Advertisement
ಅಂತರ ಬೆಳೆಯಾಗಿ ಕೊತ್ತಂಬರಿ ಸೊಪ್ಪು : ಒಟ್ಟು 3.18 ಎಕರೆ ಜಮೀನು ಹೊಂದಿರುವ ಸಣ್ಣ ರೈತರಾದ ಬಸವರಾಜ ಸತ್ತಿಗೇರಿ ಅವರು ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ 25 ಗುಂಟೆ ಜಮೀನಿನಲ್ಲಿ ಕಳೆದ ಮೇ18 ರಂದು ಅರಿಶಿನ ನಾಟಿ ಮಾಡಿದ್ದಾರೆ. ನಂತರ ಐದು ದಿನ ಬಿಟ್ಟು ಮೇ22 ರಂದು ಅಂತರ ಬೆಳೆಯಾಗಿ 35 ಕೆಜಿ ಕೊತ್ತಂಬರಿ ಬೀಜವನ್ನು ಹಾಕಿದ್ದರು. ಕೇವಲ 35 ದಿನಗಳಲ್ಲಿ ಕೊತ್ತಂಬರಿ ಸೊಪ್ಪು ಬೆಳೆದಿದೆ. ಬಸವರಾಜ ಅವರು ಇನ್ನುಳಿದ ಜಮೀನಿನಲ್ಲಿ ಕಬ್ಬನ್ನು ಬೆಳೆಯುತ್ತಿದ್ದಾರೆ.
ಕೇವಲ ಒಂದು ತಿಂಗಳ ಐದು ದಿನಗಳಲ್ಲಿ ಬೆಳೆದ ಕೊತ್ತಂಬರಿ ಸೊಪ್ಪನ್ನು ತರಕಾರಿ ವ್ಯಾಪಾರಸ್ಥರಿಗೆ ಬರೊಬ್ಬರಿ 60 ಸಾವಿರಕ್ಕೆ ಗುತ್ತಿಗೆ ಮಾರಾಟ ಮಾಡಿದ್ದಾರೆ. ಗುತ್ತಿಗೆ ಪಡೆದ ವ್ಯಾಪಾರಿಯು ಕೂಲಿಯಾಳುಗಳ ಮೂಲಕ ಸೊಪ್ಪನ್ನು ಕಿತ್ತುಕೊಂಡು ಹೋಗಿದ್ದಾರೆ. ಇದರಿಂದ ರೈತನಿಗೆ ಕೂಲಿಯಾಳಿನ ಖರ್ಚು, ಸಾಗಾಣಿಕೆ ವೆಚ್ಚ ಮತ್ತು ವ್ಯಾಪಾರ ಮಾಡುವ ಸಮಸ್ಯೆಯಿಲ್ಲದೆ ನೇರವಾಗಿ ಲಾಭವನ್ನು ಕಂಡಿದ್ದಾರೆ. ಅರಿಶಿನ ಬೆಳೆಯ ಎಲೆಗಳು ದೊಡ್ಡದಾಗಿ ಅಗತಿ ಮಾಡುವುದರೊಳಗೆ ಇನ್ನೊಮ್ಮೆ ಕೊತ್ತಂಬರಿ ಸೊಪ್ಪನ್ನು ಬೆಳೆಯಬಹುದಾಗಿದೆ ಎನ್ನುತ್ತಾರೆ ಬಸವರಾಜ.
ಅರಿಶಿನ ಬೆಳೆಯಲ್ಲಿ ಅಂತರ ಬೆಳೆಯಾಗಿ ಕೇವಲ 25 ಗುಂಟೆ ಜಾಗೆಯಲ್ಲಿ 35 ಕೆಜಿ ಕೊತ್ತಂಬರಿ ಬೀಜವನ್ನು ಹಾಕಿದ್ದಾರೆ. ಅರಿಶಿನದ ಜೊತೆಗೆ ಹನಿನೀರಾವರಿ ಮೂಲಕ ನೀರು ಹಾಯಿಸಿದ್ದರಿಂದ ಪ್ರತ್ಯೇಕ ಕೆಲಸದ ಅಗತ್ಯವಿಲ್ಲ. 3500 ರೂ ಕೊತ್ತಂಬರಿ ಬೀಜ, 500 ರೂ ಕೀಟನಾಶಕ ಸಿಂಪರಣೆ ಸೇರಿ ಒಟ್ಟು 4 ಸಾವಿರ ಖರ್ಚು ಮಾಡಿದ್ದಾರೆ. ಕೇವಲ 35 ದಿನಗಳಲ್ಲಿ 4 ಸಾವಿರ ಖರ್ಚುಮಾಡಿ 56 ಸಾವಿರ ನಿವ್ವಳ ಲಾಭವನ್ನು ಕಂಡಿದ್ದಾರೆ.
Related Articles
ರೈತರು ತಮಗಿರುವ ಜಮೀನಿನಲ್ಲಿ ಹವಾಮಾನ, ಕಾಲಮಿತಿ, ಮಣ್ಣಿನ ಗುಣಧರ್ಮ ಆಧರಿಸಿ ಜಾಣತನದಿಂದ ಒಕ್ಕಲುತನ ಮಾಡಿದರೆ ಕೃಷಿಯಲ್ಲಿ ಲಾಭವನ್ನು ಕಾಣಬಹುದಾಗಿದೆ. ಕೇವಲ ದೀರ್ಘಾವಧಿ ಬೆಳೆಗಳನ್ನು ಅವಲಂಭಿಸುವುದಕ್ಕಿಂತ ಅಂತರ ಬೆಳೆಯಾಗಿ ವಿವಿಧ ತರಕಾರಿ ಬೆಳೆಗಳನ್ನು ಮಾಡುವುದರಿಂದ ಕಡಿಮೆ ಖರ್ಚು, ಅಲ್ಪಾವಧಿಯಲ್ಲಿ ಅಧಿಕ ಲಾಭವನ್ನು ಕಾಣಲು ಸಾಧ್ಯವಾಗುತ್ತದೆ.
-ಬಸವರಾಜ ಶ್ರೀಶೈಲ ಸತ್ತಿಗೇರಿ. ಕೆಸರಗೊಪ್ಪ.
Advertisement
ವರದಿ: ಚಂದ್ರಶೇಖರ ಮೋರೆ