಲಿ ಗಿಡಗಳು, ಕಳೆ ಹಾಗೂ ರಾಶಿ ರಾಶಿ ಕಸ, ಕಟ್ಟಡಗಳ ತ್ಯಾಜ್ಯವನ್ನೂ ತೆರವುಗೊಳಿಸುತ್ತಿದ್ದಾರೆ. ನೀರಿನ ಲಭ್ಯತೆಯಿರುವ ಉದ್ಯಾನಗಳಲ್ಲಿ ಸಸಿ ನೆಟ್ಟು, ಅವುಗಳನ್ನು ನಿರ್ವಹಣೆ ಮಾಡುವಂತೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸುತ್ತಿರುವುದು ವಿಶೇಷ.

Advertisement

ಹಸಿರೀಕರಣಕ್ಕೆ ಒತ್ತು: ಸ್ನೇಹ ಬಳಗದ ಸದಸ್ಯರು ನಿಸ್ವಾರ್ಥವಾಗಿ ಕಳೆದ ಎರಡು ವರ್ಷಗಳಿಂದ ಅವಳಿ ನಗರದ ವಿವಿಧೆಡೆ ಮರಗಿಡಗಳನ್ನು ಬೆಳೆಸುತ್ತಿದ್ದಾರೆ. ಶಹಪುರ ಪೇಟೆಯ ಐತಿಹಾಸಿಕ ಬಾವಿ, ಬೆಟಗೇರಿ ಸ್ಮಶಾನದ ಕಾಂಪೌಂಡ್‌, ಗಾಂಧಿ  ವೃತ್ತ, ಸ್ಟೇಷರ್‌ ರೋಡ್‌ನ‌ ಸಾರ್ವಜನಿಕ ಶೌಚಾಲಯ ಮತ್ತು ಮೂತ್ರಾಲಯಗಳಿಗೆ ರೇಖಾಚಿತ್ರಗಳ ಬಿಡಿಸಿ, ಜನಾಕರ್ಷಿಸುವಂತೆ ಮಾಡಿದ್ದಾರೆ. ಅದರ ಮುಂದುವರಿದ ಭಾಗವಾಗಿ ಉದ್ಯಾನಗಳ ಸ್ವಚ್ಛತೆ ಕೈಗೊಂಡಿದ್ದೇವೆ ಎಂಬುದು ಸ್ನೇಹ ಬಳಗದ ಸದಸ್ಯರ ಮಾತು.

ಇನ್ನು, ಸ್ನೇಹ ಬಳಗದ ಕಾರ್ಯಕ್ಕೆ ಡಿ. 2ರಂದು ನಗರಸಭೆಯೂ ಕೈಜೋಡಿಸಿದೆ. ಸ್ನೇಹ ಬಳಗದ ಕಾರ್ಯಕ್ಕೆ ನೆರವಾಗುವಂತೆ ಜೆಸಿಬಿ, ಪೌರ ಕಾರ್ಮಿಕರನ್ನೂ ಕಳುಹಿಸಿದೆ. ಒಟ್ಟಾರೆ, ಸಾರ್ವಜನಿಕರ ಸಹಭಾಗಿತ್ವವಿದ್ದರೆ ಯಾವುದೇ ಕೆಲಸ ಕಷ್ಟಸಾಧ್ಯವಲ್ಲ ಎಂಬುದಕ್ಕೆ ಇದು ಉತ್ತಮ ಉದಾಹರಣೆ.

ವಾರ್ಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳು, ವರ್ತಕರು ಸೇರಿದಂತೆ ಪ್ರತಿಷ್ಠಿತರು ವಾಸಿಸುತ್ತಿದ್ದಾರೆ. ಬಡಾವಣೆಯಲ್ಲಿ 35ಕ್ಕೂ ಹೆಚ್ಚು ಉದ್ಯಾನಗಳಿದ್ದರೂ ಅಭಿವೃದ್ಧಿ ಕಂಡಿಲ್ಲ. ಕನಿಷ್ಠಪಕ್ಷ ಸ್ವಚ್ಛಗೊಳಿಸುವುದರಿಂದ ವಾಯುವಿಹಾರಿಗಳಿಗೆ ಅನುಕೂಲವಾಗುತ್ತದೆ ಎಂದು ನಾವು ಭಾವಿಸಿದ್ದೇವೆ. ಉದ್ಯಾನಗಳಿಗೆ ನೀರಿನ ಸಂಪರ್ಕ ಒದಗಿಸಿದರೆ, ಸ್ಥಳೀಯರ ನೆರವಿನಿಂದ ಗಿಡಗಳು ಬೆಳೆಸುವುದಕ್ಕೂ ನಾವು ಸಿದ್ಧರಿದ್ದೇವೆ.
 ಬಾಬು ಎನ್‌. ಸಿದ್ಲಿಂಗ್‌, ಸ್ನೇಹ ಬಳಗದ ಪ್ರಮುಖ

Advertisement

Udayavani is now on Telegram. Click here to join our channel and stay updated with the latest news.

Next