Advertisement

ಸ್ವಚ್ಛತೆಗೆ ಟೊಂಕ ಕಟ್ಟಿದ ಯುವ ಸೇನೆ

02:54 PM Jul 16, 2019 | Suhan S |

ಗದಗ: ಪೌರ ಕಾರ್ಮಿಕರ ಕೊರತೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಕೊರತೆ ಹಾಗೂ ಖಾಲಿ ನಿವೇಶನದಾರರ ಅಲಕ್ಷ್ಯದಿಂದಾಗಿ ನಗರದ ವಿವಿಧೆಡೆ ತ್ಯಾಜ್ಯ ವಿಲೇವಾರಿ ಸ್ಥಳಗಳಾಗಿ ಪರಿವರ್ತನೆಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವಚ್ಛತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಖಾಲಿ ನಿವೇಶನ ಹಾಗೂ ಬೀದಿ ಬದಿಗಳ ಸ್ವಚ್ಛತೆಗಾಗಿ ಕಾಲೇಜು ವಿದ್ಯಾರ್ಥಿಗಳ ಪಡೆಯೊಂದು ಟೊಂಕ ಕಟ್ಟಿ ನಿಂತಿದೆ. ಪ್ರತಿ ರವಿವಾರ ಅವಳಿ ನಗರದ ವಿವಿಧೆಡೆ ಸ್ವಚ್ಛತೆ ಕೈಗೊಳ್ಳುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Advertisement

ಇಲ್ಲಿನ ಬ್ಯಾಂಕರ್ಸ್‌ ಕಾಲೋನಿಯ 15ಕ್ಕೂ ಹೆಚ್ಚು ಯುವಕರು ‘ಸ್ವಚ್ಛತಾ ಯುವ ಸೇನೆ’ ಎಂಬ ಗುಂಪು ಕಟ್ಟಿಕೊಂಡು ಕಳೆದ ಒಂದು ತಿಂಗಳಿಂದ ನಗರದ ಪ್ರಧಾನ ಅಂಚೆ ಕಚೇರಿ ಸಮೀಪದ ಖಾಲಿ ನಿವೇಶನಗಳು, ವಿಡಿಎಸ್‌ಟಿಸಿ ಆಟದ ಮೈದಾನ, ವಿವಿಧ ಉದ್ಯಾನಗಳಲ್ಲಿ ಸ್ವಚ್ಛತೆ ನಡೆಸಿದ್ದಾರೆ. ಸ್ಥಳೀಯರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವುದರೊಂದಿಗೆ, ತ್ಯಾಜ್ಯದಿಂದ ಹರಡುವ ಕಾಯಿಲೆಗಳ ಬಗ್ಗೆಯೂ ತಿಳಿವಳಿಕೆ ನೀಡುವುದು ಸ್ವಚ್ಛತಾ ಯುವ ಸೇನೆ ಉದ್ದೇಶವಾಗಿದೆ.

2017ರಲ್ಲಿ ಕೇಂದ್ರ ಸರಕಾರ ಪ್ರಕಟಿಸಿದ ರಾಷ್ಟ್ರಮಟ್ಟದ ಸ್ವಚ್ಛ ಸರ್ವೇಕ್ಷಣ ಪಟ್ಟಿಯಲ್ಲಿ ಗದಗ- ಬೆಟಗೇರಿ ನಗರಸಭೆ 167ನೇ ಸ್ಥಾನ ಪಡೆದಿತ್ತು. ಆನಂತರ 2019ರ ಪಟ್ಟಿಯಲ್ಲಿ ಈ ಗರಿ ಕಳಚಿ ಬಿದ್ದು, ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಯುವಕರು ಸ್ವಚ್ಛತಾ ಯುವ ಸೇನೆ ಹೆಸರಲ್ಲಿ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

ಅವಳಿ ನಗರವನ್ನು ಸ್ವಚ್ಛ ಹಾಗೂ ಸುಂದರವನ್ನಾಗಿಸಿ ಪರಿವರ್ತಿಸುವ ಸಂಕಲ್ಪ ತೊಟ್ಟಿದ್ದಾರೆ. ಅದಕ್ಕಾಗಿ ವಿವಿಧ ಪರಿಕರಗಳನ್ನೂ ಖರೀದಿಸಿರುವ ಈ ಯುವಕರು, ಪ್ರತಿ ರವಿವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಕೈಗಳಿಗೆ ಗ್ಲೌಸ್‌ ಧರಿಸಿ, ಗುದ್ದಲಿ, ಪಿಕಾ, ಕೊಡ್ಲಿ ಹಿಡಿದು ಶ್ರಮದಾನ ಮಾಡುತ್ತಿದ್ದಾರೆ.

ಖಾಲಿ ನಿವೇಶನ, ಮೈದಾನಗಳಿಗೆ ಆದ್ಯತೆ: ನಗರಸಭೆ ಪೌರ ಕಾರ್ಮಿಕರು ಪ್ರತಿ ನಿತ್ಯ ರಸ್ತೆಗಳನ್ನು ಗುಡಿಸಿ, ಕಾಲಕಾಲಕ್ಕೆ ಚರಂಡಿಗಳನ್ನೂ ಸ್ವಚ್ಛಗೊಳಿಸುತ್ತಾರೆ. ಆದರೆ, ಖಾಲಿ ನಿವೇಶನ, ಆಟದ ಮೈದಾನಗಳಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆ. ನಿವೇಶನ ಖರೀದಿದಾರರು ಅದರ ಸ್ವಚ್ಛತೆ ಮತ್ತು ನಿರ್ವಹಣೆ ಕುರಿತು ಕಿಂಚಿತ್ತೂ ಗಮನಿಸುವುದಿಲ್ಲ. ಇನ್ನು, ನೆರೆಹೊರೆಯರ ಪಾಲಿಗೆ ಖಾಲಿ ನಿವೇಶನಗಳೇ ತ್ಯಾಜ್ಯವಿಲೇವಾರಿ ಘಟಕವಾಗಿವೆ. ಮನೆ ಸಮೀಪದಲ್ಲೇ ನಗರಸಭೆ ಕಸ ಸುರಿಯುವ ಕಂಟೇನರ್‌ಗಳಿದ್ದರೂ, ಜನರಿಗೆ ಖಾಲಿ ನಿವೇಶಗಳ ಮೇಲೆಯೇ ಪ್ರೀತಿ. ಹೀಗಾಗಿ ಖಾಲಿ ನಿವೇಶನಗಳು, ರಸ್ತೆಯ ತಿರುವುಗಳಲ್ಲಿ ರಾಶಿ ರಾಶಿ ಕಸ ಕಂಡುಬರುತ್ತಿದೆ. ಅದನ್ನು ಸ್ವಚ್ಛಗೊಳಿಸುತ್ತಿರುವ ಯುವಕರು, ನಗರಸಭೆ ಕಸ ಸುರಿಯುವ ಕಂಟೇನರ್‌ಗಳಲ್ಲೇ ವಿಲೇವಾರಿ ಮಾಡುತ್ತಿದ್ದಾರೆ.

Advertisement

ಅದರೊಂದಿಗೆ ಮಳೆಗೆ ತ್ಯಾಜ್ಯ ಕೊಳೆತು, ಸುತ್ತಲಿನ ಪ್ರದೇಶದ ಗಬ್ಬು ನಾರುತ್ತದೆ. ಇದು ನಾನಾ ರೋಗಗಳಿಗೂ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದೇವೆ ಎನ್ನುತ್ತಾರೆ ಸ್ವಚ್ಛತಾ ಯುವ ಸೇನೆ ಸದಸ್ಯರು. ಇನ್ನು, ಈ ಯುವಕರ ಪ್ರಯತ್ನಕ್ಕೆ ಜನರಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ.

ಸ್ವಚ್ಛತಾ ಯುವ ಸೇನೆ ಯುವಕರು ಹೆಡ್‌ಪೋಸ್ಟ್‌ ಸಮೀಪದ ಖಾಲಿ ನಿವೇಶದಲ್ಲಿ ಶ್ರಮದಾನ ಮಾಡಿದರು. ನಗರದ ಸ್ವಚ್ಛತಾ ಯುವ ಸೇನೆ ಯುವಕರ ತಂಡ ಪ್ರತೀ ಭಾನುವಾರ ಹಾಗೂ ಕಾಲೇಜು ರಜಾ ದಿನಗಳಲ್ಲಿ ನಗರದ ವಿವಿಧೆಡೆ ಸ್ವಚ್ಛತಾ ಕಾರ್ಯಕ್ರಮ ನಡೆಸುತ್ತಿದ್ದೇವೆ. ಈ ಮೂಲಕ ಸುತ್ತಲಿನ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಅವಳಿ ನಗರವನ್ನು ಸ್ವಚ್ಛ ನಗರವನ್ನಾಗಿಸುವ ಗುರಿ ಹೊಂದಿದ್ದೇವೆ. ನಮ್ಮಂತೆ ಇತರೆ ಕಾಲೇಜು ವಿದ್ಯಾರ್ಥಿಗಳು, ಯುವಕರು ಹಾಗೂ ಸಾರ್ವಜನಿಕರು ಕೂಡಾ ಸ್ವಚ್ಛತಾ ಯುವ ಸೇನೆಯೊಂದಿಗೆ ಕೈಜೋಡಿಸಬಹುದು.•ಕಿಶನ್‌, ಸ್ವಚ್ಛತಾ ಯುವ ಸೇನೆ ಸ್ವಯಂ ಸೇವಕ.

 

•ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next