Advertisement

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

12:15 AM Apr 28, 2024 | Team Udayavani |

ಬೆಂಗಳೂರು: ಬರ ಪರಿಹಾರ ಘೋಷಣೆ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಎಕ್ಸ್‌ ಖಾತೆಯಲ್ಲೂ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದು, ಕೇಳಿದ್ದಕ್ಕಿಂತ ಕಡಿಮೆ ಘೋಷಿಸಿದೆ ಎಂದು ಕಾಂಗ್ರೆಸ್‌ ಆರೋಪಿಸಿದರೆ, 4860 ಕೋಟಿ ರೂ. ಕೊಟ್ಟರೆ ಸಾಕು ಎಂದಿದ್ದ ಸಿಎಂ ಈಗ ಉಲ್ಟಾ ಹೊಡೆಯುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

Advertisement

ಕರ್ನಾಟಕ ಕಾಂಗ್ರೆಸ್‌ ತನ್ನ ಎಕ್ಸ್‌ ಖಾತೆಯಲ್ಲಿ 3 ಪ್ರತ್ಯೇಕ ಪೋಸ್ಟ್‌ಗಳನ್ನು ಹಾಕಿದ್ದು, ಸುಪ್ರೀಂ ಕೋರ್ಟ್‌ ಆದೇಶ ಪಾಲಿಸಿದಂತೆಯೂ ಆಗಬೇಕು, ಕರ್ನಾಟಕಕ್ಕೆ ಅನ್ಯಾಯ ಆದಂತೆಯೂ ಇರಬೇಕು ಎಂಬ ಚಾಣಾಕ್ಷತನವನ್ನು ಕೇಂದ್ರ ಸರಕಾರ ತೋರಿದೆ. ಬರದಿಂದ ಕರ್ನಾಟಕಕ್ಕೆ 35 ಸಾವಿರ ಕೋಟಿ ರೂ. ಅಧಿಕ ನಷ್ಟವಾಗಿದೆ. ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ನಮ್ಮ ಸರಕಾರ ಪ್ರಸ್ತಾವನೆ ಸಲ್ಲಿಸಿದ್ದು 18,171 ಕೋಟಿ ರೂ. ಆದರೆ, ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ ಕೇವಲ 3,454 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿ ಕರ್ನಾಟಕ ದ್ವೇಷವನ್ನು ಮುಂದುವರಿಸಿದೆ. ನ್ಯಾಯಯುತ ಪರಿಹಾರಕ್ಕಾಗಿ ಮತ್ತೂಮ್ಮೆ ನ್ಯಾಯಾಲಯದ ಮೆಟ್ಟಿಲು ಹತ್ತಬೇಕೆ ಎಂದು ಪ್ರಧಾನಿ ಮೋದಿ ಅವರನ್ನು ಟ್ಯಾಗ್‌ ಮಾಡಿ ಪ್ರಶ್ನಿಸಿದೆ.

ಇತ್ತ ಕರ್ನಾಟಕ ಬಿಜೆಪಿ ಕೂಡ ಪೋಸ್ಟ್‌ ಹಾಕಿದ್ದು, ಕರ್ನಾಟಕದಲ್ಲಿ ಕಂಡು-ಕೇಳರಿಯದ ಬರ ಉಂಟಾದರೂ, ರೈತರಿಗೆ ಬಿಡಿಗಾಸು ಮಧ್ಯಂತರ ಪರಿಹಾರ ನೀಡದೆ ರಾಜ್ಯ ಕಾಂಗ್ರೆಸ್‌ ಸರಕಾರ ಸಂಪೂರ್ಣ ಓಲೈಕೆ ರಾಜಕಾರಣದಲ್ಲಿ ನಿರತವಾಗಿತ್ತು. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿ ಯಲ್ಲಿರುವ ಸಂದರ್ಭ ಕನ್ನಡಿಗರ ಸಂಕಷ್ಟಕ್ಕೆ ನೆರವಾಗಿರುವ ಪ್ರಧಾನಿಯವರು ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ನೀಡುವ ಮೂಲಕ ಕನ್ನಡಿಗರ ಹಿತ ಕಾಯುವ ಕೆಲಸ ಮಾಡಿದ್ದಾರೆ ಎಂದಿರುವುದೂ ಅಲ್ಲದೆ, ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮಗಳ ಹೇಳಿಕೆ ವೀಡಿಯೋವೊಂದನ್ನು ಪೋಸ್ಟ್‌ ಮಾಡಿದ್ದು, ವಾಸ್ತವಿಕವಾಗಿ ನಷ್ಟವಾಗಿರುವುದು 30 ಸಾವಿರ ಕೋಟಿ. ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ 4,860 ಕೋಟಿ ರೂ. ಕೊಟ್ಟರೂ ಸಾಕು ಎಂದಿದ್ದರು. ಈಗ ಉಲ್ಟಾ ಹೊಡೆದಿದ್ದಾರೆ. ನಿಮಗೆ ಎರಡು ನಾಲಗೆ ಇದೆ ಎಂಬುದನ್ನು ಸಾಬೀತುಪಡಿಸಿದಂತಲ್ಲವೇ ಎಂದು ಮರುಪ್ರಶ್ನೆ ಹಾಕಿದೆ.

“ಬರ ಪರಿಹಾರ’ ರಾಜ್ಯ ಸರಕಾರದ ರಾಜಕಾರಣ ಸಲ್ಲದು: ಬೊಮ್ಮಾಯಿ
ಹಾವೇರಿ: ಬರ ಪರಿಹಾರ ಬಿಡುಗಡೆ ವಿಚಾರದಲ್ಲಿ ರಾಜ್ಯ ಸರಕಾರ ರಾಜಕಾರಣ ಮಾಡುವುದನ್ನು ಬಿಡಬೇಕು. ಚುನಾವಣ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೇಂದ್ರ ಸರಕಾರ ಚುನಾವಣ ಆಯೋಗದ ಅನುಮತಿ ಪಡೆದು ರಾಜ್ಯಕ್ಕೆ ಬರ ಪರಿಹಾರ ನೀಡಿದ್ದು, ರಾಜ್ಯದ ರೈತರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರುವ ಕಾಳಜಿ ತೋರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಬರ ಪರಿಹಾರ ಪಡೆಯಲು ಇರುವ ನಿಯಮಗಳನ್ನು ರಾಜ್ಯ ಸರಕಾರದವರು ಸರಿಯಾಗಿ ಪಾಲನೆ ಮಾಡಲಿಲ್ಲ. ಅದರಲ್ಲೂ ರಾಜಕಾರಣ ಮಾಡುತ್ತ ಕಾಲಹರಣ ಮಾಡಿದರು. ಇವರು ಸರಿಯಾಗಿ ನಿಯಮ ಪಾಲಿಸಿದ್ದರೆ ಇಷ್ಟೊತ್ತಿಗಾಗಲೇ ಪರಿಹಾರ ಬರುತ್ತಿತ್ತು. ಕೇಂದ್ರ ಸರ್ಕಾರ ಯಾವತ್ತೂ ಪರಿಹಾರ ಕೊಡುವುದಿಲ್ಲ ಎಂದು ಹೇಳಿಲ್ಲ. ಇವರು ಪರಿಹಾರ ಕೊಡಲು ಕೇಳಬೇಕಾದ ರೀತಿಯಲ್ಲಿ ಕೇಳಿಲ್ಲ. ರಾಜ್ಯ ಸರಕಾರ ಇಂತಹ ವಿಷಯಗಳಲ್ಲಿ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ತಾಕೀತು ಮಾಡಿದರು.

Advertisement

ಕೇಂದ್ರವನ್ನು ದೂಷಿಸಿ ಜನರ ದಾರಿ ತಪ್ಪಿಸುತ್ತಿರುವ ರಾಜ್ಯ ಸರಕಾರ: ಯಡಿಯೂರಪ್ಪ
ಮುದ್ದೇಬಿಹಾಳ: ಕಾಂಗ್ರೆಸ್‌ ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿ ಸುವ ಬದಲು ಕೇಂದ್ರವನ್ನು ದೂಷಿಸಿ ಜನರ ದಾರಿ ತಪ್ಪಿಸುತ್ತಿದೆ. ಜನರ ತೆರಿಗೆ ಹಣ ಎಲ್ಲಿ ಹೋಯ್ತು? ಈ ಸರಕಾರದಿಂದ ಲೂಟಿ ನಡೆಯುತ್ತಿದೆ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಆಪಾದಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರಕಾರ ತನ್ನ ಪಾಲನ್ನು ರಾಜ್ಯಗಳಿಗೆ ಕೊಟ್ಟೇ ಕೊಡುತ್ತದೆ. ಆದರೆ, ರಾಜ್ಯದಲ್ಲಿರುವ ಕಾಂಗ್ರೆಸ್‌ ಸರಕಾರ ತನ್ನ ಪಾಲನ್ನು ಖರ್ಚು ಮಾಡದೇ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ. ಇದು ರಾಜ್ಯ ಸರಕಾರ ದಿವಾಳಿ ಆಗಿರುವ ಲಕ್ಷಣವಾಗಿದೆ ಎಂದರು.

ನಾವು ಕೊಟ್ಟಂತೆ ರೈತರಿಗೆ
ಡಬಲ್‌ ಬರ ಪರಿಹಾರ ಕೊಡಲಿ
ಬೆಂಗಳೂರು: ಬರಗಾಲದಿಂದ ತತ್ತರಿಸಿದ್ದ ರಾಜ್ಯದ ಜನತೆಗೆ 3,454 ಕೋಟಿ ರೂ. ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ನೀಡಿದೆ. ಇದರಲ್ಲಿ ಕಾಂಗ್ರೆಸ್‌ ಸರ್ಕಾರದ ಯಾವುದೇ ಪಾತ್ರವಿಲ್ಲ. ಸಾಮರ್ಥ್ಯವಿದ್ದರೆ ಹಿಂದೆ ನಾವು ಅಧಿಕಾರದಲ್ಲಿದ್ದಾಗ ಕೊಟ್ಟಂತೆ ಡಬಲ್‌ ಪರಿಹಾರ ನೀಡಲಿ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ರಾಜ್ಯ ಸರಕಾರಕ್ಕೆ ಸವಾಲು ಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರಕಾರದ ಖಜಾನೆ ಖಾಲಿಯಾಗಿದೆ. ಬರ ಪರಿಹಾರ ಸಂಬಂಧ ಸಕಾಲದಲ್ಲಿ ಕೇಂದ್ರಕ್ಕೆ ಮಾಹಿತಿ ನೀಡಲು ಸರಕಾರ ವಿಳಂಬ ಮಾಡಿತ್ತು. ಕೋರ್ಟ್‌ ಆದೇಶವಾಗಿದ್ದರೆ ಕರ್ನಾಟಕಕ್ಕೆ ಮಾತ್ರ ಪರಿಹಾರ ಬರಬೇಕಿತ್ತು. ಬರ ಹಾಗೂ ಪ್ರಕೃತಿ ವಿಕೋಪಕ್ಕೆ ಪರಿಹಾರ ನೀಡಲು ಚುನಾವಣ ಆಯೋಗ ಅನುಮತಿ ನೀಡಿರುವುದರಿಂದ ಮಾತ್ರ ಹಣ ಬಿಡುಗಡೆಯಾಗಿದೆ. ಇದರಲ್ಲಿ ಕಾಂಗ್ರೆಸ್‌ನ ಹೋರಾಟ ಏನೂ ಇಲ್ಲ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್‌ ಸರಕಾರ ಬರಗಾಲದ ಪರಿಹಾರದ ಹಣವನ್ನು ಲೂಟಿ ಮಾಡಬಾರದು. ಇದರಲ್ಲೂ ಕೈ ಚಳಕ ಮಾಡಿ ದುಡ್ಡು ಹೊಡೆಯದಂತೆ ನಾವು ಕಾವಲು ಕಾಯುತ್ತೇವೆ. ಈವರೆಗೆ ಬರ ಪರಿಹಾರ ಬಂದಿಲ್ಲ ಎಂದು ಕಾಂಗ್ರೆಸ್‌ ಹೇಳುತ್ತಿತ್ತು. ರಾಜ್ಯ ಸರ್ಕಾರ ದುಡ್ಡು ಹೊಡೆಯಲು ಚೆಕ್‌ ಮೂಲಕ ಪರಿಹಾರ ನೀಡಬಾರದು, ಡಿಬಿಟಿ ಮೂಲಕವೇ ನೇರವಾಗಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next