Advertisement
ಆಫೀಸಿಗೆ ಅಡ್ಜಸ್ಟ್ ಆಗುತ್ತೆ…ಫಾರ್ಮಲ್‌ವೇರ್ ಆದ ಕಾರಣ ಇವನ್ನು ಸಾಮಾನ್ಯವಾಗಿ ಆಫೀಸ್‌ಗಳಿಗೆ ತೆರಳುವಾಗ ತೊಡಲಾಗುತ್ತದೆ. ಮಹಿಳೆಯರ ಸೂಟ್‌ಗಳಲ್ಲಿ ಹೆಚ್ಚಾಗಿ ಟೈ ಅಥವಾ ಬೋ ಇರುವುದಿಲ್ಲ. ಫಾರ್ಮಲ್ ಶರ್ಟ್ (ಅಂಗಿ), ಪ್ಯಾಂಟ್ ಮತ್ತು ಕೋಟ್ ಇರುತ್ತವೆ. ಪ್ಯಾಂಟ್ ಬದಲಿಗೆ ಸ್ಕರ್ಟ್ ಅನ್ನೂ ತೊಡಬಹುದು. ಸೂಟ್ ಜೊತೆಗಿನ ಪ್ಯಾಂಟ್‌ಗಳಲ್ಲೂ ಅನೇಕ ಆಯ್ಕೆಗಳಿವೆ. ಬೆಲ್ ಬಾಟಮ್, ಸ್ಲಿಮ್ ಫಿಟ್, ಬೂಟ್ ಕಟ್, ಆಂಕಲ್ ಲೆನ್ (ಕಾಲಗಂಟಿನ ಅಳತೆಯ ಪ್ಯಾಂಟ್), ಪ್ಯಾರಲಲ್ ಹೀಗೆ ಬಗೆಬಗೆಯ ಆಯ್ಕೆಗಳಿವೆ. ಪ್ಯಾಂಟ್ ಜೊತೆಗಿನ ಸೂಟ್ ತೊಟ್ಟಾಗ ಗೌರವ ಹೆಚ್ಚಾಗುತ್ತೆ ಎಂದು ಅನೇಕರು ನಂಬುತ್ತಾರೆ.
ಈ ಶೈಲಿಗೆ “ಪವರ್ ಡ್ರೆಸ್ಸಿಂಗ್’ ಎಂಬ ಹೆಸರೂ ಇದೆ! ಸೂಟ್ ತೊಟ್ಟರೆ ನೌಕರರ ಮಧ್ಯೆ ತಮಗೆ ಮರ್ಯಾದೆ ಜಾಸ್ತಿ ಎಂಬುದು ಅನೇಕ ಬಾಸ್‌ಗಳ ದೃಢವಾದ ನಂಬಿಕೆ. ಹಾಗಾಗಿ ಲೇಡಿ ಬಾಸ್‌ಗಳೂ ಈಗ ಸೂಟ್‌ಗಳನ್ನು ತೊಡಲು ಮುಂದಾಗಿದ್ದಾರೆ. ರಾಜಕಾರಣಿಗಳು, ಕ್ರೀಡಾಪಟುಗಳು, ಸಿನೆಮಾ ತಾರೆಯರು ಹಾಗೂ ಉದ್ಯಮಿಗಳು, ವಿದೇಶಿ ಸಚಿವರು, ರಾಜ-ರಾಣಿಯರು ಮತ್ತು ಸೆಲೆಬ್ರಿಟಿಗಳನ್ನೂ ಸೂಟ್‌ನಲ್ಲಿ ನೋಡಿರುತ್ತೀರಿ. ಈ ಟ್ರೆಂಡ್ ಎಂದಿಗೂ ಮಾಸಿ ಹೋಗದು. ಬ್ಲ್ಯಾಕ್ ಆ್ಯಂಡ್ ವೈಟ್ ಹಳೇದಾಯ್ತು…
ಸೂಟ್ ಎಂದಾಗ ಕಪ್ಪು, ಬಿಳುಪು, ಬೂದಿ ಬಣ್ಣದ್ದೇ ಆಗಿರಬೇಕೆಂದೇನೂ ಇಲ್ಲ. ಏಕೆಂದರೆ ಸೂಟ್ ಇದೀಗ ಮೇಕ್ ಓವರ್ ಪಡೆದಿದೆ. ಹೊಸ ರೂಪದಿಂದ ಗ್ರಾಹಕರನ್ನು ಆಕರ್ಷಿಸುತ್ತಿದೆ. ಕೇವಲ ಒಂದೇ ಬಣ್ಣ ಅಥವಾ ಚೆಕÕ… ಡಿಸೈನ್ ಅಲ್ಲದೆ ಫ್ಲೋರಲ್ ಪ್ರಿಂಟ್ ಅಂದರೆ ಹೂವಿನ ಆಕೃತಿ ಉಳ್ಳ ವಿನ್ಯಾಸ ಮತ್ತು ಚಿತ್ರಗಳೂ ಮೂಡಿಬಂದಿವೆ. ಬಗೆಬಗೆಯ ಬಣ್ಣದ ಮತ್ತು ಚಿತ್ರವಿಚಿತ್ರ ವಿನ್ಯಾಸದ ಸೂಟ್‌ಗಳೂ ಲಭ್ಯ ಇವೆ. ಸೂಟ್ ಮೇಲೆ ಹೂವು, ಬಳ್ಳಿ, ತಾರೆಗಳನ್ನು ಮೂಡಿಸಿದ್ದಾರೆ ಅನೇಕ ವಸ್ತ್ರವಿನ್ಯಾಸಕರು. ಇಂಥ ಕಲರ್‌ಫುಲ್ ಸೂಟ್‌ಗಳನ್ನು ಪಾರ್ಟಿ, ಶಾಪಿಂಗ್ ಮತ್ತು ಇತರ ಕ್ಯಾಶುವಲ್ ಔಟಿಂಗ್‌ಗೆ ಹಾಕಿಕೊಳ್ಳಬಹುದು. ಉದ್ಯೋಗಸ್ಥ ಮಹಿಳೆಯರನ್ನು ಈ ಉಡುಗೆ ಹೆಚ್ಚಾಗಿ ಸೆಳೆಯುತ್ತಿದೆ.