ನಿನ್ನ ಸರಹದ್ದಿಗೆ ಕಾಲೂರಿದೆ ನೋಡು, ಆಗಿನಿಂದ ಬದುಕಿಗೆ ಅದೆಂಥದೋ ಕಳೆ ಮತ್ತು ಕಳಕಳಿ. ಇನ್ಮೆಲೆ ನಾನು, ನಿನ್ನ ಒಲವ ಪಹರಿಯ ಗಡಿಯೊಳಗೆ! ನಮ್ಮ ಪ್ರೀತಿ ಮತ್ತಷ್ಟು ಬೆಚ್ಚಗೆ. ನೋಡು, ನನ್ನ ಕೈಯೊಳಗಿನ ಬಟ್ಟಲಲ್ಲಿ ಭರ್ತಿ ಧೈರ್ಯ ತುಂಬಿಕೊಂಡುಬಿಟ್ಟಿದೆ. ಹೂವಿನ ಸದ್ದಿಗೂ ಬೆಚ್ಚುತ್ತಿದ್ದವಳಿಗೆ ನಿನ್ನ ಪ್ರೀತಿ ಧೈರ್ಯ ಕೊಟ್ಟಿದೆ. ಇದು ಈ ಜನ್ಮ ಪೂರ್ತಿ ಉಳಿಯುತ್ತದೆ ಬಿಡು.
ನಾನು ನಿನ್ನ ಬಲೆಗೆ ಬಿದ್ದ ಮೊಲವಲ್ಲ ಕಣೋ! ನಿನ್ನ ಕಣ್ಣ ಹೊಳಪು ಕಂಡು ನಡೆದು ಬಂದ ನವಿಲು. ನನಗೆ ಬೇಕಾದದ್ದು ನೀನು. ನಾನು ಬಿಚ್ಚುವ ಕನಸಿನ ಗರಿಗಳಲ್ಲಿ ಕೇವಲ ನಿನ್ನದೇ ಚಿತ್ರಗಳಿರಬೇಕು. ನೀನು ಬಿಡಿಸುವ ಹಸಿರು ಕಣ್ಣುಗಳಲ್ಲಿ ನನ್ನದೇ ಚಿತ್ರವಿರಬೇಕು. ಆ ಚಿತ್ರದ ಕಣ್ಣಗಳಲ್ಲಿ ಬರೀ ನೀನಿರುತ್ತೀಯ. ಬೇಕಾದರೆ ದಿಟ್ಟಿಸಿ ನೋಡಿ ಹುಡುಕು. ನನ್ನ ಹೃದಯದೊಳಗೆ ಕವನ ಬರಿ. ಬೇಕಾದಷ್ಟು ಪ್ರೇಮ ಪತ್ರಗಳನ್ನು ಗೀಚು. ಬರೆದ ಕವನಗಳಿಗೆ ರಾಗ ಕಟ್ಟಿ ಹಾಡು. ಅದರ ಜೊತೆಗೇ ಎಂದೂ ಬಾಡದಂಥ ಒಲವಿನ ಗಿಡವನ್ನೂ ನೆಡು, ನಮ್ಮ ಪ್ರೀತಿಯದು.
ನಿರೀಕ್ಷೆಗಳು ಅತಿ ಆಯ್ತು ಅಂದೆಯಾ? ಪ್ರೀತಿಗೆ ಸೋತವಳಿಗೆ ಇಷ್ಟು ಆಸೆಗಳು ಕೂಡ ಇರಬಾರದ? ಅಷ್ಟಕ್ಕೂ ಕೇವಲ ಇವು ನನ್ನ ಆಸೆಗಳಲ್ಲ. ನಮ್ಮ ಪಾಲಿಗೆ ಈ ಬದುಕು ಕೊಟ್ಟು ಹೋದ ಈ ಪ್ರೀತಿಯಲ್ಲಿ ಪ್ರತಿಯೊಂದನ್ನು ನಾವು ಹೀಗೆ ಬಡ್ಡಿ ಸಮೇತ ದುಡಿಸಿಕೊಳ್ಳಬೇಕು ಅಲ್ವಾ?
ರೇಷನ್ ಕಾರ್ಡ್, ಕ್ಯೂ ನಿಂತು ಪಡೆಯಬೇಕಾದ ಸೀಮೆಎಣ್ಣೆ, ಮಳೆ ಬಂದರೆ ಕೆರೆಯಾಗುವ ಮನೆ, ಕಣ್ಣುಗಳಲ್ಲಿ ಮಕ್ಕಳ ಭವಿಷ್ಯವನ್ನಷ್ಟೇ ಕೂರಿಸಿಕೊಂಡು ಕಾಯುವ ಅಮ್ಮ, ಬೇಜವಾಬ್ದಾರಿ ಅಣ್ಣ, ಹಿಂಸೆ ಎನಿಸುವ ನೋಟಗಳು… ಇವೆಲ್ಲದರ ಮಧ್ಯೆ, ನಿನ್ನ ಕಣ್ಣ ಪಹರೆಯೊಳಗೆ ಕೂತು ಸಾವರಿಸಿಕೊಳ್ಳುವುದು ಅದೆಂಥ ಸ್ವರ್ಗೀಯ ಖುಷಿ ಗೊತ್ತಾ? ತೀರಾ ಬದುಕು ಮುಗಿದೇ ಹೋಯಿತು ಅಂದಾಗ, ಭರವಸೆಯ ಹಗ್ಗ ಎಸೆದು ಎಳೆದುಕೊಂಡು ಬಿಟ್ಟೆ ನೀನು. ನೀ ಬೀಸಿದ ಹಗ್ಗವನ್ನು ನಾನು ಬರೀ ನನ್ನ ಬವಣೆಗಳಿಗೆ ರೋಸಿ, ಆಸರೆಗಾಗಿ ಹಿಡಿಯಲಿಲ್ಲ. ಬಸ್ಸಿನಲ್ಲಿ ನನ್ನ ಪಕ್ಕ ಕೂತಿದ್ದ ನೀನು, ನಿನ್ನ ಮೌನ, ಸಭ್ಯತೆ, ಆ ಕುರುಚಲು ಗಡ್ಡ, ನೀಲಿ ಕಣ್ಣು, ಮಡಚಿದ ತೋಳು, ನಿನ್ನ ದನಿ ಸಾಯುವಷ್ಟು ಇಷ್ಟವಾದವು. ನಿನ್ನೆಡೆಗೆ ನವಿಲಿನಂತೆ ಕುಣಿದು ಬರದೇ ನನಗೆ ಇರಲಾಗಲಿಲ್ಲ. ಸೋಲು ಕೂಡ ಅದ್ಭುತವೆನಿಸಿದ್ದು ನನಗೆ ಇಲ್ಲಿ ಮಾತ್ರ!
ನೀನು ಇಳಿಯುವಾಗ ತಿಳಿದರೂ ತಿಳಿಯದಂತೆ ನಗು ಬೀರಿ ಹೋದೆ. ಮಾತು, ಹೆಸರು, ಪರಿಚಯ, ಅಭಿರುಚಿಗಳ ಅರಿವಿಲ್ಲದೆಯೂ ಅದ್ಹೇಗೆ ಮನಸ್ಸುಗಳು ಬೆಸೆದವು ನೋಡು. ಅದಕ್ಕೇ ಪ್ರಪಂಚದಲ್ಲಿ ಪ್ರೀತಿಯೊಂದೇ ಪವಿತ್ರ ಅನ್ನೋದು. ಅದಕ್ಕೆಂದೇ ಅದು ಎಲ್ಲವನ್ನೂ ಮೀರುತ್ತದೆ. ಕಳೆದ ಜನ್ಮ ನೆನಪಿಲ್ಲ, ಮುಂದಿನ ಜನ್ಮ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಜನ್ಮಕ್ಕೆ ನೀನಿರಬೇಕು. ಅಷ್ಟೆ…
ಇಂತಿ ನಿನ್ನ
ಸಹ ಪ್ರಯಾಣಿಕ
ಸದಾಶಿವ್ ಸೊರಟೂರು