Advertisement

ನಿಮ್ಮ ಭಾಷೆಯಲ್ಲೇ ಉತ್ತರ ಕೊಡಬೇಕಾಗುತ್ತೆ: ಈಶ್ವರಪ್ಪ

06:30 AM Aug 12, 2018 | Team Udayavani |

ಮೈಸೂರು: “ನನ್ನನ್ನು ಪೆದ್ದ ಎಂದು ಕರೆದಿರುವ ಸಿದ್ದರಾಮಯ್ಯನವರು ತಮ್ಮ ನಾಲಗೆಯನ್ನು ಬಿಗಿ ಹಿಡಿದು ಮಾತಾಡಲಿ. ಇನ್ನೊಂದು ಸಾರಿ ಈ ರೀತಿ ಮಾತನಾಡಿದರೆ ಅವರಿಗೆ ಯಾವ ಭಾಷೆಯಲ್ಲಿ ಉತ್ತರ ಕೊಡಬೇಕೆಂದು ನನಗೂ ಗೊತ್ತಿದೆ’ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Advertisement

ನಗರದಲ್ಲಿ ಶನಿವಾರ ಮಾತನಾಡಿ, “ಏಕವಚನದಲ್ಲಿ ನಿಮ್ಮಂತೆ ನಾನೂ ಮಾತನಾಡಬಹುದು. ನಿಮಗಿಂತ ಕೆಟ್ಟದಾಗಿ ಮಾತನಾಡಲೂ ಬರುತ್ತೆ. ಆದರೆ, ಅದು ನನ್ನ ಪಕ್ಷದ ಸಂಸ್ಕೃತಿಯಲ್ಲ. ಈ ರೀತಿ ಏಕವಚನದಲ್ಲಿ ಮಾತನಾಡಿಯೇ ಸರ್ಕಾರ ಕಳೆದುಕೊಂಡಿರಿ. ಹಿಂದೆ ಕೊರಟಗೆರೆಯಲ್ಲಿ ಪರಮೇಶ್ವರ್‌ರನ್ನು ನೀವು ಸೋಲಿಸಿದ್ರೆ, ಈಗ ಪರಮೇಶ್ವರ್‌ ಚಾಮುಂಡೇಶ್ವರಿಯಲ್ಲಿ ನಿಮ್ಮನ್ನು ಸೋಲಿಸಿದ್ರು. ಸೋತ ಮೇಲೂ ನಿಮಗೆ ಬುದ್ಧಿ ಬರಲಿಲ್ಲವಲ್ಲಾ, ಇನ್ಯಾವಾಗ ನಿಮಗೆ ಬುದ್ಧಿ ಬರುತ್ತೆ. ನನ್ನನ್ನು ಟೀಕಿಸಿದರೆ ನಾಯಕರಾಗಬಹುದೆಂದು ಕೆಲವರು ಅಂದುಕೊಂಡಿದ್ದಾರೆ ಎನ್ನಲು ನೀವೇನು ಇಂಟರ್‌ ನ್ಯಾಷನಲ್‌ ಲೀಡರ್ರಾ’ ಎಂದು ಸಿದ್ದರಾಮಯ್ಯನವರನ್ನು ಜರಿದರು.

ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತು ಮೂಲೆಗುಂಪಾದವರನ್ನು ರಾಷ್ಟ್ರೀಯ ನಾಯಕರನ್ನಾಗಿಸಲು ಹೊರಟಿರುವುದು ಕಾಂಗ್ರೆಸ್‌ ಪಕ್ಷದ ದುರಂತ. ಅಧಿಕಾರ ಕಳೆದುಕೊಂಡಿರುವ ಸಿದ್ದರಾಮಯ್ಯ ಹುಚ್ಚರಂತೆ ಆಡುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುತ್ತಾ ಅವರು ಗುಮಾಸ್ತರ ಕೆಲಸ ಮಾಡುತ್ತಿದ್ದಾರೆಂದು ಟೀಕಿಸಿದರು.

ಸರ್ಕಾರಕ್ಕೆ ಎಚ್ಚರಿಸಲಿ
ರಾಜ್ಯದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ವ್ಯವಸ್ಥಿತವಾಗಿ ವರ್ಗಾವಣೆ ದಂಧೆ ನಡೆಸುತ್ತಿರುವ ರಾಜ್ಯ ಸರ್ಕಾರಕ್ಕೆ ಚುನಾವಣಾ ಆಯೋಗ ಎಚ್ಚರಿಕೆ ಕೊಡಬೇಕು. ಸರ್ಕಾರ ವ್ಯವಸ್ಥಿತವಾಗಿ ತಹಶೀಲ್ದಾರ್‌, ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹಾಗೂ ಸಮಾಜ ಕಲ್ಯಾಣ ಇಲಾಖೆಯ “ಸಿ’ ದರ್ಜೆ ನೌಕರರನ್ನು ವರ್ಗಾವಣೆ ಮಾಡುತ್ತಿದೆ. ಈ ಮೂರು ಇಲಾಖೆಗಳ ಮಂತ್ರಿಗಳು ಕಾಂಗ್ರೆಸ್‌ನವರೇ ಆಗಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರಿಗೆ ಸಂವಿಧಾನ, ಕಾನೂನು ಗೊತ್ತಿಲ್ಲವೇ? ಇಬ್ಬರೂ ದಡ್ಡರಾ, ಪೆದ್ದರಾ ಎಂದು ಹರಿಹಾಯ್ದರು.

ಕುಮಾರಸ್ವಾಮಿಯವರ ಪದಗ್ರಹಣ ಸಂದರ್ಭದಲ್ಲಿ ಬೇರೆ, ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು, ವಿವಿಧ ಪಕ್ಷಗಳ ನಾಯಕರನ್ನು ಜೆಡಿಎಸ್‌ ವತಿಯಿಂದ ಕರೆದು ಸರ್ಕಾರದ ವೆಚ್ಚದಲ್ಲಿ ಆತಿಥ್ಯ ನೀಡಲಾಗಿದೆ. ಲಕ್ಷಾಂತರ ರೂ.ಬಿಲ್‌ ಪಾವತಿಸಿ ಲೂಟಿ ಹೊಡೆಯಲಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಯವರು ಕೂಡಲೇ ತನಿಖೆ ನಡೆಸಬೇಕು. ಲೂಟಿಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕು.
– ಕೆ.ಎಸ್‌.ಈಶ್ವರಪ್ಪ, ಮಾಜಿ ಡಿಸಿಎಂ

Advertisement
Advertisement

Udayavani is now on Telegram. Click here to join our channel and stay updated with the latest news.

Next