ಸೂರಜ್ ಕುಂಡ್(ಹರ್ಯಾಣ): ಕೇಂದ್ರ ಗೃಹ ಸಚಿವಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ನಿಗದಿತ ಸಮಯ ಮೀರಿ ದೀರ್ಘ ಭಾಷಣ ಮಾಡಿದ್ದಕ್ಕೆ ವೇದಿಕೆಯಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಕರೆನ್ಸಿ ನೋಟಿನಲ್ಲಿ ಲಕ್ಷ್ಮಿ ಮತ್ತು ಗಣೇಶನ ಚಿತ್ರ: ಪ್ರಧಾನಿ ಮೋದಿಗೆ ಪತ್ರಬರೆದ ಕೇಜ್ರಿವಾಲ್
ಕಾರ್ಯಕ್ರಮದಲ್ಲಿ ಸಚಿವ ಅನಿಲ್ ವಿಜ್ ಗೆ ಮಾತನಾಡಲು ಕೇವಲ ಐದು ನಿಮಿಷಗಳ ಕಾಲಾವಕಾಶ ನಿಗದಿಪಡಿಸಲಾಗಿತ್ತು. ಆದರೆ ಅನಿಲ್ ವಿಜ್ ಎಂಟೂವರೆ ನಿಮಿಷಗಳ ಕಾಲ ಭಾಷಣ ಮುಂದುವರಿಸಿದ ಸಂದರ್ಭದಲ್ಲಿ ಅಮಿತ್ ಶಾ ನಾಲ್ಕು ಬಾರಿ ಭಾಷಣ ನಿಲ್ಲಿಸುವಂತೆ ಸೂಚನೆ ನೀಡಿದ್ದು, ಕೊನೆಗೆ ಶಾ ಮಧ್ಯಪ್ರವೇಶಿಸಿ ಭಾಷಣ ಮೊಟಕುಗೊಳಿಸುವಂತೆ ತರಾಟೆಗೆ ತೆಗೆದುಕೊಂಡಿದ್ದರು.
ಹರ್ಯಾಣದ ಸೂರಜ್ ಕುಂಡ್ ನಲ್ಲಿ ಕೇಂದ್ರ ಗೃಹ ಸಚಿವಾಲಯ ಕಾರ್ಯಾಗಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಈ ಸಂದರ್ಭದಲ್ಲಿ ರಾಜ್ಯ ಗೃಹ ಸಚಿವ ಅನಿಲ್ ವಿಜ್ ಗೆ ಸ್ವಾಗತ ಭಾಷಣ ನಿಗದಿಪಡಿಸಲಾಗಿತ್ತು. ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮುಖ್ಯ ಭಾಷಣಕಾರರಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷ ಭಾಷಣ ನಿಗದಿಪಡಿಸಲಾಗಿತ್ತು.
ಅನಿಲ್ ವಿಜ್ ಸ್ವಾಗತ ಭಾಷಣದಲ್ಲಿ ಶಾ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ಅಭಿನಂದಿಸಿದ್ದು, ನಂತರ ಹರ್ಯಾಣದ ಇತಿಹಾಸ, ಹಸಿರು ಕ್ರಾಂತಿಗೆ ರಾಜ್ಯದ ಕೊಡುಗೆ, ಒಲಿಂಪಿಕ್ಸ್ ನಲ್ಲಿ ರಾಜ್ಯದ ಸಾಧನೆ, ರಾಜ್ಯ ಸರ್ಕಾರದ ಮೂಲಭೂತ ಸೌಕರ್ಯಗಳ ಬಗ್ಗೆ ಮಾತನಾಡತೊಡಗಿದ್ದರು.
ಕೆಲವು ಆಸನಗಳ ಅಂತರದಲ್ಲಿದ್ದ ಅಮಿತ್ ಶಾ ಅವರು ವಿಜ್ ಮಾತುಗಳನ್ನು ಆಲಿಸಿದ ನಂತರ ಭಾಷಣ ಶೀಘ್ರವೇ ಕೊನೆಗೊಳಿಸುವಂತೆ ಚೀಟಿ ಕಳುಹಿಸಿದ್ದರು. ಆದರೂ ವಿಜ್ ಭಾಷಣ ಮುಂದುವರಿಸಿದಾಗ, ಶಾ ಮೈಕ್ ಹಿಡಿದು ಭಾಷಣ ನಿಲ್ಲಿಸುವಂತೆ ವಿಜ್ ಗೆ ಸೂಚನೆ ನೀಡಿದ್ದರು. ಆದರೆ ಸಚಿವ ವಿಜ್ ಮತ್ತೆ ಭಾಷಣ ಮುಂದುವರಿಸಿದ್ದರು…
ಆಗ ಶಾ, ಅನಿಲ್ ಜೀ ನಿಮಗೆ ಕೇವಲ ಐದು ನಿಮಿಷ ಸಮಯ ನಿಗದಿಪಡಿಸಲಾಗಿದೆ, ಆದರೂ ನೀವು ಈಗಾಗಲೇ ಎಂಟೂವರೆ ನಿಮಿಷ ಮಾತನಾಡಿದ್ದೀರಿ…ದಯವಿಟ್ಟು ನಿಮ್ಮ ಭಾಷಣ ಮುಕ್ತಾಯಗೊಳಿಸಿ, ಇದು ದೀರ್ಘ ಭಾಷಣ ಮಾಡುವ ವೇದಿಕೆಯಲ್ಲ. ಕೂಡಲೇ ಮುಕ್ತಾಯಗೊಳಿಸಿ ಎಂದಾಗ ಇನ್ನೊಂದು ಅಂಶವಿದೆ ಕೆಲವೇ ಸೆಕೆಂಡುಗಳಲ್ಲಿ ಭಾಷಣ ಮುಗಿಸುತ್ತೇನೆ ಎಂದು ವಿಜ್ ಮನವಿ ಮಾಡಿಕೊಂಡರು.
ಶಾ ಅನುಮತಿ ನೀಡಿದಾಗ ವಿಜ್ ಅವರು ಸಾಧನೆಗಳ ಪಟ್ಟಿಯನ್ನು ಓದಲು ಆರಂಭಿಸಿದ್ದರು. ಆಗ ಶಾ ಕೋಪಗೊಂಡು ಅನಿಲ್ ಜೀ ದಯವಿಟ್ಟು ಕ್ಷಮಿಸಿ, ನಿಮ್ಮ ಭಾಷಣ ಕೂಡಲೇ ನಿಲ್ಲಿಸಿ ಎಂದು ಖಡಕ್ ಸೂಚನೆ ಕೊಟ್ಟ ನಂತರ ಮುಕ್ತಾಯಗೊಳಿಸಿದ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.