ಮದ್ದೂರು/ಭಾರತೀನಗರ: ಕ್ಷುಲಕ ಕಾರಣಕ್ಕೆ ಯುವಕರ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ವೇಳೆ ತೀವ್ರವಾಗಿ ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿದ್ದ ಯುವಕನೊಬ್ಬ ಮೃತ ಪಟ್ಟಿರುವ ಘಟನೆ ಮದ್ದೂರು ಪೊಲೀಸ್ ಠಾಣಾ ವಾಪ್ತಿಯಲ್ಲಿ ನಡೆದಿದೆ.
ಮದ್ದೂರು ತಾಲೂಕು ಚಿಕ್ಕರಸಿನಕೆರೆ ಗ್ರಾಮದ ರಾಜೇಂದ್ರ ಅವರ ಪುತ್ರ ಸಿ.ಆರ್. ಪುನೀತ್ (24) ಸ್ನೇಹಿತರಿಂದ ಹಲ್ಲೆಗೊಳಗಾಗಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಯುವಕ.
ಘಟನೆ ವಿವರ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಸಂಬಂಧ ಹಣ ತೊಡಗಿಸಿದ್ದ ಪುನೀತ್‌ಗೆ ತನ್ನ ಹಣ ವಾಪಸ್ ನೀಡುವು ದಾಗಿ ಬಂದ ದೂರವಾಣಿ ಕರೆ ಮೇರೆಗೆ ಸ್ನೇಹಿತರಾದ ನಿತ್ಯಾನಂದ, ಅನಿಲ್ ಅವರೊಟ್ಟಿಗೆ ಬೋರಾಪುರ ಗ್ರಾಮಕ್ಕೆ ಆಗಮಿಸಿದ್ದ ವೇಳೆ ಮಾತಿನ ಚಕಮಕಿ ಉಂಟಾಗಿದೆ. ಎರಡೂ ಗುಂಪುಗಳು ಪರಸ್ಪರ ಹಲ್ಲೆಗೆ ಮುಂದಾಗಿ, ಬೋರಾಪುರ ಗ್ರಾಮದ ಯುವಕರ ತಂಡ ಮೃತ ಪುನೀತ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ತೀವ್ರವಾಗಿ ಗಾಯಗೊಳಿಸಿದ ಪರಿಣಾಮ ಅಸ್ವಸ್ಥಗೊಂಡ ಪುನೀತ್ ಅವನನ್ನು ಭಾರತಿನಗರದ ಜಿ.ಮಾದೇಗೌಡ ಆಸ್ಪತ್ರೆ ಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂ ರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾನೆ.
ಆರೋಪಿಗಳಾದ ಮಂಜ, ಸುಮಂತ್, ದಿನೇಶ್, ಸೀನಾ, ಶ್ರೀಧರ, ಸತೀಶ್, ಮನು, ಮಂಜ, ಮನೋಜ್ ಒಳಗೊಂಡಂತೆ ಒಟ್ಟು 10 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿರುವ ಮದ್ದೂರು ಪೊಲೀಸರು, ಮೃತನ ಸಹೋದರ ದಿಲೀಪ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ತಿಮ್ಮಯ್ಯ, ಡಿವೈಎಸ್‌ಪಿ ನವೀನ್ ಕುಮಾರ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಎಸ್. ಸಂತೋಷ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.