Advertisement

ಕಾಂಗ್ರೆಸ್ ಗೆ ಬೇಡವಾದರೆ ಮಾಜೀ ಕೇಂದ್ರ ಸಚಿವ, ನಾಲ್ಕುಬಾರಿಯ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ?

08:58 AM Mar 11, 2020 | Hari Prasad |

ನವದೆಹಲಿ: ಕಾಂಗ್ರೆಸ್ ಯುವ ನಾಯಕ ಮತ್ತು ರಾಹುಲ್ ಗಾಂಧಿ ಆಪ್ತವಲಯದಲ್ಲಿ ಒಬ್ಬರಾಗಿದ್ದ ಮಧ್ಯಪ್ರದೇಶದ ಪ್ರಭಾವಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ಇಂದು ಕಾಂಗ್ರೆಸ್ ಪಕ್ಷದಲ್ಲಿನ ತನ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಿಂಧಿಯಾ ಅವರು ಭಾರತೀಯ ಜನತಾ ಪಕ್ಷವನ್ನು ಸೇರಲಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿವೆ.

Advertisement

ಮೇಲ್ನೋಟಕ್ಕೆ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಪಕ್ಷವನ್ನು ತೊರೆದಂತೆ ನಮಗೆ ಕಂಡರೂ ಕಳೆದ ಒಂದು ವರ್ಷಗಳ ಮಧ್ಯಪ್ರದೇಶದಲ್ಲಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಎಲ್ಲೋ ಒಂದು ಕಡೆ ಕಾಂಗ್ರೆಸ್ ಪಕ್ಷವೇ ಈ ಯುವ ನಾಯಕನನ್ನು ಪಕ್ಷ ತೊರೆಯುವಂತೆ ಒತ್ತಡ ಹೇರಿತೆ ಎಂಬ ಗುಮಾನಿ ರಾಜಕೀಯ ಆಸಕ್ತರನ್ನ ಕಾಡದೇ ಇರದು.

15 ವರ್ಷಗಳ ಬಳಿಕ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರಕಾರ ಸರಳ ಬಹುಮತ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿಂಧಿಯಾ ಅವರು ಹೊಸ ಮುಖ್ಯಮಂತ್ರಿ ಪದಕ್ಕೆ ಪ್ರಬಲ ಅಕಾಂಕ್ಷಿಯಾಗಿದ್ದರು. ಆದರೆ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಕಮಲನಾಥ್ ಅವರು ಸಿಂಧಿಯಾ ಅವರಿಗಿಂತ ಹೆಚ್ಚಿನ ಶಾಸಕರ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆ ಸಂದರ್ಭದಲ್ಲಿ ಸಿಂಧಿಯಾ ಅವರಿಗೆ 23 ಕಾಂಗ್ರೆಸ್ ಶಾಸಕರ ಬೆಂಬಲ ಮಾತ್ರವೇ ಲಭ್ಯವಾಗಿತ್ತು.

ಆಗ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿಗೆ ಪರಮಾಪ್ತನಾಗಿದ್ದರೂ ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದಕ್ಕೆ ಸಿಂಧಿಯಾ ತನ್ನ ಪಕ್ಷದ ಹಿರಿಯ ನಾಯಕರ ವಿರುದ್ಧ ಅಸಮಧಾನ ಹೊಂದಿದ್ದರು. ಬಳಿಕ ನಡೆದ ಲೋಕಸಭೆ ಚುನಾವಣೆಯಲ್ಲೂ ಸಹ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಹಿನ್ನಡೆ ಉಂಟಾಗಿತ್ತು. ಸಿಂಧಿಯಾ ಅವರು ತನ್ನ ತಂದೆ ಮಾಧವ ರಾವ್ ಸಿಂಧಿಯಾ ಅವರ ಸ್ವಕ್ಷೇತ್ರವಾಗಿದ್ದ ಗುನಾ ಕ್ಷೇತ್ರದಲ್ಲಿ ಕೃಷ್ಣ ಪಾಲ್ ಸಿಂಗ್ ಯಾದವ್ ವಿರುದ್ಧ ಸೋಲು ಕಾಣುವಂತಾಗಿತ್ತು.

ಗುನಾ ಕ್ಷೇತ್ರದಲ್ಲಿ ತನ್ನ ಸೋಲಿಗೆ ಪಕ್ಷದಲ್ಲಿನ ನಾಯಕರ ಅಸಹಕಾರ ಮತ್ತು ಚಿತಾವಣೆಯ ಕಾರಣ ಎಂದು ಸಿಂಧಿಯಾ ಅವರು ಭಾವಿಸಿದ್ದರು ಹಾಗೂ ಅಂದಿನಿಂದಲೇ ಪಕ್ಷದ ಹೈಕಮಾಂಡ್ ಮತ್ತು ರಾಜ್ಯದಲ್ಲಿನ ಕಾಂಗ್ರೆಸ್ ಹಿರಿಯ ನಾಯಕರೊಂದಿಗೆ ಜ್ಯೋತಿರಾದಿತ್ಯ ಸಿಂಧಿಯಾ ಅವರ ಸಂಬಂಧ ಅಷ್ಟಕಷ್ಟೇ ಎಂಬಂತಿತ್ತು.

Advertisement

2002ರ ಉಪ ಚುನಾವಣೆಯಿಂದ ಹಿಡಿದು ಜ್ಯೋತಿರಾದಿತ್ಯ ಸಿಂಧಿಯಾ ಅವರು ಗುನಾ ಲೋಕಸಭಾ ಕ್ಷೇತ್ರದಿಂದ 2014ರವರೆಗೆ ಸತತ ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಈ ಮೂಲಕ ಮಧ್ಯಪ್ರದೇಶ ಕಾಂಗ್ರೆಸ್ ನಲ್ಲಿ ಪ್ರಭಾವಿ ಯುವ ನಾಯಕನಾಗಿ ಮೂಡಿಬರುತ್ತಿದ್ದ ಸಿಂಧಿಯಾ ಅವರ ಚರಿಷ್ಮಾವೇ ಪಕ್ಷದಲ್ಲಿ ಅವರ ಬೆಳವಣಿಗೆಗೆ ಅಡ್ಡಗಾಲಾಯಿತೇ ಎಂಬ ಸಂದೇಹ ರಾಜಕೀಯ ಪಂಡಿತರನ್ನು ಕಾಡದೇ ಇರದು.

ಇನ್ನೊಂದೆಡೆ, ತಂದೆಯ ಅನಿರೀಕ್ಷಿತ ಸಾವಿನ ಬೆನ್ನಲ್ಲೇ ಸಂಸದ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ನೀಡಿ ಬಳಿಕ ಮನಮೋಹನ್ ಸಿಂಗ್ ಸಚಿವ ಸಂಪುಟದಲ್ಲಿ ಎರಡು ಬಾರಿ ರಾಜ್ಯ ಸಚಿವ ಸ್ಥಾನ ಮತ್ತು ಒಂದು ಬಾರಿ ಕೆಂದ್ರ ಸಚಿವರಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟ ಮತ್ತು ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಲು ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ಪಕ್ಷವನ್ನು ತೊರೆಯುವ ನಿರ್ಧಾರ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಮುಂಬರುವ ದಿನಗಳಲ್ಲಿ ಎಷ್ಟು ಲಾಭದಾಯಕವಾಗಲಿದೆ ಎಂಬ ಪ್ರಶ್ನೆಯೂ ಸದ್ಯಕ್ಕೆ ಎಲ್ಲರನ್ನೂ ಕಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next