ಮಂಗಳೂರು: ಅಚ್ಚುಕಟ್ಟಾಗಿ ಬಟ್ಟೆ ಧರಿಸಿ, ಟೈ ಕಟ್ಟಿ ಕೂದಲಿಗೆ ಬಣ್ಣ ಹಚ್ಚಿ ಹಣ ಕೇಳಲು ಬರುವ ಹುಡುಗಿಯರ ಮೇಲೆ ಕರುಣೆ ತೋರಿ ಹಣ ಕೊಟ್ಟಿರೋ ಜೋಕೆ. ರಾಜಸ್ಥಾನದ ರಾಣಿಪುರದವರು ಎಂದು ಹೇಳಿಕೊಳ್ಳುವ ಯುವತಿಯರ ತಂಡ ಭಿಕ್ಷಾಟನೆಯಲ್ಲಿ ಸಕ್ರಿಯವಾಗಿದೆ. ತಮ್ಮ ಊರಿನಲ್ಲಿ ನೆರೆ ಬಂದಿದ್ದು, ಆಸ್ತಿಪಾಸ್ತಿ ಕಳೆದುಕೊಂಡಿದ್ದೇವೆ. ಆಹಾರ, ಬಟ್ಟೆ ಬರೆ ಇಲ್ಲದೆ ಸಂತ್ರಸ್ತರಾಗಿದ್ದು, ಧನಸಹಾಯ ನೀಡಿ ಎಂದು ಜೆರಾಕ್ಸ್ ಪ್ರತಿ ಹಿಡಿದು ತಿರುಗಾಡುತ್ತಾರೆ. ಕಾಲೇಜು ಮತ್ತು ಯುವಜನರು ಹೆಚ್ಚಿರುವ ಸ್ಥಳಗಳೇ ಅವರ ಆಯ್ಕೆ. ಇವರಲ್ಲಿ ಲೆಟರ್ ಹೆಡ್ ಅಥವಾ ಪೊಲೀಸರಿಂದ ಪಡೆದ ಅನುಮತಿ ಪತ್ರವಾಗಲೀ ಇಲ್ಲ. ಗುರುತಿನ ಚೀಟಿಯೂ ಇಲ್ಲ. ಈ ಬಗ್ಗೆ ನಗರದ ಸೌರಜ್ ತಮ್ಮ ಫೇಸುºಕ್ ಖಾತೆಯಲ್ಲಿ ವಿಡಿಯೋ ಪ್ರಕಟಿಸಿದ ಮೇಲೆ ಬುಧವಾರ ಯುವತಿಯರನ್ನು ಕದ್ರಿ ಠಾಣೆಗೆ ಕರೆದೊಯ್ದ ಪೊಲೀಸರು, ಪ್ರಕರಣ ದಾಖಲಿಸಿ, ಎಚ್ಚರಿಕೆ ನೀಡಿ ಕಳಿಸಿದ್ದಾರೆ.
ತಿರುಗಾಟದ ಬದುಕು
ಸೌರಜ್ ಅವರು ಹೇಳುವ ಪ್ರಕಾರ ಸುಮಾರು ಎಂಟು ತಿಂಗಳಿನಿಂದ ಇಂತಹ ಹಲವರು ನಗರದಲ್ಲಿ ತಿರುಗಾಡು ತ್ತಿದ್ದಾರೆ. ವ್ಯಕ್ತಿಯೋರ್ವ 100 ರೂ. ನೀಡಿದರೆ, ತಮ್ಮ ಬಳಿ ಇರುವ ಜೆರಾಕ್ಸ್ ಪ್ರತಿಯಲ್ಲಿ ಅದನ್ನು 1000 ರೂ. ಎಂದು ಬರೆದುಕೊಳ್ಳುತ್ತಾರೆ. ಅದೇ ಪ್ರತಿಯನ್ನು ಇನ್ನೊಬ್ಬ ವ್ಯಕ್ತಿಗೆ ತೋರಿಸಿದಾಗ ಇನ್ನೂ ಹೆಚ್ಚಿನ ಹಣ ನೀಡಬಲ್ಲ ಎಂಬ ಲೆಕ್ಕಾಚಾರ ಅವರದ್ದು ಎನ್ನುತ್ತಾರೆ.
8 ಮಂದಿಗೆ ಎಚ್ಚರಿಸಲಾಗಿದೆ
ನೆರೆ ಸಂತ್ರಸ್ತರು ಎಂದು ಹೇಳಿಕೊಂಡು ನಗರದಲ್ಲಿ ಭಿಕ್ಷಾಟನೆ ಮಾಡುತ್ತಿದ್ದು ಎಂದು ಯುವತಿಯರ ಮೇಲೆ ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡಿ ಬಿಡಲಾಗಿದೆ ಎಂದು ಕದ್ರಿ ಪೊಲೀಸ್ ಠಾಣಾ ಸಿಬಂದಿ “ಉದಯವಾಣಿ’ಗೆ ತಿಳಿಸಿದ್ದಾರೆ.