Advertisement

Love Matter: ಪ್ರೀತಿ ವಿಷಯ ತಿಳಿಸುವುದಾಗಿ ಬೆದರಿಸಿ ವಿದ್ಯಾರ್ಥಿನಿ ಬಳಿ ಸುಲಿಗೆಗೈದ ಯುವಕ!

10:54 AM Aug 08, 2024 | Team Udayavani |

ಬೆಂಗಳೂರು: ಪ್ರೀತಿಯ ವಿಚಾರವನ್ನು ಕುಟುಂಬದವರಿಗೆ ಹೇಳುವುದಾಗಿ ಬ್ಲ್ಯಾಕ್‌ಮೇಲ್ ಮಾಡಿ ವಿದ್ಯಾರ್ಥಿನಿಯಿಂದ 75 ಗ್ರಾಂ ಚಿನ್ನಾಭರಣ ಹಾಗೂ 1.25 ಲಕ್ಷ ರೂ. ನಗದು ಸುಲಿಗೆ ಮಾಡಿದ್ದ ಆರೋಪಿಯನ್ನು ಸುಬ್ರ ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಚಿಕ್ಕಲಸಂದ್ರದ ಕಾಕ ತೀಯ ನಗರ ನಿವಾಸಿ ತೇಜಸ್‌ (19) ಬಂಧಿತ.

ಆರೋಪಿಯಿಂದ 3.40 ಲಕ್ಷ ರೂ. ಮೌಲ್ಯದ 50 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ನಾಯ್ಡು ಲೇಔಟ್‌ ನಿವಾಸಿ ವಿದ್ಯಾರ್ಥಿನಿಯ ತಾಯಿ ಹೇಮಾ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಏನಿದು ಪ್ರಕರಣ?:  ನಾಯ್ಡುನಗರ ನಿವಾಸಿ 19 ವರ್ಷದ ವಿದ್ಯಾರ್ಥಿನಿಗೆ 2 ವರ್ಷದ ಹಿಂದೆ ಕಾಲೇಜಿನ ಸಹಪಾಠಿ ಪ್ರೀತಂ ಎಂಬಾತನ ಮೂಲಕ ಆರೋಪಿ ಪರಿಚಯವಾಗಿದ್ದಾನೆ. ಬಳಿಕ ಆರೋಪಿ ತೇಜಸ್‌, ವಿದ್ಯಾರ್ಥಿನಿಯ ಮೊಬೈಲ್‌ ನಂಬರ್‌ ಪಡೆದು ಆಗಾಗ್ಗೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದ. ಇದೇ ವೇಳೆ ಆಕೆಯ ಕುಟುಂಬದವರು ಹಾಗೂ ಪ್ರಿಯಕರನ ಬಗ್ಗೆ ತಿಳಿದುಕೊಂಡಿದ್ದಾನೆ. ಕಳೆದ ಜೂನ್‌ನಲ್ಲಿ ವಿದ್ಯಾರ್ಥಿನಿಗೆ ಕರೆ ಮಾಡಿದ್ದ ತೇಜಸ್‌, “ನಿನ್ನ ಪ್ರೀತಿ ವಿಚಾರವನ್ನು ನಿನ್ನ ಸಹೋದರ ಮತ್ತು ತಾಯಿಗೆ ತಿಳಿಸುತ್ತೇನೆ. ಈ ವಿಚಾರ ತಿಳಿಸಬಾರದು ಎಂದರೆ, ಮನೆಯಲ್ಲಿರುವ ಚಿನ್ನಾಭರಣ ಹಾಗೂ ಹಣ ನನಗೆ ಕೊಡಬೇಕು’ ಎಂದು ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ. ಅಲ್ಲದೆ, ಮನೆ ಹಾಗೂ ಕಾಲೇಜು ಬಳಿ ಬಂದು ಆಕೆಗೆ ಬೆದರಿಕೆ ಹಾಕಿದ್ದಾನೆ.

ಅದರಿಂದ ಗಾಬರಿಗೊಂಡ ವಿದ್ಯಾರ್ಥಿನಿ, ಒಂದು ವೇಳೆ ತನ್ನ ಪ್ರೀತಿ ವಿಚಾರ ಕುಟುಂಬ ಸದಸ್ಯರಿಗೆ ಗೊತ್ತಾದರೆ, ವ್ಯಾಸಂಗಕ್ಕೆ ತೊಂದರೆ ಉಂಟಾಗಬಹುದು ಎಂದು ಆತಂಕಗೊಂಡು ಮನೆಯಲ್ಲಿದ್ದ 75 ಗ್ರಾಂ ಚಿನ್ನಾಭರಣ ಮತ್ತು 1.25 ಲಕ್ಷ ರೂ. ಅನ್ನು ಆರೋಪಿ ತೇಜಸ್‌ಗೆ ನೀಡಿದ್ದಾಳೆ.

Advertisement

ಆರೋಪಿ ಡೆಲಿವರಿ ಬಾಯ್  ಬಂಧಿತ ಆರೋಪಿ ತೇಜಸ್‌ ವ್ಯಾಸಂಗ ಅರ್ಧಕ್ಕೆ ಮೊಟಕುಗೊಳಿಸಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡಿಕೊಂಡಿದ್ದ. ವಿದ್ಯಾರ್ಥಿನಿಯ ಪ್ರೀತಿ ವಿಚಾರ ಹಾಗೂ ಮನೆಯವರ ಬಗ್ಗೆ ತಿಳಿದುಕೊಂಡು, ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಆಕೆಗೆ ಬ್ಲ್ಯಾಕ್‌ಮೇಲ್ ಮಾಡಿ ಚಿನ್ನಾಭರಣ ಹಾಗೂ ನಗದು ಸುಲಿಗೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ? :

ಇತ್ತೀಚೆಗೆ ವಿದ್ಯಾರ್ಥಿನಿಯ ತಾಯಿ ಹೇಮಾ ತಮ್ಮ ಸಂಬಂಧಿಕರ ಕಾರ್ಯಕ್ರಮಕ್ಕೆ ತೆರಳಲು ಬೀರು ತೆರೆದು ನೋಡಿದಾಗ ಚಿನ್ನಾಭರಣ ಹಾಗೂ ನಗದು ಇಲ್ಲದಿರುವುದು ಕಂಡು ಬಂದಿದೆ. ಈ ಬಗ್ಗೆ ಪುತ್ರಿಯನ್ನು ಪ್ರಶ್ನೆ ಮಾಡಿದಾಗ, ಸ್ನೇಹಿತ ತೇಜಸ್‌ ಎಂಬಾತ ಬ್ಲ್ಯಾಕ್‌ಮೇಲ್‌ ಮಾಡುತ್ತಿರುವ ವಿಚಾರ ತಿಳಿಸಿದ್ದಾರೆ. ಈ ಸಂಬಂಧ ಹೇಮಾ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next