Advertisement

ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಯುವ ಕಾಂಗ್ರೆಸ್‌ ಪ್ರತಿಭಟನೆ

07:15 AM Oct 24, 2017 | Team Udayavani |

ಕಾಪು : ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಗೆ ಮೋದಲು ಘೋಷಿಸಿದ್ದ ಅಚ್ಚೇ ದಿನ್‌ ಘೋಷಣೆ ಕೇವಲ ಸಿರಿವಂತರಿಗೆ ಸೀಮಿತವಾಗಿಬಿಟ್ಟಿದೆ. ಮೋದಿಯವರ ಲೆಕ್ಕಾಚಾರದಂತೆ ಅದಾನಿ, ಅಂಬಾನಿ, ರಾಮದೇವ್‌, ಅಮಿತ್‌ ಶಾ ಸೇರಿದಂತೆ ಇತರ ಉದ್ಯಮಿಗಳು ಮಾತ್ರಾ ಅಚ್ಚೇ ದಿನ್‌ ಘೋಷಣೆಯ ಲಾಭ ಪಡೆಯುವಂತಾಗಿದೆ. ಸಾಮಾನ್ಯ ವರ್ಗದವರ ಪಾಲಿಗೆ ಕೇಂದ್ರ ಸರಕಾರದ ನಡೆಗಳು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಿಮಿಸುತ್ತಿವೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್‌ನ ಅಧ್ಯಕ್ಷ ವಿಶ್ವಾಸ್‌ ಅಮೀನ್‌ ಹೇಳಿದರು.

Advertisement

ಬಿಜೆಪಿ ರಾಷೀrÅಯ ಅಧ್ಯಕ್ಷ ಅಮಿತ್‌ ಶಾ ಅವರ ಪುತ್ರ ಜಯ್‌ ಶಾ ಅವರ ಕಂಪೆನಿಯ ವಹಿವಾಟು ಏರಿಕೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಸೋಮವಾರ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್‌ ವತಿಯಿಂದ ಕಾಪು ಪೇಟೆಯಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ಸಾಧನೆಯನ್ನು ಕಂಡು ಬಿಜೆಪಿ ದಂಗಾಗಿ ಹೋಗಿದೆ. ಬಿಜೆಪಿಯ ನೇತೃತ್ವ ವಹಿಸಿರುವ ಮೋದಿ ಮತ್ತು ಅಮಿತ್‌ ಶಾ ಅವರಿಗೆ ಅವರದ್ದೇ ಪಕ್ಷದ ಭ್ರಷ್ಟಾಚಾರಿಗಳು ಕಾಣಿಸುತ್ತಲೇ ಇಲ್ಲ. ಬಿಜೆಪಿಗೆ ಕಪ್ಪ ನೀಡಿರುವ ಬಗ್ಗೆ  ಅನಂತ್‌ ಕುಮಾರ್‌ ಮತ್ತು ಯಡಿಯೂರಪ್ಪ ಅವರು ಸಾರ್ವಜನಿಕವಾಗಿ ಮಾತನಾಡಿ ಕೊಂಡಿರುವುದು ತನಿಖೆಯಿಂದಲೂ ದೃಢಪಟ್ಟಿದ್ದು, ನೈತಿಕತೆಯಿದ್ದರೆ ಇಬ್ಬರು ನಾಯಕರೂ ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡ ಡಾ| ದೇವಿಪ್ರಸಾದ್‌ ಶೆಟ್ಟಿ ಮಾತನಾಡಿ, ನೋಟ್‌ ಬ್ಯಾನ್‌, ಜಿಎಸ್‌ಟಿ ಹೇರಿಕೆ ಮತ್ತು ಕೈಗಾರಿಕೋದ್ಯಮಿಗಳಿಗೆ ನೆರವು ಸಹಿತವಾಗಿ ಉದ್ಯಮಿಗಳನ್ನು ಬೆಳೆಸು ತ್ತಿರುವ ಕೇಂದ್ರ ಸರಕಾರ ಬಡವರ ಹೊಟ್ಟೆಯ ಅನ್ನಕ್ಕೆ ಕಲ್ಲು ಹಾಕುತ್ತಿದೆ. ಇನ್ನು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದ ವೇಳೆ ಹಗರಣಗಳ ಸರಮಾಲೆಯನ್ನೇ ಹೊತ್ತುಕೊಂಡು ಅಪಮಾನಕೀRಡಾದ ಬಿಜೆಪಿ ನಾಯಕರು ಮತ್ತೆ ವೋಟು ಕೇಳಲು ಸಿದ್ಧತೆ ನಡೆಸುತ್ತಿರುವುದು ವಿಷಾದನೀಯವಾಗಿದೆ. ಇಂತಹವರ ವಿರುದ್ಧ ಹೋರಾಟಕ್ಕೆ ಯುವ ಕಾಂಗ್ರೆಸ್‌ ಪಡೆ ಸಿದ್ಧವಾಗಬೇಕಿದೆ ಎಂದರು.

ಯುವ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಅಜೀಜ್‌ ಹೆಜಮಾಡಿ, ಉಡುಪಿ ಜಿಲ್ಲಾ ವೀಕ್ಷಕ ಉಮೇಶ್‌ ಬೋರೇಗೌಡ, ರಾಜ್ಯ ಮುಖಂಡ ಸುಹೈಲ್‌ ಕಂದಕ್‌, ಕಾಪು ಬ್ಲಾಕ್‌ ಯುವ ಕಾಂಗ್ರೆಸ್‌ ಅಧ್ಯಕ್ಷ ಮೆಲ್ವಿನ್‌ ಡಿ’ಸೋಜ,ಮೀನುಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕ ದೀಪಕ್‌ ಕುಮಾರ್‌ ಎರ್ಮಾಳ್‌, ಪುರಸಭಾ ಅಧ್ಯಕ್ಷೆ ಸೌಮ್ಯ ಎಸ್‌., ಉಪಾಧ್ಯಕ್ಷ ಎಚ್‌. ಉಸ್ಮಾನ್‌, ತಾ. ಪಂ. ಸದಸ್ಯರಾದ ಗೀತಾ ವಾಗ್ಲೆ, ಮೈಕಲ್‌ ಡಿ’ಸೋಜ, ರಾಜೇಶ್‌ ಶೆಟ್ಟಿ, ಬೆಳ್ಳೆ ಗ್ರಾ.ಪಂ. ಅಧ್ಯಕ್ಷೆ ರಂಜನಿ ಹೆಗ್ಡೆ, ಪಕ್ಷದ ಮುಖಂಡರಾದ ಎಚ್‌. ಅಬ್ದುಲ್ಲಾ, ಕಿರಣ್‌ ಕುಮಾರ್‌, ಅಮೀರ್‌ ಮಹಮ್ಮದ್‌, ಇಮ್ರಾನ್‌, ಸದಾನಂದ ಶೆಟ್ಟಿ, ಮಾಧವ ಪಾಲನ್‌, ಕೆ.ಆರ್‌. ಪಾಟ್ಕರ್‌, ಪ್ರಭಾಕರ ಆಚಾರ್ಯ, ಫರ್ಜಾನಾ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next